ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಮೋಹನ್ ನಾಯಕ್‍ಗೆ ಹೈಕೋರ್ಟ್‍ನಿಂದ ಷರತ್ತುಬದ್ಧ ಜಾಮೀನು ಮಂಜೂರು

 ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ಕಲ್ಪಿಸಿದ ಆರೋಪಕ್ಕೆ ಗುರಿಯಾಗಿರುವ ಎನ್‌ ಮೋಹನ್‌ ನಾಯಕ್‌ ಅಲಿಯಾಸ್‌ ಸಂಪಾಜೆಗೆ ಹೈಕೋರ್ಟ್‌ ಗುರುವಾರ ಜಾಮೀನು ಮಂಜೂರು ಮಾಡಿದೆ.

                                                                   ಗೌರಿ ಲಂಕೇಶ್
Posted By : Rekha.M
Source : Online Desk

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ಕಲ್ಪಿಸಿದ ಆರೋಪಕ್ಕೆ ಗುರಿಯಾಗಿರುವ ಎನ್‌ ಮೋಹನ್‌ ನಾಯಕ್‌ ಅಲಿಯಾಸ್‌ ಸಂಪಾಜೆಗೆ ಹೈಕೋರ್ಟ್‌ ಗುರುವಾರ ಜಾಮೀನು ಮಂಜೂರು ಮಾಡಿದೆ.

ಇಡೀ ಪ್ರಕರಣದಲ್ಲಿ 18 ಆರೋಪಿಗಳಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಲಿರುವ ಮೊದಲ ಆರೋಪಿ ಮೋಹನ್‌ ನಾಯಕ್‌ ಆಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಸಂಪಾಜೆಯ ಎನ್‌ ಮೋಹನ್‌ ನಾಯಕ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ಎನ್‌ ಮೋಹನ್‌ ನಾಯಕ್‌ ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತಾ ಖಾತರಿ ನೀಡಬೇಕು, ವಿಚಾರಣಾಧೀನ ನ್ಯಾಯಾಲಯ ಅನುಮತಿಸದ ಹೊರತು ಪ್ರತೀ ವಿಚಾರಣೆಗೂ ಆರೋಪಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಮತ್ತು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗುವಂತಿಲ್ಲ. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಇಂಥದ್ದೇ ಪ್ರಕರಣದಲ್ಲಿ ಭಾಗಿಯಾಗುವಂತಿಲ್ಲ ಎಂಬ ಷರತ್ತುಗಳನ್ನು ಹೈಕೋರ್ಟ್‌ ವಿಧಿಸಿದೆ.

“ಪ್ರಕರಣದಲ್ಲಿ ಒಟ್ಟಾರೆ 527 ಸಾಕ್ಷಿಗಳಿದ್ದು, ಇದುವರೆಗೆ 90 ಸಾಕ್ಷಿಗಳ ವಿಚಾರಣೆಯಾಗಿದೆ. 2021ರ ಅಕ್ಟೋಬರ್‌ 30ರಂದು ಆರೋಪಿಗಳ ವಿರುದ್ಧ ಆರೋಪ ನಿಗದಿಯಾಗಿದೆ. ಕಳೆದ ಎರಡೂ ವರ್ಷಗಳಿಗೂ ಹೆಚ್ಚು ಕಾಲದಿಂದ 90 ಸಾಕ್ಷಿಗಳನ್ನು ಮಾತ್ರ ವಿಚಾರಣೆ ನಡೆಸಲಾಗಿದೆ. ಇನ್ನೂ 400ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಎರಡು ವರ್ಷವಾದರೂ 90 ಸಾಕ್ಷಿಗಳು ಮಾತ್ರ ವಿಚಾರಣೆಯಾಗಿರುವುದರಿಂದ ಪ್ರಕರಣದ ವಿಚಾರಣೆ ಶೀಘ್ರದಲಿ ಮುಗಿಯುವ ಸಾಧ್ಯತೆ ಇಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಇತರೆ ಆರೋಪಿಗಳ ಜೊತೆ ಸೇರಿ ಗೌರಿ ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ಮೋಹನ್‌ ನಾಯಕ್‌ 2018ರ ಜುಲೈ 18ರಿಂದ ಕಸ್ಟಡಿಯಲ್ಲಿದ್ದಾರೆ. ಇತರೆ ಆರೋಪಿಗಳಿಗೆ ಹಣಕಾಸಿನ ನೆರವನ್ನು ಮೋಹನ್‌ ನಾಯಕ್‌ ನೀಡಿದ್ದಾರೆ ಎಂಬುದು ಪ್ರಾಸಿಕ್ಯೂಷನ್‌ ವಾದವಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

“ಯಾವೊಬ್ಬ ಸಾಕ್ಷಿಯು ಆರೋಪಿಗಳ ಸಭೆಯಲ್ಲಿ ಮೋಹನ್‌ ನಾಯಕ್‌ ಭಾಗಿಯಾಗಿರಲಿಲ್ಲ. ಬಹುತೇಕ ಸಾಕ್ಷಿಗಳು ಬೆಂಗಳೂರಿನ ಕುಂಬಳಗೋಡಿನಲ್ಲಿ ಮೋಹನ್‌ ನಾಯಕ್‌ ಮನೆ ಬಾಡಿಗೆ ಪಡೆದಿದ್ದರು ಎಂದಷ್ಟೇ ಹೇಳಿದ್ದಾರೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಅರ್ಜಿದಾರರ ಪರವಾಗಿ ವಕೀಲ ಅಮರ್‌ ಕೊರಿಯಾ ವಾದಿಸಿದ್ದರು. ರಾಜ್ಯ ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್‌ ಎ ನಾಯಕ್‌ ವಾದಿಸಿದ್ದರು.

ಏನಿದು ಪ್ರಕರಣ?

2017ರ ಸೆಪ್ಟೆಂಬರ್‌ 5ರಂದು ಗೌರಿ ಲಂಕೇಶ್‌ ಅವರು ಕೆಲಸ ಮುಗಿಸಿ ಮನೆಗೆ ಮರಳಿದ ವೇಳೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೂ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪವು ಗಣೇಶ್ ಮಿಸ್ಕಿನ್ ಮೇಲೂ ಇದೆ.

ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಾಲಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್‌ ಪಾಟೀಲ್‌, ಶ್ರೀಕಾಂತ್ ಪಂಗರ್ಕರ್, ಕೆ ಟಿ ನವೀನ್ ಕುಮಾರ್ ಮತ್ತು ಹೃಶಿಕೇಶ್ ದಿಯೋದಿಕರ್‌ ಪ್ರಕರಣದ ಆರೋಪಿಗಳಾಗಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302, 120ಬಿ, 114, 118, 109, 201, 203, 204 ಮತ್ತು 35, ಸಶಸ್ತ್ರ ಕಾಯಿದೆಯ ಸೆಕ್ಷನ್‌ಗಳಾದ 25(1), 25(1B), 27(1) ಮತ್ತು ಕೋಕಾ ಕಾಯಿದೆಯ ಸೆಕ್ಷನ್‌ಗಳಾದ 3(1)(I), 3(2), 3(3), 3(4) ಅಡಿ ಪ್ರಕರಣ ದಾಖಲಿಸಲಾಗಿದೆ.


Post a Comment

Previous Post Next Post