Karnataka Budget 2024: ಬೆಂಗಳೂರು ಬಿಸಿನೆಸ್ ಕಾರಿಡರ್, 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೆ ನಿರ್ಧಾರ

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15ನೇ ಬಜೆಟ್ ಮಂಡನೆ ಮಾಡುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿಗೂ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಬೆಂಗಳೂರು ಬಿಸಿನೆಸ್ ಕಾರಿಡರ್, 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.


ಬೆಂಗಳೂರು, ಫೆ.16: ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು 15ನೇ ಬಜೆಟ್ ಮಂಡನೆ ಮಾಡುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿಗೂ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಬೆಂಗಳೂರು ಬಿಸಿನೆಸ್ ಕಾರಿಡರ್ (Bengaluru Business Corridor), 250 ಮೀಟರ್ ಎತ್ತರದ ಸ್ಕೈಡೆಕ್ (Skydeck) ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರು ಬಿಸಿನೆಸ್ ಕಾರಿಡರ್ ರೂಪಿಸಲು ಬಜೆಟ್‌ನಲ್ಲಿ ನಿರ್ಧಾರ ಮಾಡಲಾಗಿದ್ದು, 73 ಕಿ.ಮೀ ಉದ್ದದ ರಸ್ತೆಯನ್ನು 27 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಪಿಪಿಪಿ ಮಾದರಿಯಲ್ಲಿ ಆರ್‌ಎಫ್‌ಪಿ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಅಲ್ಲದೆ, ಬೆಂಗಳೂರಿನಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಬೆಂಗಳೂರಿನಲ್ಲಿ ಆಕರ್ಷಕ ಪ್ರವಾಸಿ ತಾಣ ನಿರ್ಮಾಣಕ್ಕೆ ಯೋಜನೆ ಮಾಡಲಾಗಿದೆ. ನಗರಾಭಿವೃದ್ಧಿ ಅಂಗಸಂಸ್ಥೆ ಬಿಬಿಎಂಪಿ, ಬಿಎಂಆರ್‌ಸಿಎಲ್‌, ಬಿಡಬ್ಲ್ಯುಎಸ್‌ಎಸ್‌ಬಿ, ಬಿಡಿಎನಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ. 

2025ರೊಳಗೆ ಹೊಸದಾಗಿ 44 ಕಿ.ಮೀ ಮೆಟ್ರೋ ಮಾರ್ಗ ಸೇರ್ಪಡೆ, ಮೆಟ್ರೋ ಯೋಜನೆ ಹಂತ-2, 2ಎ ಯೋಜನೆಯಡಿ ಹೊರವರ್ತುಲ ರಸ್ತೆ, ವಿಮಾನ ನಿಲ್ದಾಣ ಮಾರ್ಗವನ್ನು 2026ಕ್ಕೆ ಪೂರ್ಣ, ಅಂದಾಜು 15 ಸಾವಿರದ 661 ಕೋಟಿ ವೆಚ್ಚದಲ್ಲಿ ನಮ್ಮ ಮೆಟ್ರೋ ಹಂತ 3ಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕೇಂದ್ರ ಸರ್ಕಾರದಿಂದಲೂ ಅನುಮೋದನೆ ನಿರೀಕ್ಷೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಿಎಂಟಿಸಿಗೆ ಹೊಸದಾಗಿ 1334 ಹೊಸ ಇವಿ ಬಸ್‌ ಖರೀದಿಗೆ ನಿರ್ಧಾರ ಮಾಡಲಾಗಿದ್ದು, ಜೊತೆಗೆ ಬಿಎಂಟಿಸಿಗೆ 820 ಬಿಎಸ್‌ 6 ಡೀಸೆಲ್‌ ಬಸ್‌ ಸೇರ್ಪಡೆ ಮಾಡಲಾಗುವುದು. ಮಹಿಳೆಯರ ಸುರಕ್ಷತೆಗಾಗಿ ಬಿಎಂಟಿಸಿ ಬಸ್‌ಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್‌ ಹೊಂದಿರುವ ಌಪ್‌ ಅನುಷ್ಠಾನ ಮಾಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

ರಾತ್ರಿ 1ರ ವರೆಗೂ ವ್ಯಾಪಾರ ವಹಿವಾಟು ವಿಸ್ತರಣೆ

ಸರ್ವಜ್ಞನಗರದಲ್ಲಿರುವ ಸರ್ವಜ್ಞ ಉದ್ಯಾನವವನ್ನು ಬಿಬಿಎಂಪಿ ಸಹಯೋಗದೊಂದಿಗೆ ಅಭಿವೃದ್ಧಿ ಮಾಡಲಾಗುವುದು. ಬೆಂಗಳೂರು ಹಾಗೂ 10 ಪಾಲಿಕೆಗಳಲ್ಲಿ ರಾತ್ರಿ 1ರ ವರೆಗೂ ವ್ಯಾಪಾರ ವಹಿವಾಟು ವಿಸ್ತರಣೆ ಮಾಡಲಾಗುವುದು, ವಾಣಿಜ್ಯ ಮತ್ತು ವ್ಯಾಪಾರ ದೃಷ್ಟಿಯಿಂದ ವಹಿವಾಟು ನಿರ್ಬಂಧ ತೆರವು ಮಾಡಲಾಗುವುದು ಎಂದು ಘೋಷಿಸಲಾಗಿದೆ.

