ಗದಗ: ಮಳೆಯಿಂದ ಸೃಷ್ಟಿಯಾದ ಕಂದಕಕ್ಕೆ ಬಿದ್ದು ಇಬ್ಬರ ಸಾವು; ಬರ್ತ್ ಡೇ ಕೇಕ್ ಕೊಂಡೊಯ್ಯುತ್ತಿದ್ದವರು ಮಸಣಕ್ಕೆ; ಗ್ರಾಮಸ್ಥರ ಪ್ರತಿಭಟನೆ

 ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯೇ ಕೊಚ್ಚಿ ಹೋಗಿ ಸೃಷ್ಟಿಯಾದ 30 ಅಡಿ ಆಳದ ಕಂದಕಕ್ಕೆ ಇಬ್ಬರು ಬೈಕ್ ಸವಾರರು ಬಿದ್ದು ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ನಡೆದಿದೆ.

        ಕಂದಕಕ್ಕೆ ಬಿದ್ದು ಯುವಕರ ಸಾವು

By : Rekha.M
Online Desk

ಗದಗ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯೇ ಕೊಚ್ಚಿ ಹೋಗಿ ಸೃಷ್ಟಿಯಾದ 30 ಅಡಿ ಆಳದ ಕಂದಕಕ್ಕೆ ಇಬ್ಬರು ಬೈಕ್ ಸವಾರರು ಬಿದ್ದು ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ನಡೆದಿದೆ.

ಲಕ್ಕುಂಡಿ ಗ್ರಾಮದ ಮಂಜುನಾಥ ಮಾದರ (19), ಬಸವರಾಜ್ ಜವಳಬೆಂಚಿ (17) ಮೃತ ಯುವಕರು, ಮಂಜುನಾಥ್ ಮಾದರ ಅವರ ಸೋದರ ಸಂಬಂಧಿಯ ಹುಟ್ಟು ಹಬ್ಬವಿತ್ತು, ಹೀಗಾಗಿ ಇಬ್ಬರು ಕೇಕ್ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಳೆ ನೀರಿನಿಂದಾಗಿ ರಸ್ತೆ ಕೊಚ್ಚಿಹೋಗಿ ಕಂದಕ ಸೃಷ್ಟಿಯಾಗಿತ್ತು.

ರಸ್ತೆ ಕೊಚ್ಚಿ ಹೋಗಿದ್ದರೂ ಇನ್ನೂ ಅದನ್ನು ದುರಸ್ತಿ ಮಾಡಿಸದೆ ಇರುವ ಕಾರಣ ಈ ಸಾವು ಸಂಭವಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು . ನಾಗಾವಿ ಗ್ರಾಮದಿಂದ ಬೆಳದಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ 30 ಅಡಿ ಆಳಕ್ಕೆ ಕೊರೆದು ಕಂದಕ ಸೃಷ್ಟಿ ಆಗಿದ್ದ ವಿಷಯ ಜಿಲ್ಲಾಡಳಿತಕ್ಕೆ ತಿಳಿದಿದೆ. ಸ್ಥಳ ವೀಕ್ಷಣೆಯೂ ಮಾಡಲಾಗಿದೆ.

ಆದರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ಬ್ಯಾರಿಕೇಡ್, ಸುರಕ್ಷತಾ ಫಲಕ ಅಳವಡಿಸದಿರುವುದೇ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳದಲ್ಲಿ ಪೊಲೀಸರ ನಿಯೋಜನೆ ಮಾಡದೇ ಇಲಾಖೆ ನಿರ್ಲಕ್ಷಿಸಿದೆ ಎಂದು ದೂರಿದ್ದಾರೆ.

ಗದಗ ಗ್ರಾಮಾಂತರ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಮಧ್ಯಾಹ್ನ 12 ಗಂಟೆ ಸುಮಾರಿಗೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದೆ. ಗದಗ ಹಾಗೂ ಇತರೆ ಭಾಗದ ಜನರು ವೆಂಕಟಾಪುರ, ಶಿರಹಟ್ಟಿ ಮತ್ತಿತರ ಗ್ರಾಮಗಳಿಗೆ ಈ ಮಾರ್ಗವಾಗಿ ಸಂಚರಿಸುತ್ತಾರೆ ಎಂದು ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದೇವೆ. ಸ್ಥಳೀಯ ಪ್ರಯಾಣಿಕರಿಗೆ ರಸ್ತೆ ಹಾಳಾದ ಬಗ್ಗೆ ಅರಿವಿದ್ದರೂ ಹೊರಗಿನವರಿಗೆ ರಸ್ತೆಯ ಸ್ಥಿತಿಯ ಬಗ್ಗೆ ಸುಳಿವಿಲ್ಲ ಎಂದು ಗ್ರಾಮಸ್ಥರು ಹೇಳಿದರು.

ಘಟನಾ ಸ್ಥಳಕ್ಕೆ ಗದಗ ಸಹಾಯಕ ಆಯುಕ್ತೆ ಅನ್ನಪೂರ್ಣ ಮುದುಕಮ್ಮನವರ್, ತಹಶೀಲ್ದಾರ್ ಕಿಶನ್ ಕಲಾಲ್ ಭೇಟಿ ನೀಡಿದ್ದರು. ಇಂಥಹ ಘಟನೆ ತಪ್ಪಿಸಲು ನಾವು ರಸ್ತೆಯನ್ನು ಸರಿಪಡಿಸಲು  ಸೂಚನಾ ಫಲಕಗಳು ಮತ್ತು ಬ್ಯಾರಿಕೇಡ್‌ಗಳನ್ನು ಹಾಕಲು ನಾವು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಅನ್ನಪೂರ್ಣ ಹೇಳಿದರು.

 


Post a Comment

Previous Post Next Post