ಭಾರೀ ವಂಚಕರ ಜಾಲ ಬಯಲು: ಮೂವರ ಬಂಧನ

 

ಮೈಸೂರು, ಸೆ.5- ನಕಲಿ ದಾಖಲೆ ಸೃಷ್ಟಿಸಿ ಯಾರದೋ ಆಸ್ತಿಯನ್ನು ಮತ್ಯಾರಿಗೋ ಮಾರಾಟ ಮಾಡುತ್ತಿದ್ದ ಮತ್ತು ಸರ್ಕಾರಿ ಹಾಗೂ ಖಾಸಗಿ ಆಸ್ತಿಗಳಿಗೆ ನಕಲಿ ಮಾಲೀಕರನ್ನು ಸೃಷ್ಟಿಸಿ ಬ್ಯಾಂಕ್‍ನಲ್ಲಿ ಸಾಲ ಪಡೆಯುತ್ತಿದ್ದ ಜಾಲವನ್ನು ಭೇದಿಸಿರುವ ಮೈಸೂರು ನಗರ ಪೊಲೀಸರು ಮೂವರನ್ನು ಬಂಧಿಸಿ, ವಿವಿಧ ಇಲಾಖೆಗಳು ಹಾಗೂ ಅಧಿಕಾರಿಗಳ ಸೀಲ್‍ಗಳು, ನಕಲಿ ಇ-ಸ್ಟ್ಯಾಂಪ್ ಪೇಪರ್‍ಗಳು, ಲ್ಯಾಪ್‍ಟಾಪ್, ಪ್ರಿಂಟರ್ ಹಾಗೂ ಮೊಬೈಲ್‍ಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ವಂಚಕರು ಶಾಸಕರೊಬ್ಬರ ತಂದೆಯ ಆಸ್ತಿಗೇ ನಕಲಿ ಮಾಲೀಕನನ್ನು ಸೃಷ್ಟಿಸಿ ಮಾರಾಟ ಮಾಡಿದ್ದರು. ಈ ಸಂಬಂಧ ಮೇಟಗಳ್ಳಿ ಠಾಣೆಯಲ್ಲಿ ಕಳೆದ ಜನವರಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೈಸೂರಿನ ಯಾದವಗಿರಿ ಯಲ್ಲಿರುವ 80×100 ಅಳತೆಯ ಮುಡಾಗೆ ಸೇರಿದ ನಿವೇಶನದ ಮೇಲೆ ಬ್ಯಾಂಕ್‍ನಲ್ಲಿ ಸಾಲ ಪಡೆಯಲು ಪ್ರಯತ್ನಿಸಿದ್ದು, 2 ವರ್ಷಗಳ ಹಿಂದೆ ಈ ಕುರಿತು ಮುಡಾ ಆಯುಕ್ತರು ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖ ಲಿಸಿದ್ದರು. ಬೆಂಗಳೂರು ಶಿವಾಜಿನಗರ ಶಾಸಕ ಅರ್ಷದ್ ಅವರ ತಂದೆಯ ಆಸ್ತಿಗೆ ಸಂಬಂಧಿ ಸಿದ ಪ್ರಕರಣವು ತಾಲೂಕು ಕಚೇರಿಯಲ್ಲಿ ಆರ್‍ಟಿಸಿ ಬದಲಾವಣೆ ಮಾಡಲು ಅರ್ಜಿ ಸಲ್ಲಿಸಿದಾಗ ಬೆಳಕಿಗೆ ಬಂದಿದ್ದು, ಯಾದವ ಗಿರಿಯ ಮುಡಾ ನಿವೇಶನದ ಪ್ರಕರಣವು ಬ್ಯಾಂಕ್‍ನ ಕಾನೂನು ಸಲಹೆಗಾರರು ದಾಖಲೆ ಪತ್ರಗಳನ್ನು ಪರಿಶೀಲಿಸಿದ ವೇಳೆ ಬೆಳಕಿಗೆ ಬಂದಿದೆ. ಈ ವಂಚಕರಿಂದ ಯಾರದೋ ಆಸ್ತಿಯನ್ನು ಖರೀದಿ ಮಾಡಿರುವ ಅಮಾಯಕರು ಇನ್ನಷ್ಟು ಮಂದಿ ಇರಬಹುದು. ಅವರು ದಾಖಲೆಗಳನ್ನು ಪರಿಶೀಲಿಸದೆ ಇರುವುದರಿಂದ ಆ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದು ಹೇಳಲಾಗುತ್ತಿದೆ.

