ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ವದಂತಿ: ಮತ್ತಿಬ್ಬರು ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 3ಕ್ಕೇರಿಕೆ!

 ಹಲವು ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೊಗಳನ್ನು ವಿದ್ಯಾರ್ಥಿನಿಯೊಬ್ಬರು ಚಿತ್ರೀಕರಿಸಿದ್ದಾರೆ ಎಂಬ ಪ್ರಕರಣದಲ್ಲಿ ಪ್ರಾಥಮಿಕ ತನಿಖೆಯ ಬಳಿಕ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 3ಕ್ಕೇರಿಕೆಯಾಗಿದೆ.

                   ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು

By : Rekha.M

Online Desk

ಚಂಡೀಗಡ: ಹಲವು ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೊಗಳನ್ನು ವಿದ್ಯಾರ್ಥಿನಿಯೊಬ್ಬರು ಚಿತ್ರೀಕರಿಸಿದ್ದಾರೆ ಎಂಬ ಪ್ರಕರಣದಲ್ಲಿ ಪ್ರಾಥಮಿಕ ತನಿಖೆಯ ಬಳಿಕ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 3ಕ್ಕೇರಿಕೆಯಾಗಿದೆ.

ಪ್ರಕರಣದಲ್ಲಿ ಈಗಾಗಲೇ ಪೊಲೀಸರು ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿದ್ದ ವಿದ್ಯಾರ್ಥಿನಿಯನ್ನು ಬಂಧಿಸಿದ್ದು, ಆಕೆ ವಿಡಿಯೋ ಹಂಚಿಕೊಂಡಿದ್ದ ಆಕೆಯ ಪ್ರಿಯಕರ ಮತ್ತು ಆತನ ಸ್ನೇಹಿತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಶಿಮ್ಲಾದಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಇದೀಗ ಪಂಜಾಬ್ ಪೊಲೀಸರಿಗೆ ಆರೋಪಿಗಳನ್ನು ಹಸ್ತಾಂತರಿಸಲಾಗಿದೆ ಎನ್ನಲಾಗಿದೆ.

ಪಂಜಾಬ್‌ನ ಮೊಹಾಲಿಯ ಚಂಡೀಗಡ ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬರು ಇತರರ ಆಕ್ಷೇಪಾರ್ಹ ವಿಡಿಯೊಗಳನ್ನು ಚಿತ್ರಿಕರಿಸಿ ತನ್ನ ಗೆಳೆಯರಿಗೆ ಕಳುಹಿಸಿದ್ದರು ಎಂಬ ವದಂತಿ ಹರಡಿತ್ತು. ಒಬ್ಬ ವಿದ್ಯಾರ್ಥಿನಿಯು ತನ್ನ ವಿಡಿಯೊವನ್ನು ಯುವಕನೊಬ್ಬನ ಜೊತೆ ಹಂಚಿಕೊಂಡಂತೆ ಕಾಣಿಸುತ್ತಿದೆ. ಇತರ ಯಾವುದೇ ವಿದ್ಯಾರ್ಥಿನಿಯ ಆಕ್ಷೇಪಾರ್ಹವಾದ ವಿಡಿಯೊ ಸಿಕ್ಕಿಲ್ಲ ಎಂದು ಪಂಜಾಬ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ ಗುರ್‌ಪ್ರೀತ್‌ ಕೌರ್‌ ಹೇಳಿದ್ದಾರೆ. 

ವಿಡಿಯೋ ಚಿತ್ರೀಕರಿಸಿದ್ದ ವಿದ್ಯಾರ್ಥಿನಿಯ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದು, ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿ ವಿದ್ಯಾರ್ಥಿನಿಯ ಗೆಳೆಯ ಸನ್ನಿ ಮೆಹ್ತಾ ಎಂದು ಹೇಳಲಾದ ಯುವಕನೊಬ್ಬನನ್ನು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಬಂಧಿಸಲಾಗಿದೆ. ಸನ್ನಿ ಮೆಹ್ತಾ ಟ್ರಾವಲ್‌ ಎಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ಘಟನೆಗೆ ಸಂಬಂಧಿಸಿದಂತೆ ಶಿಮ್ಲಾದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ವ್ಯಕ್ತಿಯ ಮಾಹಿತಿ ಬಹಿರಂಗವಾಗಿಲ್ಲ.  

ಹಾಸ್ಟೆಲ್‌ನಲ್ಲಿ ಇರುವ ಹಲವು ವಿದ್ಯಾರ್ಥಿನಿಯರ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ ಎಂಬುದು ಸುಳ್ಳು ಮತ್ತು ಆಧಾರರಹಿತ. ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದೂ ಸುಳ್ಳು ಎಂದು ವಿಶ್ವವಿದ್ಯಾಲಯ ಹೇಳಿದೆ. ಈ ಘಟನೆ ಕುರಿತಂತೆ ಚಂಡೀಗಡ ವಿಶ್ವವಿದ್ಯಾಲಯದಲ್ಲಿ ಶನಿವಾರ ರಾತ್ರಿ ಭಾರಿ ಪ್ರತಿಭಟನೆ ನಡೆದಿದೆ. ಹಾಗೇ ಈ ಕುರಿತು ತನಿಖೆ ನಡೆಸಲು ಮುಖ್ಯಮಂತ್ರಿ ಭಗವಂತ ಮಾನ್‌ ಆದೇಶ ಮಾಡಿದ್ದರು.  

  ಮುಂದುವರೆದ ಪ್ರತಿಭಟನೆ
  ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಭಾನುವಾರ ಸಂಜೆಯೂ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವಿಶ್ವವಿದ್ಯಾಲಯದ ಆಡಳಿತವು ಘಟನೆಯನ್ನು ಮುಚ್ಚಿಡಲು ಯತ್ನಿಸುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.  ಹಾಸ್ಟೆಲ್‌ನಲ್ಲಿ 4,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ. 

  ಆರೋಪಿ ವಿದ್ಯಾರ್ಥಿನಿಗೆ ಸಹಪಾಠಿಗಳ ತೀವ್ರ ತರಾಟೆ
  ವಿದ್ಯಾರ್ಥಿನಿಯರು ಆರೋಪಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೊ ಬಗ್ಗೆ ಸತ್ಯ ಹೇಳುವಂತೆ ವಿದ್ಯಾರ್ಥಿನಿಯರು ಆರೋಪಿಯ ಮೇಲೆ ಒತ್ತಡ ಹೇರಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊದಲ್ಲಿ ಇದೆ.  ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಘಾತಗೊಂಡಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.  ‘ವಿಡಿಯೊ ಚಿತ್ರೀಕರಣ ಮಾಡಿದ್ದು ಏಕೆ? ನಿನ್ನನ್ನು ಅಮಾನತು ಮಾಡುತ್ತೇನೆ’ ಎಂದು ಹಾಸ್ಟೆಲ್‌ನ ವಾರ್ಡನ್‌ ಹೇಳಿದ್ದಾರೆ ಎನ್ನಲಾದ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಇದೆ. 


  Post a Comment

  Previous Post Next Post