ಕೆಎಂಎಫ್ ದಿಡೀರ್ ನಿರ್ಧಾರ : ನಂದಿನಿ ಹಾಲು ಮಾರಾಟದ ದರದಲ್ಲಿ 3 ರು ಹೆಚ್ಚಳ

 ನಂದಿನಿ ಹಾಲಿನ ಮಾರಾಟ ದರವನ್ನು ಲೀಟರ್‌ಗೆ 3 ರೂ. ಹೆಚ್ಚಿಸಲು ರಾಜ್ಯ ಹಾಲು ಮಹಾಮಂಡಳ (ಕೆಎಂಎಫ್‌) ನಿರ್ಧರಿಸಿದೆ.

                ನಂದಿನಿ ಹಾಲು

By : Rekha.M
Online Desk

ಬೆಂಗಳೂರು: ನಂದಿನಿ ಹಾಲಿನ ಮಾರಾಟ ದರವನ್ನು ಲೀಟರ್‌ಗೆ 3 ರೂ. ಹೆಚ್ಚಿಸಲು ರಾಜ್ಯ ಹಾಲು ಮಹಾಮಂಡಳ (ಕೆಎಂಎಫ್‌) ನಿರ್ಧರಿಸಿದೆ. 

ಕೆಎಂಎಫ್‌ನ ವಾರ್ಷಿಕ ಸಭೆಯಲ್ಲಿ ಹಾಲಿನ ಮಾರಾಟ ದರ ಹೆಚ್ಚಿಸುವ ಸಂಬಂಧ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ದರ ಏರಿಕೆಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ಕೆಎಂಎಫ್‌ನ ಉನ್ನತ ಮೂಲಗಳು ತಿಳಿಸಿವೆ.

ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಹಾಲು ಮಾರಾಟ ದರ ಹೆಚ್ಚಿಸುವಂತೆ ಕಳೆದ 8 ತಿಂಗಳಿಂದ ಕೆಎಂಎಫ್‌ನ ಮೇಲೆ ಒತ್ತಡ ಹೇರುತ್ತಿವೆ. ಈ ಹಿನ್ನೆಲೆಯಲ್ಲಿ ಕೆಎಂಎಫ್‌ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಮುಖ್ಯಮಂತ್ರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ರೈತರ ಅನುಕೂಲಕ್ಕಾಗಿ ಶೀಘ್ರವೇ ಹಾಲು ಮಾರಾಟ ದರದಲ್ಲಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡಲೇಬೇಕು. ಬೆಲೆ ಹೆಚ್ಚಳದ ಸಂಪೂರ್ಣ ಲಾಭವನ್ನು ರೈತರಿಗೆ ತಲುಪಿಸಬೇಕೆಂದು ಸಭೆಯಲ್ಲಿಒಮ್ಮತದ ನಿರ್ಧಾರಕ್ಕೆ ಬರಲಾಯಿತು ಎಂದು ಮೂಲಗಳು ಹೇಳಿವೆ. ಈ ಕುರಿತು ಸರಕಾರದ ಅನುಮತಿ ಬಾಕಿ ಇದೆ.

ಈ ಹಿಂದೆಯೇ ದರ ಏರಿಕೆಗೆ ನಿರ್ಧರಿಸಲಾಗಿತ್ತು. ಹಾಲು ಮಾರಾಟ ದರವನ್ನು ಲೀಟರ್‌ಗೆ 3 ರೂ. ಹೆಚ್ಚಿಸುವ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರಾಜ್ಯ ಹಾಲು ಮಹಾಮಂಡಳದ (ಕೆಎಂಎಫ್‌) ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಆಗಸ್ಟ್‌ನಲ್ಲಿ ನಡೆದ ಸಭೆಯ ನಂತರ ಪ್ರತಿಕ್ರಿಯಿಸಿದ್ದರು. ‘ರಾಜ್ಯದಲ್ಲಿ ಸದ್ಯ ನಂದಿನಿ ಹಾಲಿನ ಮಾರಾಟ ದರ ಲೀಟರ್‌ಗೆ 37ರೂ. ಇದೆ. ಬೇರೆ ಬ್ರ್ಯಾಂಡ್‌ಗಳ ಹಾಲಿನ ಬೆಲೆ ಲೀಟರ್‌ಗೆ 40 ರೂ.ನಿಂದ 51 ರೂ.ವರೆಗೆ ಇದೆ. ಈ ವಿಚಾರವಾಗಿ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹಾಲಿನ ದರವನ್ನು 40 ರೂ.ಗೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ’’ ಎಂದು ತಿಳಿಸಿದ್ದರು.

‘‘ರಾಜ್ಯದಲ್ಲಿ ದಿನಕ್ಕೆ 40 ಲಕ್ಷ ಲೀಟರ್‌ ಪ್ಯಾಕೆಟ್‌ ಹಾಲು ಮಾರಾಟವಾಗುತ್ತಿದೆ. ಹೈನೋದ್ಯಮ ನಿರ್ವಹಣೆ ಮತ್ತು ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಿದೆ. ಹೀಗಾಗಿ, ಹಾಲು ಮಾರಾಟ ದರ ಹೆಚ್ಚಿಸಿದರೆ ಹೈನೋದ್ಯಮಕ್ಕೆ ಅನುಕೂಲವಾಗುತ್ತದೆ. ಹಸು ಸಾಕಣೆಗೆ ರೈತರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಹಾಲಿನ ದರ ಹೆಚ್ಚಿಸಿದರೆ ಅದರ ಲಾಭವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸುತ್ತೇವೆ’’ ಎಂದಿದ್ದಾರೆ.

Post a Comment

Previous Post Next Post