ಕೊಟ್ಟ ಮಾತಿನಂತೆ ನಾಳೆ 'ಅನ್ನ ಭಾಗ್ಯ' ಯೋಜನೆ ಜಾರಿ, 5 ಕೆಜಿ ಅಕ್ಕಿ ಜೊತೆ ನಾಳೆಯಿಂದಲೇ ಖಾತೆಗೆ ಹಣ ವರ್ಗಾವಣೆ: ಸಚಿವ ಮುನಿಯಪ್ಪ

 ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಬಿಪಿಎಲ್ ಹೊಂದಿರುವವರಿಗೆ 'ಅನ್ನ ಭಾಗ್ಯ'(Anna Bhagya) ಯೋಜನೆ ನಾಳೆ ಜುಲೈ 1ರಂದು ಜಾರಿಗೆ ಬರಲಿದೆ. 

                               ಆಹಾರ ಖಾತೆ ಸಚಿವ ಕೆ ಹೆಚ್ ಮುನಿಯಪ್ಪ(ಸಂಗ್ರಹ ಚಿತ್ರ)

Posted By :Rekha.M
Source : Online Desk

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಬಿಪಿಎಲ್ ಹೊಂದಿರುವವರಿಗೆ 'ಅನ್ನ ಭಾಗ್ಯ'(Anna Bhagya) ಯೋಜನೆ ನಾಳೆ ಜುಲೈ 1ರಂದು ಜಾರಿಗೆ ಬರಲಿದೆ.  

ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ನೀಡುವ 5 ಕೆಜಿ ಅಕ್ಕಿ (Rice) ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ(Money) ನೀಡುವುದಾಗಿ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದ್ದು, ಅದರಂತೆ ನಾಳೆ ಯೋಜನೆ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಹೆಚ್​.ಮುನಿಯಪ್ಪ ತಿಳಿಸಿದ್ದಾರೆ.  

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕೇಂದ್ರದ 5 ಕೆಜಿ ಅಕ್ಕಿ ವಿತರಣೆ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಸದ್ಯಕ್ಕೆ ಕುಟುಂಬದ ಪ್ರತಿ ವ್ಯಕ್ತಿಗೆ 170 (ಪ್ರತಿ ಕೆ.ಜಿಗೆ 34 ರೂಪಾಯಿಗಳಂತೆ) ನೀಡುತ್ತೇವೆ. 90 ಪರ್ಸೆಂಟ್​ ಫಲಾನುಭವಿಗಳಲ್ಲಿ ಖಾತೆಗಳಿವೆ. ಅಕೌಂಟ್ ಇಲ್ಲದವರು  ಮಾಡಿಸಿಕೊಳ್ಳಬೇಕು. ಒಬ್ಬರಿಗೆ 170 ರೂಪಾಯಿ ಕೊಡುತ್ತೇವೆ. ಅಕ್ಕಿ ಸಿಗುವರೆಗೆ ಮಾತ್ರ ಈ ಹಣ ನೀಡುವ ವ್ಯವಸ್ಥೆಯಿರುತ್ತದೆ ಎಂದರು. 

ಹೆಚ್ಚುವರಿ 5 ಕೆಜಿ ಅಕ್ಕಿ ಸಿಗುವವರೆಗೂ ಖಾತೆಗೆ ಹಣ ಜಮೆ ಮಾಡುತ್ತೇವೆ. ಎಂಎಸ್ ಪಿ(MSP) ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ. ಅಕ್ಕಿ ಕೊಡಲು ನಾವು ಸಿದ್ದವಾಗಿದ್ದೇವೆ ಆದರೆ ಕೇಂದ್ರ ಸರ್ಕಾರ ಹೆಚ್ಚಿನ ಅಕ್ಕಿ ನೀಡಲು ಸಹಕಾರ ನೀಡಿಲ್ಲ ಎಂದರು.

ಪ್ರದೇಶಗಳಿಗೆ ತಕ್ಕಂತೆ ಧಾನ್ಯ ವಿತರಣೆ: ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಅಕ್ಕಿಯನ್ನು ಮೂರೂ ಹೊತ್ತು ಜನರು ಸೇವಿಸುವುದಿಲ್ಲ. ದಕ್ಷಿಣ ಭಾಗದ ಜನರಿಗೆ ರಾಗಿ ನೀಡುತ್ತೇವೆ. ಉತ್ತರ ಕರ್ನಾಟಕ ಜನರಿಗೆ ಜೋಳ ಕೊಡುತ್ತೇವೆ. ರಾಗಿ ದಾಸ್ತಾನು ಇದೆ, ಜೋಳ ದಾಸ್ತಾನು ಇಲ್ಲ. ದಾಸ್ತಾನು ಆದ ಬಳಿಕ ಧಾನ್ಯಗಳ ಹಂಚಿಕೆ ಮಾಡುತ್ತೇವೆ. ಎಂಎಸ್ ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ ಅಥವಾ ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ. ಮಾತು ಕೊಟ್ಟಂತೆ ನಾಳೆಯಿಂದ ಜಾರಿ ಖಂಡಿತ ಎಂದರು. 

ನಾಳೆಯಿಂದಲೇ ಫಲಾನುಭವಿಗಳ ಖಾತೆಗೆ ಹಣ: ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ಟರೆ ನಾವು ಅಕ್ಕಿ ಹಂಚಿಕೆ ಮಾಡುತ್ತೇವೆ. ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದೆ. ಇಲ್ಲವೆ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ. ಹಣ ರೆಡಿ ಇದೆ, ಅಕೌಂಟ್ ಗೆ ವರ್ಗಾವಣೆ ಆಗುತ್ತದೆ. ನಾಳೆಯಿಂದಲೇ ಖಾತೆಗೆ ಹಣ ಹಾಕುತ್ತೇವೆ. ಅನ್ನಭಾಗ್ಯ ಯೋಜನೆ ಜಾರಿಗೆಗೆ ಸಮಾವೇಶ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಅನ್ನ ಭಾಗ್ಯ ಯೋಜನೆ ಹಣ ವರ್ಗಾವಣೆ ಮಾಹಿತಿ: ರಾಜ್ಯದಲ್ಲಿ ಒಟ್ಟು 1 ಕೋಟಿ 28 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರು ಇದ್ದು, 4 ಕೋಟಿ 42 ಲಕ್ಷ ಫಲಾನುಭವಿಗಳಿದ್ದಾರೆ. 1 ಕೋಟಿ 28 ಲಕ್ಷ ಕಾರ್ಡ್ ಗಳ ಪೈಕಿ 99.99% ಆಧಾರ್ ಸೀಡಿಂಗ್ ಆಗಿದೆ. ಇನ್ನು 1.22 ಕಾರ್ಡ್‌ದಾರರ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ. ಇನ್ನುಳಿದ ಬಾಕಿ ಉಳಿದಿರುವ 6 ಲಕ್ಷ ಕಾರ್ಡ್‌ಗಳು ಆಧಾರ್ ಲಿಂಕ್ ಆಗಬೇಕು. ಆಧಾರ್ ಲಿಂಕ್ ಆಗುತ್ತಿದ್ದಂತೆಯೇ ಬ್ಯಾಂಕ್ ಅಕೌಂಟ್ ಕೂಡ ಕಾರ್ಡ್ ಗಳಿಗೆ ಅಪ್ಡೇಟ್ ಆಗುತ್ತದೆ. ಹೀಗಾಗಿ ಗೊಂದಲಕ್ಕೆ ಅವಕಾಶವಿಲ್ಲ ಎಂದು ಸಚಿವರು ಹೇಳಿದರು.
Post a Comment

Previous Post Next Post