ಜೈಲಿನಲ್ಲಿ ಸಿದ್ಧವಾಗುವ ಸಮವಸ್ತ್ರಗಳನ್ನು ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಿ: ಹೈಕೋರ್ಟ್ ಜಡ್ಜ್ ಸಲಹೆ

 ವಿಶ್ವ ಪರಿಸರ ದಿನದ ಅಂಗವಾಗಿ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕರ್ನಾಟಕ ಹೈಕೋರ್ಟ್  ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರು ನೂತನ ಅಡಿಕೆ ಎಲೆ ಉತ್ಪನ್ನಗಳ ಉತ್ಪಾದನಾ ಘಟಕ ಉದ್ಘಾಟಿಸಿದರು.

                                  ಅಡಿಕೆ ಎಲೆ ಉತ್ಪನ್ನಗಳ ಉತ್ಪಾದನಾ ಘಟಕ ಉದ್ಘಾಟನೆ

Posted By : Rekha.M
Online Desk

ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕರ್ನಾಟಕ ಹೈಕೋರ್ಟ್  ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರು ನೂತನ ಅಡಿಕೆ ಎಲೆ ಉತ್ಪನ್ನಗಳ ಉತ್ಪಾದನಾ ಘಟಕ ಉದ್ಘಾಟಿಸಿದರು.

ಜೈಲಿನಲ್ಲಿ ಕೈಮಗ್ಗ ಘಟಕ ಇದ್ದು, ಇಲ್ಲಿ ಸಿದ್ಧವಾಗುವ ಸಮವಸ್ತ್ರಗಳನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ ವಿತರಿಸಲು ಜೈಲು ಪ್ರಾಧಿಕಾರಕ್ಕೆ ಸಹಕರಿಸುವಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಿಗೆ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಸಲಹೆ ನೀಡಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಸೋಮವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿದ ಅವರು ಗಿಡ ನೆಟ್ಟು, ಕೈದಿಗಳ ಯೋಗ ಕ್ಷೇಮ, ಅವರಿಗೆ ವಿತರಣೆಯಾಗುವ ಆಹಾರ ಪದಾರ್ಥ ಮತ್ತು ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು.

ಪರಿಸರ ನಮ್ಮ ತಾಯಿ, ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದ್ದು, ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಿಸಬೇಕು. ಕೈದಿಗಳು ಜೈಲಿನಲ್ಲಿ ಕಲಿತ ಕೌಶಲಗಳನ್ನು ಮುಂದೆ ಬದುಕಿನಲ್ಲಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಅಡಿಕೆ ಎಲೆಯ ತಟ್ಟೆ, ಲೋಟಗಳನ್ನು ಉತ್ಪಾದಿಸಲು ಮೂರು ಹೊಸ ಯಂತ್ರಗಳನ್ನು ಅಳವಡಿಸಲಾಗಿದ್ದು, ಆರು ಕೈದಿಗಳನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ವರಾಳೆ ಅವರು ಮರಗೆಲಸ, ಬೇಕರಿ ಉತ್ಪನ್ನಗಳ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಜೈಲಿನಲ್ಲಿನ ಅಡುಗೆ ಕೋಣೆಗೆ ಭೇಟಿ ನೀಡಿ, ಅಲ್ಲಿನ ಸುವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತಮ ಭವಿಷ್ಯಕ್ಕಾಗಿ ಪರಿಸರವನ್ನು ಸಂರಕ್ಷಿಸಲು ಹೆಚ್ಚಿನ ಸಸಿಗಳನ್ನು ನೆಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ವರಾಳೆ  ಒತ್ತಾಯಿಸಿದರು.


Post a Comment

Previous Post Next Post