ಅಯೋಧ್ಯೆಗೆ ಹೊಸ ಕಳೆ: ನವೀಕರಣಗೊಂಡ ರೈಲ್ವೆ ನಿಲ್ದಾಣ, ಏರ್‌ಪೋರ್ಟ್‌ ಉದ್ಘಾಟನೆ

 ಅಯೋಧ್ಯಾ: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯಾದಲ್ಲಿ ನವೀಕರಣಗೊಂಡ ಅಯೋಧ್ಯಾ ಧಾಮ್ ರೈಲ್ವೆ ನಿಲ್ದಾಣ ಹಾಗೂ ಹೊಸ ವಿಮಾನ ನಿಲ್ದಾಣವನ್ನು ಶನಿವಾರ ಉದ್ಘಾಟಿಸಿದರು. ಜನವರಿ 22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೂ ಮುನ್ನ ಅಯೋಧ್ಯೆಯಲ್ಲಿ ಭರ್ಜರಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರಕಿದೆ.


ಅಯೋಧ್ಯೆಗೆ ಬಂದಿಳಿದಿ ಪ್ರಧಾನಿ, ಹೊಸ ರೂಪ ಪಡೆದಿರುವ ರೈಲ್ವೆ ನಿಲ್ದಾಣದ ಕಡೆಗೆ ತೆರಳುವಾಗ ರೋಡ್‌ ಶೋದಲ್ಲಿ ಭಾಗವಹಿಸಿದರು. ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೂ ರಸ್ತೆಗಳ ಎರಡೂ ಬದಿಗಳಲ್ಲಿ ಸೇರಿದ್ದ ಜನರು, ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದರು. 1400ಕ್ಕೂ ಅಧಿಕ ಕಲಾವಿದರು ಈ ವೇಳೆ ಜಾನಪದ ಕಲೆಗಳನ್ನು ಪ್ರದರ್ಶಿಸಿದರು. 'ರಾಮ ಪಥ' ಎಂದು ಕರೆದಿರುವ ಮಾರ್ಗದಲ್ಲಿ 40 ವೇದಿಕೆಗಳನ್ನು ನಿರ್ಮಿಸಲಾಗಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಧಾನಿ ಮೋದಿ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅದರಲ್ಲಿ 15,700 ಕೋಟಿ ರೂ.ಗೂ ಅಧಿಕ ಮೊತ್ತದ 46 ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಅಯೋಧ್ಯೆಯಲ್ಲಿ ನವೀಕರಣಗೊಂಡಿರುವ ರೈಲ್ವೆ ನಿಲ್ದಾಣದ ಉದ್ಘಾಟನೆ ಜತೆಗೆ, ಅಲ್ಲಿಂದಲೇ ಎರಡು ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು ಸೇರಿ ಎಂಟು ರೈಲುಗಳಿಗೆ ಹಸಿರು ನಿಶಾನೆ ಪ್ರದರ್ಶಿಸಿದರು.

ರೈಲ್ವೆ ನಿಲ್ದಾಣದ ವಿಶೇಷತೆ

ರೈಲ್ವೆ ನಿಲ್ದಾಣಕ್ಕೆ ಅಯೋಧ್ಯಾ ಧಾಮ ಎಂದು ಮರು ನಾಮಕರಣ ಮಾಡಲಾಗಿದೆ. ಮೂರು ಅಂತಸ್ತಿನ ಕಟ್ಟಡವನ್ನು 240 ಕೋಟಿ ರೂ ವೆಚ್ಚದಲ್ಲಿ ನವೀಕರಿಸಲಾಗಿದೆ. ಲಿಫ್ಟ್, ಎಲಿವೇಟರ್, ಕಾಯುವ ಸಭಾಂಗಣ, ವಿಶ್ರಾಂತಿ ಕೊಠಡಿ, ಶೌಚಾಲಯಗಳು, ಕುಡಿಯುವ ನೀರಿನ ಕೇಂದ್ರಗಳು, ವ್ಯಾಪಾರ ಮಳಿಗೆಗಳು ಮತ್ತು ಆಹಾರ ಪ್ಲಾಜಾಗಳನ್ನು ಒಳಗೊಂಡಿರುವ ಇದು 'ಹಸಿರು ಕಟ್ಟಡ'ವಾಗಿದೆ.

ನಿಲ್ದಾಣದ ಹೊರಭಾಗವು ಸಾಂಪ್ರದಾಯಿಕ ಶೈಲಿಯಲ್ಲಿದ್ದು, ಶ್ರೀರಾಮನ ಜೀವನ ಮತ್ತು ರಾಮಮಂದಿರದಿಂದ ಸ್ಫೂರ್ತಿಗೊಂಡ ವಿವಿಧ ಆಯಾಮಗಳ ವಿನ್ಯಾಸ ಹೊಂದಿದೆ. ಶ್ರೀರಾಮನ ಜತೆಗಿನ ಅಯೋಧ್ಯೆ ನಂಟನ್ನು ಬಿಂಬಿಸುವಂತೆ ಗೋಡೆಯ ಮೇಲೆ ಬಿಲ್ಲಿನ ಚಿತ್ರಣವಿದ್ದು, ಇಡೀ ರಚನೆಯು ರಾಜನ 'ಮುಕುಟ'ವನ್ನು (ಕಿರೀಟ) ಹೋಲುತ್ತದೆ. ಸುಮಾರು 7,200 ಚದರ ಮೀಟರ್ ವ್ಯಾಪ್ತಿಯಲ್ಲಿ ಇದನ್ನು ನಿರ್ಮಿಸಲಾಗಿದೆ.

ಇಡೀ ರೈಲ್ವೆ ನಿಲ್ದಾಣವು ವಿಮಾನ ನಿಲ್ದಾಣದ ಗುಣ ಲಕ್ಷಣ ಹೊಂದಿರುವುದು ವಿಶೇಷ. ಆಗಮನ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ಪ್ರದೇಶಗಳು, ಟ್ಯಾಕ್ಸಿ ನಿಲ್ದಾಣ, ವಿಸ್ತೃತ ಮುಖದ್ವಾರ ಹಾಗೂ ಗುಣಮಟ್ಟದ ಅನೇಕ ಸವಲತ್ತುಗಳನ್ನು ಇದು ಹೊಂದಿದೆ. ಎಲ್ಲಾ ಮಹಡಿಗಳಲ್ಲಿಯೂ ಅಗ್ನಿಶಾಮಕ ಸುರಕ್ಷತಾ ಸಾಧನಗಳನ್ನು ಅಳವಡಿಸಲಾಗಿದೆ.

Post a Comment

Previous Post Next Post