'ಪ್ರತಿಯೊಬ್ಬ ಕನ್ನಡಿಗನ ಕನಸು ನನ್ನ ಕನಸು', ನಿಮ್ಮ ನಿರ್ಣಯವೇ ನನ್ನ ನಿರ್ಣಯ: ಪ್ರಧಾನಿ ಮೋದಿ

 ಪ್ರತೀಯೊಬ್ಬ ಕನ್ನಡಗಿನ ಕನಸು ನನ್ನ ಕನಸಾಗಿದೆ, ನಿಮ್ಮ ನಿರ್ಣಯವೇ ನನ್ನ ನಿರ್ಣಯವಾಗಿರುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.

                                                              ಪ್ರಧಾನಿ ಮೋದಿ

Posted By : Rekha.M
Online Desk

ನವದೆಹಲಿ/ಬೆಂಗಳೂರು: ಪ್ರತೀಯೊಬ್ಬ ಕನ್ನಡಗಿನ ಕನಸು ನನ್ನ ಕನಸಾಗಿದೆ, ನಿಮ್ಮ ನಿರ್ಣಯವೇ ನನ್ನ ನಿರ್ಣಯವಾಗಿರುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.

ರಾಜ್ಯದಲ್ಲಿ ಮೇ.10ರಂದು ವಿಧಾನಸಭಾ ಚುನಾವಣೆ ಹೆಯಲಿದ್ದು, ಬಹಿರಂಗ ಪ್ರಚಾರ ನಿನ್ನೆ ಸಂಜೆ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿಯವರು, ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ.

"ಪ್ರತಿಯೊಬ್ಬ ಕನ್ನಡಿಗನ ಕನಸು ನನ್ನ ಸ್ವಂತ ಕನಸಾಗಿದೆ. ನಿಮ್ಮ ನಿರ್ಣಯವೇ ನನ್ನ ನಿರ್ಣಯ'' ಎಂದು ಹೇಳಿದ್ದಾರೆ.

ಇದೇ ವೇಳೆ ದೇಶದ ಆರ್ಥಿಕತೆಯಲ್ಲಿ ಕರ್ನಾಟಕದ ಮಹತ್ವದ ಪಾತ್ರ ಕುರಿತು ಮಾತನಾಡಿರುವ ಮೋದಿಯವರು, "ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಕರ್ನಾಟಕದ ಆರ್ಥಿಕತೆಯು ಅಭಿವೃದ್ಧಿ ಹೊಂದಿದಾಗ ಮಾತ್ರ ಇದು ಸಾಧ್ಯ ಎಂದು ಹೇಳಿದ್ದಾರೆ.

ಬಳಿಕ ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದ 3.5 ವರ್ಷಗಳ ಅವಧಿಯನ್ನು ಶ್ಲಾಘಿಸಿದ ಮೋದಿ, "ಬಿಜೆಪಿ ಸರ್ಕಾರದ ನಿರ್ಣಾಯಕ, ಕೇಂದ್ರೀಕೃತ ಮತ್ತು ಭವಿಷ್ಯದ ವಿಧಾನವು ಕರ್ನಾಟಕದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ" ಎಂದು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿಯೂ ಕರ್ನಾಟಕ ಬಿಜೆಪಿಯ ನಾಯಕತ್ವದಲ್ಲಿ ವಾರ್ಷಿಕ 90 ಸಾವಿರ ಕೋಟಿ ವಿದೇಶಿ ಬಂಡವಾಳ ಹೂಡಿಕೆಯಾಗಿದೆ. ಆದರೆ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕರ್ನಾಟಕವು ವಾರ್ಷಿಕ ಸುಮಾರು 30 ಸಾವಿರ ಕೋಟಿ ವಿದೇಶಿ ಹೂಡಿಕೆಯನ್ನು ಕಂಡಿದೆ. ಇದು ಯುವ ಜನತೆಗೆ ಬಿಜೆಪಿಯ ಬದ್ಧತೆಯಾಗಿದೆ ಎಂದು ಹೇಳಿದ್ದಾರೆ.

