ಕ್ಷುಲ್ಲಕ ಕಾರಣಕ್ಕೆ ಅರ್ಜಿ: ವಕೀಲರಿಗೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

 ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರ ನೇಮಕ ಕುರಿತು ಏಕ ಸದಸ್ಯ ನ್ಯಾಯಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ಸಾರ್ವಜನಿಕ ಸಮಯ ಹಾಳು ಮಾಡಿದ್ದಕ್ಕಾಗಿ ಸುಳ್ಯ ತಾಲೂಕಿನ ಪಂಜಿಗರ ಹೌಸ್‌ನ ವಕೀಲ ಪಿ ಮೋಹನ್ ಚಂದ್ರ ಅವರಿಗೆ ಹೈಕೋರ್ಟ್ ರೂ. 5 ಲಕ್ಷ ದಂಡ ವಿಧಿಸಿದೆ. 

               ಹೈಕೋರ್ಟ್

By : Rekha.M
Online Desk

ಬೆಂಗಳೂರು: ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರ ನೇಮಕ ಕುರಿತು ಏಕ ಸದಸ್ಯ ನ್ಯಾಯಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ಸಾರ್ವಜನಿಕ ಸಮಯ ಹಾಳು ಮಾಡಿದ್ದಕ್ಕಾಗಿ ಸುಳ್ಯ ತಾಲೂಕಿನ ಪಂಜಿಗರ ಹೌಸ್‌ನ ವಕೀಲ ಪಿ ಮೋಹನ್ ಚಂದ್ರ ಅವರಿಗೆ ಹೈಕೋರ್ಟ್ ರೂ. 5 ಲಕ್ಷ ದಂಡ ವಿಧಿಸಿದೆ. 

ಮೇಲ್ಮನವಿದಾರರು ಶುದ್ದ ಹಸ್ತದೊಂದಿಗೆ ನ್ಯಾಯಾಲಯದ ಮೆಟ್ಟೆಲೇರಿಲ್ಲ ಮತ್ತು ವಸ್ತುಸ್ಥಿತಿ ಅರಿಯುವಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ಅರಿತ ನ್ಯಾಯಾಧೀಶರಾದ ಬಿ. ವೀರಪ್ಪ ಮತ್ತು ಕೆ. ಎಸ್, ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠ, ವಕೀಲ ಮೋಹನ್ ಚಂದ್ರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.   5 ಲಕ್ಷ ರೂ. ದಂಡವನ್ನು ಬೆಂಗಳೂರು ವಕೀಲರ ಸಂಘದಲ್ಲಿ ಪಾವತಿಸುವಂತೆ ನಿರ್ದೇಶಿಸಿದೆ. ತೀರ್ಪಿನ ಸಂದರ್ಭದಲ್ಲಿ ಮೋಹನ್ ಚಂದ್ರ ವಕೀಲಿ ವೃತ್ತಿ ಅಭ್ಯಾಸ ಮಾಡುತ್ತಿರುವುದಾಗಿ ಬಹಿರಂಗಪಡಿಸಿರುವುದಾಗಿ ನ್ಯಾಯಪೀಠ ಹೇಳಿತು.

ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರ ಹುದ್ದೆಯ ಆಕಾಂಕ್ಷಿಯಾಗಿದ್ದ ಮೋಹನ್ ಚಂದ್ರ, ಮುಖ್ಯ ಮಾಹಿತಿ ಆಯುಕ್ತ ಎನ್ ಸಿ  ಶ್ರೀನಿವಾಸ್, ರಾಜ್ಯ  ಮಾಹಿತಿ ಆಯುಕ್ತರಾದ ಎಸ್‌ಎಂ ಸೋಮಶೇಖರ ಮತ್ತು ಕೆಪಿ ಮಂಜುನಾಥ ಅವರ ನೇಮಕ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 21, 2022 ರಂದು ಏಕ ನ್ಯಾಯಾಧೀಶರ ಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೋಹನ್ ಚಂದ್ರ ಮತ್ತೊಮ್ಮೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. 

ಮೇಲ್ಮನವಿದಾರರು ಕಾನೂನುಬದ್ಧವಾಗಿ ನೇಮಕಗೊಂಡಿರುವ ಪ್ರತಿವಾದಿಗಳಿಗೆ ಮಾಹಿತಿ ಹಕ್ಕು ಕಾಯಿದೆ, 2005 ರ ನಿಬಂಧನೆಗಳ ಪ್ರಕಾರ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ ವಿಭಾಗೀಯ ಪೀಠ, ಇತ್ತೀಚಿನ ವರ್ಷಗಳಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಊಹಾಪೋಹದ ಮೊಕದ್ದಮೆ ಸಲ್ಲಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಮುಂದೆಯೂ ಸಹ ಇಂತಹ ಮೊಕದ್ದಮೆಗಳನ್ನು ಸಲ್ಲಿಸಲಾಗುತ್ತಿದೆ. ಇಂತಹ ಮೊಕದ್ದಮೆಗಳನ್ನು ಮೊದಲ ಹಂತದಲ್ಲಿಯೇ ಕಳೆಗುಂದುವಂತೆ ನೋಡಿಕೊಳ್ಳುವುದು ನ್ಯಾಯಾಲಯಗಳ ಕರ್ತವ್ಯ ಎಂದು ತಿಳಿಸಿತು.


Post a Comment

Previous Post Next Post