ಲಕ್ಷ್ಮೀಪುರಂ ಮತ್ತು ಮೇಟಗಳ್ಳಿ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಒಬ್ಬನೇ ಕಿಂಗ್‍ಪಿನ್ ಎಂಬುದನ್ನು ಪತ್ತೆ ಮಾಡಿದ್ದ ಮೈಸೂರು ನಗರ ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬೀಸಿದ್ದರು. ಈ ವ್ಯಕ್ತಿ ಪದೇ ಪದೆ ಮೊಬೈಲ್‍ಗಳನ್ನು ಬದಲಾವಣೆ ಮಾಡುತ್ತಿದ್ದರಿಂದ ಆತನ ಸುಳಿವೇ ಸಿಗುತ್ತಿರಲಿಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ ಮೈಸೂರಿನ ರಾಮಕೃಷ್ಣನಗರ ವಿಶ್ವಮಾನವ ಜೋಡಿರಸ್ತೆಯಲ್ಲಿರುವ ಗೋಲ್ಡನ್ ಬೆಲ್ಸ್ ಸರ್ವೀಸ್ ಅಪಾರ್ಟ್‍ಮೆಂಟ್‍ನ ಕೊಠಡಿ ಸಂಖ್ಯೆ 301ರಲ್ಲಿ ಪ್ರಕರಣದ ಕಿಂಗ್‍ಪಿನ್ ಇದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್‍ಗುಂಟಿ ನೇತೃತ್ವದಲ್ಲಿ ಎಸಿಪಿ ಗಂಗಾಧರಸ್ವಾಮಿ, ಕುವೆಂಪುನಗರ ಠಾಣೆ ಇನ್ಸ್‍ಪೆಕ್ಟರ್ ಗೋಪಾಲ್, ಎಎಸ್‍ಐ ಮುರಳೀಗೌಡ, ಸಿಬ್ಬಂದಿಗಳಾದ ಕೃಷ್ಣ, ಮಂಜುನಾಥ್, ರಾಜುಸಾಬ್, ಪುರುಷೋತ್ತಮ್, ಚೇತನ್, ಶಿವಪ್ರಸಾದ್, ಪ್ರಸನ್ನ, ಹಜ್ರತ್ ಮತ್ತು ಮೌನೇಶ್ ಅವರನ್ನೊಳಗೊಂಡ ತಂಡ ಇಂದು ಮಧ್ಯಾಹ್ನ ದಾಳಿ ನಡೆಸಿತು.

ಪೊಲೀಸರು ದಾಳಿ ನಡೆಸಿದ ವೇಳೆ ಕೊಠಡಿಯಲ್ಲಿದ್ದ ಮೂವರು ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದದ್ದು ಕಂಡುಬಂತು. ಮುಡಾ, ತಾಲೂಕು ಕಚೇರಿ ಹಾಗೂ ಅಧಿಕಾರಿಗಳ ಹೆಸರುಳ್ಳ ನಕಲಿ ಸೀಲ್‍ಗಳು, ವಿವಿಧ ಬ್ಯಾಂಕ್‍ಗಳ ನಕಲಿ ಸೀಲ್‍ಗಳು, ನಕಲಿ ಇ-ಸ್ಟ್ಯಾಂಪ್‍ಗಳು, ಖಾಲಿ ದಸ್ತಾವೇಜು ಪೇಪರ್‍ಗಳು, ಪ್ರಿಂಟರ್, ಲ್ಯಾಪ್‍ಟಾಪ್, ಇಂಕ್ ಮುಂತಾದವುಗಳು ಕಂಡುಬಂದಿದ್ದು, ಅವುಗಳನ್ನು ವಶಪಡಿಸಿ ಕೊಂಡ ಪೊಲೀಸರು, ಮೂವರನ್ನೂ ಬಂಧಿಸಿದ್ದಾರೆ. ಯಾರದೋ ಆಸ್ತಿಗಳಿಗೆ ನಕಲಿ ಮಾಲೀಕರನ್ನು ಸೃಷ್ಟಿಸುತ್ತಿದ್ದ ಈ ವಂಚಕರು ನಿವೃತ್ತರು, ವೃದ್ಧರು ಹಾಗೂ ಅನಕ್ಷರಸ್ಥರನ್ನೇ ಟಾರ್ಗೆಟ್ ಮಾಡಿಕೊಂಡು ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಇವರು ನೀಡಿದ ನಕಲಿ ದಾಖಲೆಗಳನ್ನು ಅಸಲಿ ಎಂದು ನಂಬಿ ಖರೀದಿಸಿದವರು ಹಣ ಕಳೆದುಕೊಳ್ಳುವುದು ಮಾತ್ರವಲ್ಲದೆ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಅಲೆದಾಡುವುದು ಕೂಡ ಉಂಟು. ಇವರ ಬಳಿ ಪಡೆದ ನಕಲಿ ದಾಖಲೆಗಳನ್ನು ಸರ್ಕಾರಿ ಕಚೇರಿಗಳಿಗೆ ಸಲ್ಲಿಸಿದ ಕೆಲವು ಅಮಾಯಕರ ವಿರುದ್ಧ ಕ್ರಿಮಿನಲ್ ಕೇಸ್ ಕೂಡ ದಾಖಲಾಗಿದೆ ಎಂದು ಹೇಳಲಾಗಿದೆ.

