ನೋಯ್ಡಾದ ಹೌಸಿಂಗ್ ಸೊಸೈಟಿ ಗೋಡೆ ಕುಸಿದು ನಾಲ್ವರು ಸಾವು, ಒಂಬತ್ತು ಮಂದಿಗೆ ಗಾಯ

 ನೋಯ್ಡಾದ ಹೌಸಿಂಗ್ ಸೊಸೈಟಿಯೊಂದರ ಸುತ್ತಲಿನ ಗೋಡೆಯ ಒಂದು ಭಾಗ ಮಂಗಳವಾರ ಬೆಳಗ್ಗೆ ಕುಸಿದು ನಾಲ್ವರು ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಕ್ಟರ್ 21ರ ಜಲ ವಾಯು ವಿಹಾರದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

                 ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ

By : Rekha.M
Online Desk

ನೋಯ್ಡಾ: ಇಲ್ಲಿನ ಹೌಸಿಂಗ್ ಸೊಸೈಟಿಯೊಂದರ ಸುತ್ತಲಿನ ಗೋಡೆಯ ಒಂದು ಭಾಗ ಮಂಗಳವಾರ ಬೆಳಗ್ಗೆ ಕುಸಿದು ನಾಲ್ವರು ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಕ್ಟರ್ 21ರ ಜಲ ವಾಯು ವಿಹಾರದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

'ಸದ್ಯ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಿರಿಯ ಅಧಿಕಾರಿಗಳು ಸೇರಿದಂತೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳದಲ್ಲಿದ್ದಾರೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಘಟನೆ ಸಂಬಂಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ವ್ಯಕ್ತಪಡಿಸಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ನೋಯ್ಡಾದ ಜಿಲ್ಲಾಧಿಕಾರಿ ಸುಹಾಸ್ ಎಲ್‌.ವೈ ಮಾತನಾಡಿ 'ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳುಗಳ ವಿವರಗಳನ್ನು ಕಂಡುಹಿಡಿಯಲಾಗುತ್ತಿದೆ. ನೋಯ್ಡಾ ಪ್ರಾಧಿಕಾರವು ಸೆಕ್ಟರ್ 21ರ ಜಲ ವಾಯು ವಿಹಾರ್ ಬಳಿಯಲ್ಲಿ ಒಳಚರಂಡಿ ದುರಸ್ತಿ ಕಾಮಗಾರಿಯ ಗುತ್ತಿಗೆ ನೀಡಿತ್ತು. ಹೀಗಾಗಿ ಕಾರ್ಮಿಕರು ಇಟ್ಟಿಗೆಗಳನ್ನು ಗೊರತೆಗೆಯುವಾಗ ಗೋಡೆ ಕುಸಿದಿದೆ ಎಂದು ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ತನಿಖೆ ಮಾಡಲಾಗುತ್ತದೆ. ಜಿಲ್ಲಾ ಆಸ್ಪತ್ರೆ ಮತ್ತು ಕೈಲಾಶ್ ಆಸ್ಪತ್ರೆಯಲ್ಲಿ ತಲಾ ಇಬ್ಬರು ಸಾವಿಗೀಡಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಆದರೆ, ಒಟ್ಟು ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ' ಎಂದು ತಿಳಿಸಿದ್ದಾರೆ.


Post a Comment

Previous Post Next Post