2024ರ ಮೇನಲ್ಲಿ ಕಾವೇರಿ ಹಂತ-5 ಕಾರ್ಯಾರಂಭಕ್ಕೆ ನಿರ್ಧಾರ ಮಾಡಲಾಗುವುದು, 5550 ಕೋಟಿ ರೂ ವೆಚ್ಚದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯಿಂದ ಯೋಜನೆ, ಪ್ರತಿ ದಿನ 12 ಲಕ್ಷ ಜನರಿಗೆ 110 ಲಕ್ಷ ಲೀಟರ್ ಕುಡಿಯುವ ನೀರು ಪೂರೈಕೆ ಮಾಡಲಾಗುವುದು, ಕಾವೇರಿ ಹಂತ-5ರಡಿ ಡಿಸೆಂಬರ್ 24ರಲ್ಲಿ ಒಳಚರಂಡಿ ಕಾಮಗಾರಿ ಪೂರ್ಣ ಮಾಡಲಾಗುವುದು, ಇದರಿಂದ 228 ಕಿ.ಮೀ ವ್ಯಾಪ್ತಿಯಲ್ಲಿ ಒಳಚರಂಡಿ ಕೊಳವೆ ಅಳವಡಿಕೆ ಮಾಡಿದಂತಾಗಲಿದೆ. 7 ತ್ಯಾಜ್ಯ ನೀರು ಸಂಸ್ಕರಣಾ ಘಟಕಗನ್ನು 441 ಕೋಟಿ ಮೊತ್ತದಲ್ಲಿ ಉನ್ನತೀಕರಣ ಮಾಡಲಾಗುವುದು. ಇದರಿಂದ 268 ಎಂಎಲ್​ಡಿ ತ್ಯಾಜ್ಯ ನೀರು ನಿತ್ಯ ಸಂಸ್ಕರಿಸಿ ಮರುಬಳಕೆಗೆ ಅನುಕೂಲವಾಗಲಿದೆ.

ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಯ 2ನೇ ಹಂತವನ್ನು 200 ಕೋಟಿ ಮೊತ್ತದಲ್ಲಿ ಪ್ರಾರಂಭ ಮಾಡಲಾಗುವುದು. ತ್ಯಾಜ್ಯಗಳ ವಿಲೇವಾರಿ ವ್ಯವಸ್ಥಿತವಾಗಿ ನಿರ್ವಹಿಸಲು 4 ವಲಯಗಳಾಗಿ ವಿಂಗಡಣೆ ಮಾಡಲಾಗುವುದು, ಪ್ರತಿಯೊಂದು ವಲಯಕ್ಕೂ ನುರಿತ ಸಂಸ್ಥೆಯನ್ನು ಪಾರದರ್ಶಕವಾಗಿ ನೇಮಕ ಮಾಡಲಾಗುವುದು, ನಗರದ ಹೊಲವಲಯ ನಾಲ್ಕು ಕಡೆ 50 ರಿಂದ 100 ಎಕರೆ ಜಮೀನು ಗುರುತಿಸುವುದು, 30 ವರ್ಷಗಳ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್​ನಲ್ಲಿ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ವಾತಾವರಣದ ಸ್ವಚ್ಛತೆಗೆ ಕ್ರಮ

ಬಿಬಿಎಂಪಿ ಅರಣ್ಯ, ಕೆರೆ ಮತ್ತು ತೋಟಗಾರಿಕೆ ವಿಭಾಗವನ್ನು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ನಿರ್ವಹಣಾ ವಿಭಾಗವೆಂದು ಮರುನಾಮಕರಣ ಮಾಡಿ ಕಾರ್ಯವ್ಯಾಪ್ತಿ ವಿಸ್ತರಣೆ ಮಾಡಲಾಗುವುದು. ಬೆಂಗಳೂರು ನಗರದಲ್ಲಿ ವಾತಾವರಣದ ಸ್ವಚ್ಛತೆಗಾಗಿ ಕ್ರಮಕೈಗೊಳ್ಳಲಾಗುವುದು, ಮರಗಳ ಗಣತಿ, ಕೆರೆ ಮತ್ತು ಉದ್ಯಾನವನಗಳ ತಂತ್ರಾಂಶ ಆಧರಿತ ಮೇಲ್ವಿಚಾರಣೆ ಮಾಡಲಾಗುವುದು. ಕೆರೆ ಮತ್ತು ಉದ್ಯಾನಗಳ ಅಭಿವೃದ್ಧಿಗಳ ಸಾರ್ವಜನಿಕ ಸಹಭಾಗಿತ್ವ ಹೆಚ್ಚಿಸಲು ಪ್ರತ್ಯೇಕ ನೀತಿ ರೂಪಿಸಲಾಗುವುದು ಎಂದರು.

Post a Comment

Previous Post Next Post