ಹೃದಯಾಘಾತದಿಂದ ನಿಧನರಾದ ಉಮೇಶ್ ಕತ್ತಿ ಅವರ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಅಂತಿಮ ದರ್ಶನ ಜನಸಾಗರವೇ ಹರಿದುಬರುತ್ತಿದೆ.
ವಿಶ್ವರಾಜ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಉಮೇಶ್ ಕತ್ತಿ ಅಂತಿಮ ದರ್ಶನ
ಬೆಳಗಾವಿ: ಹೃದಯಾಘಾತದಿಂದ ನಿಧನರಾದ ಉಮೇಶ್ ಕತ್ತಿ ಅವರ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಅಂತಿಮ ದರ್ಶನ ಜನಸಾಗರವೇ ಹರಿದುಬರುತ್ತಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಹೊರವಲಯದಲ್ಲಿರುವ ವಿಶ್ವರಾಜ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಉಮೇಶ ಕತ್ತಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಪಾರ್ಥಿವ ಶರೀರ ಸ್ಥಳ ತಲುಪಲಿದ್ದು, ಈಗಾಗಲೇ ಅಪಾರ ಸಂಖ್ಯೆಯಲ್ಲಿ ಜನರು, ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ. ಹೆದ್ದಾರಿ ಆಸುಪಾಸಿನಲ್ಲಿ ಅಪಾರ ಸಂಖ್ಯೆಯ ವಾಹನಗಳು ಕಿಲೋಮೀಟರ್ ವರೆಗೆ ಸಾಲಾಗಿ ನಿಂತಿವೆ.
ಇನ್ನು ವಿಶ್ವರಾಜ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಉಮೇಶ ಕತ್ತಿ ಅವರ ಅಂತಿಮ ದರ್ಶನಕ್ಕೆ ಒಟ್ಟೂ ಮೂರು ಪ್ರತ್ಯೇಕ ಗೇಟ್ ಗಳನ್ನು ಮಾಡಲಾಗಿದ್ದು, ಎರಡು ಗೇಟ್ ಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಒಂದು ಗೇಟ್ ನಲ್ಲಿ ವಿಐಪಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಸಮಾಧಿ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು ಅಂತಿಮ ದರ್ಶನದ ಬಳಿಕ ಅಂತಿಮ ವಿಧಾನಗಳು ನಡೆಯಲಿವೆ ಎನ್ನಲಾಗಿದೆ.
ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ವಿ. ಕತ್ತಿ (62) ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದರು. ರಾತ್ರಿ ಶೌಚಾಲಯಕ್ಕೆ ತೆರಳಿದ್ದ ಅವರು ಅಲ್ಲಿಯೇ ಕುಸಿದುಬಿದ್ದಿದ್ದರು. ಹತ್ತು ನಿಮಿಷಗಳಾದರೂ ಹೊರ ಬರದಿದ್ದಾಗ ಕುಟುಂಬದವರು ಬಾಗಿಲು ತೆರೆದು ಒಳ ಹೋದಾಗ ಅಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಬಳಿಕ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತೀವ್ರನಿಗಾ ಘಟಕದಲ್ಲಿ ಇರಿಸಲಾಗಿತ್ತು. ತಡರಾತ್ರಿ ವೇಳೆಗೆ ಉಮೇಶ ಕತ್ತಿ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
Post a Comment