ನಂತರ ರಾಜ್ಯದ ಅಭಿವೃದ್ಧಿಗೆ ಪಕ್ಷದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ, “ನಗರಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು, ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು, ಹಳ್ಳಿಗಳು ಮತ್ತು ನಗರಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಮಹಿಳೆಯರು ಮತ್ತು ಯುವಕರಿಗಾಗಿ ಹೊಸ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಸರ್ಕಾರವು ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುತ್ತದೆ ಎಂದು ಹೇಳಿದರು.

ಬಂಡವಾಳ ಹೂಡಿಕೆ, ಕೈಗಾರಿಕೆ ಮತ್ತು ಆವಿಷ್ಕಾರದಲ್ಲಿ ಕರ್ನಾಟಕ ನಂಬರ್ ಒನ್ ಆಗಬೇಕು, ಶಿಕ್ಷಣ, ಉದ್ಯೋಗ, ಉದ್ಯಮಶೀಲತೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರಬೇಕೆಂದು ನಾವು ಬಯಸುತ್ತೇವೆ. ಕೃಷಿಯಲ್ಲಿಯೂ ಕರ್ನಾಟಕವನ್ನು ನಂಬರ್ ಒನ್ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಕರ್ನಾಟಕದ ಪರಂಪರೆ ಮತ್ತು ಸಾಂಸ್ಕೃತಿಕ ಸಾಮರ್ಥ್ಯವನ್ನು ಗೌರವಿಸಲಾಗುತ್ತಿದೆ. "ಕರ್ನಾಟಕವನ್ನು ನಂಬರ್ ಒನ್ ಮಾಡಲು, ಮೇ 10 ರಂದು ನಿಮ್ಮೆಲ್ಲರನ್ನೂ ಜವಾಬ್ದಾರಿಯುತ ನಾಗರಿಕರಾಗಿ ಮತ ಚಲಾಯಿಸುವಂತೆ ನಾನು ವಿನಂತಿಸುತ್ತೇನೆಂದು ಹೇಳಿದ್ದಾರೆ.

ಕರ್ನಾಟಕ ವಿಧಾನಸಭೆಗೆ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಸರ್ಕಾರ ರಚಿಸಲು 113 ಸ್ಥಾನಗಳ ಬಹುಮತದ ಅಗತ್ಯವಿದೆ.

ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬರಲೇಬೇಕೆಂಬ ಜಿದ್ದಿಗೆ ಬಿದ್ದಿರುವ ರಾಜ್ಯದ ಎಲ್ಲಾ ಮೂರು ಪ್ರಮುಖ ರಾಜಕೀಯ ಪಕ್ಷಗಳು (ಬಿಜೆಪಿ, ಕಾಂಗ್ರೆಸ್ ಮತ್ತು ಜನತಾ ದಳ-ಜಾತ್ಯತೀತ (ಜೆಡಿಎಸ್)) ಭರ್ಜರಿ ಪ್ರಚಾರಗಳನ್ನು ನಡೆಸಿವೆ. ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಸಾಕಷ್ಟು ಭರವಸೆಗಳನ್ನು ನೀಡಿವೆ ಹಾಗೂ ಒಬ್ಬರ ಮೇಲೊಬ್ಬರಂತೆ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಲೇ ಇವೆ.

ಆಡಳಿತ ವಿರೋಧಿ ಅಂಶವನ್ನು ಎದುರಿಸುತ್ತಿರುವ ಬಿಜೆಪಿ ರಾಜ್ಯದಲ್ಲಿ ಎರಡನೇ ಅವಧಿಯ ಮೇಲೆ ಕಣ್ಣಿಟ್ಟಿದ್ದು, ಪೂರ್ಣ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದೆ.


Post a Comment

Previous Post Next Post