ಬೀದಿಗೆ ಬಿದ್ದ ಬಿಜೆಪಿ ಬೇಗುದಿ: ಸಭೆಯಲ್ಲಿ ನಾಯಕರ ಘರ್ಷಣೆ ; ತುಟಿ ಬಿಚ್ಚದೆ ಮೌನಕ್ಕೆ ಶರಣಾದ ಬೊಮ್ಮಾಯಿ!

 ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಬಿಜೆಪಿಯಲ್ಲಿ ಒಳಗೊಳಗೆ ಕುದಿಯುತ್ತಿದ್ದ ಅಸಹನೆ ಈಗ ಬೀದಿಗೆ ಬಂದಿದೆ. ಪಕ್ಷದ ನಾಯಕರು ವಿವಿಧ ಜಿಲ್ಲೆಗಳಲ್ಲಿ ನಡೆಸುತ್ತಿರುವ ಸಭೆಗಳಲ್ಲಿ ನಾಯಕರ ಕೆಸರೆರಚಾಟ ಮತ್ತು ಕಾರ್ಯಕರ್ತರ ಆಕ್ರೋಶ ತಾರಕಕ್ಕೇರಿದೆ.

                                                           ಬಸವರಾಜ ಬೊಮ್ಮಾಯಿ

Posted By :Rekha.M
Online Desk

ವಿಜಯಪುರ: ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಬಿಜೆಪಿಯಲ್ಲಿ ಒಳಗೊಳಗೆ ಕುದಿಯುತ್ತಿದ್ದ ಅಸಹನೆ ಈಗ ಬೀದಿಗೆ ಬಂದಿದೆ. ಪಕ್ಷದ ನಾಯಕರು ವಿವಿಧ ಜಿಲ್ಲೆಗಳಲ್ಲಿ ನಡೆಸುತ್ತಿರುವ ಸಭೆಗಳಲ್ಲಿ ನಾಯಕರ ಕೆಸರೆರಚಾಟ ಮತ್ತು ಕಾರ್ಯಕರ್ತರ ಆಕ್ರೋಶ ತಾರಕಕ್ಕೇರಿದೆ.

ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಸೋಮವಾರ ನಡೆದ ಸಭೆಗಳಲ್ಲಿ ರಾಜ್ಯ ಬಿಜೆಪಿ ನಾಯಕರ ನಡುವೆ ಹೊಗೆಯಾಡುತ್ತಿರುವ ಭಿನ್ನಾಭಿಪ್ರಾಯ ಹಾಗೂ ಪಕ್ಷದೊಳಗಿನ ಗುಂಪುಗಾರಿಕೆ ಬಯಲಿಗೆ ಬಂದಿದೆ.

ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ  ಸಮ್ಮುಖದಲ್ಲಿ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಾಗ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕೆಲ ದಿನಗಳ ಹಿಂದೆಯಷ್ಟೇ ಹಿರಿಯ ನಾಯಕರಾದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ಪ್ರತಾಪ್ ಸಿಂಹ, ಸಿ.ಟಿ.ರವಿ ಅವರು ವಿರೋಧ ಪಕ್ಷಗಳೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಯ್ತು ಎಂದು ಆರೋಪಿಸಿದ್ದರು.

ವಿಜಯಪುರದಲ್ಲಿ ನಡೆದ ಸಭೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅವರನ್ನು ಮರು ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದ ನಂತರ ಯತ್ನಾಳ್ ಬೆಂಬಲಿಗರು ಘೋಷಣೆಗಳನ್ನು ಕೂಗಲಾರಂಭಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬೊಮ್ಮಾಯಿಗೆ ಮುಜುಗರ ಉಂಟಾಯಿತು. ಸಭೆಯಲ್ಲಿ ನಡೆಯುತ್ತಿದ್ದ ಅಶಿಸ್ತಿನ ದೃಶ್ಯಗಳಿಗೆ ಬೊಮ್ಮಾಯಿ ಮೂಕಪ್ರೇಕ್ಷಕರಾದರು.

ಜೊಲ್ಲೆ ಅವರ ಹೇಳಿಕೆಗೆ ಯತ್ನಾಳ್ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿ ತಮ್ಮ ನಾಯಕನ ಪರವಾಗಿ ಘೋಷಣೆಗಳನ್ನು ಕೂಗಿದರು. ಪೊಲೀಸರು ಸಮಾಧಾನಪಡಿಸಲು ಯತ್ನಿಸಿದರೂ ಬಿಆರ್‌ಪಿ, ಬಿಆರ್‌ಪಿ... (ಬಸನಗೌಡ ರಾಮನಗೌಡ ಪಾಟೀಲ್‌ ಯತ್ನಾಳ್‌) ಎಂದು ಘೋಷಣೆ ಕೂಗಿದರು.

ಅವಮಾನ ಅನುಭವಿಸಿದ ಜಿಗಜಿಣಗಿ, ಮಾಜಿ ಸಚಿವ ಮುರಗೇಶ ನಿರಾಣಿ, ಮಾಜಿ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ಎಸ್.ಕೆ.ಬೆಳ್ಳುಬ್ಬಿ ಸ್ಥಳದಿಂದ ನಿರ್ಗಮಿಸಿದರು. ಇದೇ ವೇಳೆ ಬಾಗಲಕೋಟೆಯಲ್ಲಿ ನಡೆದ ಸಭೆಯಲ್ಲಿ ಎರಡು ಗುಂಪುಗಳ ಸದಸ್ಯರು ತಮ್ಮ ಮುಖಂಡರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದಾಗ ಗೊಂದಲದ ವಾತಾವರಣ ನಿರ್ಮಾಣವಾಯಿತು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದವರಿಗೆ ಸಭೆಗೆ ಬರಲು ಅವಕಾಶ ನೀಡಬಾರದು ಎಂದು ಪಕ್ಷದ ಮುಖಂಡ ರಾಜು ರೇವಣಕರ್ ಒತ್ತಾಯಿಸಿದಾಗ ಗದ್ದಲ ಪ್ರಾರಂಭವಾಯಿತು.

Post a Comment

Previous Post Next Post