ಕೋಟ್ಯಾಂತರ ರುಪಾಯಿ ಮೌಲ್ಯದ ಅಡಿಕೆ ಕಳ್ಳತನ: ಮಧ್ಯಪ್ರದೇಶದ ಮೂವರ ಬಂಧನ

 ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಮಧ್ಯಪ್ರದೇಶ ಮೂಲದ ಮೂವರನ್ನು ಬಂಧಿಸಿ ಅವರಿಂದ 1.17 ಕೋಟಿ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.

       ಪ್ರಕರಣ ಬೇಧಿಸಿದ ಪೊಲೀಸರ ತಂಡ.

By : Rekha.M
Online Desk

ಶಿವಮೊಗ್ಗ: ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಮಧ್ಯಪ್ರದೇಶ ಮೂಲದ ಮೂವರನ್ನು ಬಂಧಿಸಿ ಅವರಿಂದ 1.17 ಕೋಟಿ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಅಕ್ಟೋಬರ್ 20 ರಂದು ಸಾಗರ ತಾಲೂಕಿನ ಬಲಸಗೋಡು ಗ್ರಾಮದ ಗೋದಾಮಿನಲ್ಲಿ ಅಡಿಕೆ ಕಳ್ಳತನ ಮಾಡಿದ್ದರು.

ಆರೋಪಿಗಳು 350 ಚೀಲಗಳಲ್ಲಿ ಇರಿಸಲಾಗಿದ್ದ 24,500 ಕೆಜಿ ಅಡಿಕೆಯನ್ನು ಕದ್ದು ಗುಜರಾತ್‌ನ ಅಹಮದಾಬಾದ್‌ಗೆ ರವಾನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪತ್ತೆಗೆ ಎಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ವಿ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಪ್ರಕರಣದ ತನಿಖೆಯು ಪೊಲೀಸರನ್ನು ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಹಾಪುರ, ಪುಣೆ, ಮುಂಬೈ ಮತ್ತು ಧುಲೆ, ಗುಜರಾತ್‌ನ ಸೂರತ್, ಅಹಮದಾಬಾದ್ ಮತ್ತು ವಡೋದರಾ ಮತ್ತು ಮಧ್ಯಪ್ರದೇಶದ ಇಂದೋರ್ ಖಜ್ರಾನಾ, ಉಜ್ಜಯಿನಿ ಮತ್ತು ರಾಜ್‌ಗಢಕ್ಕೆ ಕರೆದೊಯ್ದಿತ್ತು.

ಅಂತಿಮವಾಗಿ, ತಂಡವು ಇಂದೋರ್ ನಿವಾಸಿ ರಜಾಕ್ ಖಾನ್ ಅಲಿಯಾಸ್ ಸಲೀಂ ಖಾನ್ (65), ಘಟಾಬಿಲೋಡ್ ಜಿಲ್ಲೆಯ ತೇಜು ಸಿಂಗ್ (42) ಮತ್ತು ಮಧ್ಯಪ್ರದೇಶದ ಶಹಾಜಾಪುರ ನಿವಾಸಿ ಅನೀಸ್ ಅಬ್ಬಾಸಿ (55) ಅವರನ್ನು ಬೈಪಾಸ್‌ನಲ್ಲಿರುವ ಧಾಬಾ ಬಳಿ ಬಂಧಿಸಿದೆ.

ಆರೋಪಿಗಳಿಂದ ಪೊಲೀಸರು ರೂ.1.17 ಕೋಟಿ ಮೌಲ್ಯದ ಅಡಿಕೆ ಹಾಗೂ 25 ಲಕ್ಷ ಮೌಲ್ಯದ ಟ್ರಕ್ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನ ಪೊಲೀಸರಿಗೂ ಬೇಕಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ನಡುವೆ ಪ್ರಕರಣ ಬೇಧಿಸಿದ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿಕೆ ಅವರು ಬಹುಮಾನ ಘೋಷಿಸಿದ್ದಾರೆ.

Post a Comment

Previous Post Next Post