ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ರಾಜಕಾರಣವೇ ಗೊತ್ತಿಲ್ಲ, ಅವರಿಗೆ ಗೊತ್ತಿರುವುದು ಬರೀ ದ್ವೇಷ ರಾಜಕಾರಣ: ಜಿ ಟಿ ದೇವೇಗೌಡ

 ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ಜಿ ಟಿ ದೇವೇಗೌಡ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಅಸಮಾಧಾನಗೊಂಡು ಆಕ್ರೋಶ ಹೊರಹಾಕಿದ್ದ ಬೆನ್ನಲ್ಲೇ ಜಿಟಿ ದೇವೇಗೌಡ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

                                     ಜಿ ಟಿ ದೇವೇಗೌಡ -ಸಿದ್ದರಾಮಯ್ಯ(ಸಂಗ್ರಹ ಚಿತ್ರ)

Posted By :Rekha.M
Source : Online Desk

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ಜಿ ಟಿ ದೇವೇಗೌಡ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಅಸಮಾಧಾನಗೊಂಡು ಆಕ್ರೋಶ ಹೊರಹಾಕಿದ್ದ ಬೆನ್ನಲ್ಲೇ ಜಿಟಿ ದೇವೇಗೌಡ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ತಮ್ಮ ನಿವಾಸ ಬಳಿ ಬಂದಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಜಿ ಟಿ ದೇವೇಗೌಡ, ಇಷ್ಟು ವರ್ಷಗಳಿಂದ ರಾಜಕೀಯದಲ್ಲಿದ್ದರೂ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ರಾಜಕಾರಣವೇ ಗೊತ್ತಿಲ್ಲ, ನನ್ನಷ್ಟು ಗಟ್ಟಿ ಸಿದ್ದರಾಮಯ್ಯ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ರೀತಿ ಅಧಿಕಾರಕ್ಕಾಗಿ ಯಾರ್ ಯಾರ ಮನೆ ಬಾಗಿಲಿಗೂ ಹೋದವನಲ್ಲ ನಾನು ಎಂದು ವ್ಯಂಗ್ಯವಾಡಿದರು.

ತಾಲ್ಲೂಕು ಬೋರ್ಡ್, ಎಪಿಎಂಸಿ, ಡೈರಿಯಲ್ಲಿ ಅಪ್ಪ ಮಕ್ಕಳು ಸೋತವರೆ, ಅಂತಹವರನ್ನು ಕರ್ಕೊಂಡು ಬಂದು ನನ್ನ ವಿರುದ್ಧ ನಿಲ್ಲಿಸಿದ್ದಾರೆ. ಸಿದ್ದರಾಮಯ್ಯ ಬರಿ ದ್ವೇಷಕ್ಕೆ ರಾಜಕಾರಣ ಮಾಡಿದ್ರು. ಅಷ್ಟೂ ಇದ್ರೆ ಅವರಿಗಾಗಿ ಸರ್ವಸ್ವ ತ್ಯಾಗ ಮಾಡಿದ ಮರಿಗೌಡನಿಗೆ ಟಿಕೆಟ್ ಕೊಡಬೇಕಿತ್ತು. ಒಕ್ಕಲಿಗರಲ್ಲೇ ಕೊಡುವುದಿದ್ದರೆ ಸತ್ಯಪ್ಪ ಮಗ ಅರುಣ್, ನರಸೇಗೌಡ, ಕೃಷ್ಣಸಾಗರ್ ಇದ್ರು. ಇವರಿಗೆ ಕೊಟ್ಟಿದ್ರೆ ಗೌರವಯುತವಾಗಿ ಸೋಲುತ್ತಿದ್ದರು ಎಂದು ಹೇಳಿದರು. 

ಅವನನ್ನು ನನ್ನ ಮನೆ ಬಾಗಿಲಿಗೆ ಸೇರಿಸುವುದಿಲ್ಲ: ಮಾವಿನಹಳ್ಳಿ ಸಿದ್ದೇಗೌಡ ಅವರ ಊರಲ್ಲೇ ಎಷ್ಟು ವೋಟ್ ತಗೋತಾನೆ ನೋಡೊಣ ಬನ್ನಿ. ಸಿದ್ದೇಗೌಡನನ್ನು ನಾನು ಯಾಕೆ ಬುಕ್ ಮಾಡಲಿ ನಾನು ಸಿದ್ದೇಗೌಡನ‌ ಜೊತೆ ಸೇರೋದು ಬಿಡಿ, ಅವನನ್ನು ನನ್ನ ಮನೆ ಬಾಗಿಲಿಗೆ ಸೇರಿಸಲ್ಲ ಎಂದರು. 

ಇನ್ನು, ನಾನು ಗೆಲ್ಲಲಿ ಸೋಲಲಿ ನನ್ನ ಜಾಯಿಮಾನದಲ್ಲಿಯೇ ಯಾರ ಜೊತೆಗೂ ನಾನು ಹೊಂದಾಣಿಕೆ ಮಾಡಿಲ್ಲ. ಈ ಸಿದ್ದೇಗೌಡನ ಬಗ್ಗೆ ಸಿದ್ದರಾಮಯ್ಯಗೆ ನಾನು ಹೇಳಿದ್ದೆ. ನಾನು ಹೇಳಿದ್ದೆಲ್ಲ ಅವರು ಮರೆತು ಹೋಗಿದ್ದಾರೆ, ನನಗೆ ಹೋದ ಚುನಾವಣೆಯೇ ಕಷ್ಟ ಆಗಲಿಲ್ಲ. ಇನ್ನು ಈಗ ಕಷ್ಟ ಆಗುತ್ತಾ, ಮಾವಿನಹಳ್ಳಿ ಸಿದ್ದೇಗೌಡ ಬುಕ್ ಮಾಡೊದಲ್ಲ, ಜೀವಮಾನದಲ್ಲಿ ಮಾತನಾಡಿಸಲ್ಲ. ನನ್ನ ಬಿಟ್ಟು ಹೋದ ಐದು ಜನರನ್ನೂ ನಾನು ಹತ್ತಿರ ಸೇರಿಸಲ್ಲ ಎಂದರು. 

ಈ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ದೇವಿಯ ಆಶಿರ್ವಾದದಿಂದ ಗೆಲ್ಲುತ್ತೇನೆ ಎಂದ ಜಿಟಿ ದೇವೇಗೌಡ, ಪ್ರಚಾರದ ವೇಳೆ ಎಲ್ಲಾ ಕಾರ್ಯಕರ್ತರು ನನಗೆ ಅದ್ದೂರಿ ಸ್ವಾಗತ ಕೊಟ್ಟಿದ್ದರು. ಜನರು ಭಾರೀ ಉತ್ಸಾಹದಿಂದ, ಪ್ರೀತಿಯಿಂದ ಜಿಟಿ ದೇವೇಗೌಡರನ್ನು ಗೆಲ್ಲಿಸುವ ಮನಸ್ಸು ಮಾಡಿದ್ದಾರೆ ಎಂದು ಹೇಳಿದರು.
Post a Comment

Previous Post Next Post