ಶಾಸಕರ ತಂದೆಯ ಆಸ್ತಿ: ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರ ತಂದೆ ಆರ್.ಕ್ಯೂ. ಅರ್ಷದ್ ಅವರು 1980ರ ಅಕ್ಟೋಬರ್ 22ರಂದು ಶ್ಯಾದನಹಳ್ಳಿ ಗ್ರಾಮದ ಸರ್ವೇ ನಂ.64ರಲ್ಲಿ 3 ಎಕರೆ ಜಮೀನನ್ನು ಜವರೇಗೌಡ ಎಂಬುವರ ಮಕ್ಕಳಾದ ತಿಮ್ಮೇಗೌಡ ಮತ್ತು ಚಿಕ್ಕಣ್ಣ ಎಂಬುವರಿಂದ ಖರೀದಿ ಮಾಡಿದ್ದರು. ಈ ಜಮೀನು ಪೋಡಿಯಾದಾಗ ಸರ್ವೆ ನಂ.133 ಎಂದು ಆರ್‍ಟಿಸಿಯಲ್ಲಿ ನಮೂದಾಗಿತ್ತು. ಈ ಜಮೀನಿನ ಮೂಲ ಮಂಜೂರಾತಿದಾರರಾದ ಜವರೇಗೌಡ ಮೃತಪಟ್ಟಿದ್ದರಿಂದ ಅವರ ಮಕ್ಕಳು ಆರ್.ಕ್ಯೂ. ಅರ್ಷದ್ ಅವರಿಗೆ ಜಮೀನು ಮಾರಾಟ ಮಾಡಿದ್ದರು. 1981-82ನೆ ಸಾಲಿನಲ್ಲಿ ಈ ಜಮೀನನ್ನು ಅಂದಿನ ಜಿಲ್ಲಾಧಿಕಾರಿಗಳು ಕೈಗಾರಿಕಾ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿದ್ದರು. ಆದರೆ, ವಂಚಕರು ಜಮೀನಿನ ಮೂಲ ಮಂಜೂರಾತಿದಾರರಾದ ದಿವಂಗತ ಜವರೇಗೌಡರ ಹೆಸರಲ್ಲೇ ನಕಲಿ ದಾಖಲೆಯನ್ನು ಸೃಷ್ಟಿಸಿದ್ದಲ್ಲದೆ, ಜವರೇಗೌಡ ಎಂಬ ನಕಲಿ ವ್ಯಕ್ತಿಯನ್ನೂ ಕೂಡ ಬಳಸಿಕೊಂಡು ಜಮೀನನ್ನು ದುರ್ಗಾಪ್ರಸಾದ್ ಮತ್ತು ಕುಮಾರ್ ಎಂಬುವರಿಗೆ 2021ರ ಅಕ್ಟೋಬರ್ 31ರಂದು ಮಾರಾಟ ಮಾಡಿದ್ದರು. ಜಮೀನು ಖರೀದಿಸಿದವರು ಆರ್‍ಟಿಸಿಯಲ್ಲಿ ಹೆಸರು ಬದಲಾವಣೆ ಮಾಡಲು ತಹಸೀಲ್ದಾರರ ಕಚೇರಿಗೆ ಅರ್ಜಿ ಸಲ್ಲಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ 2022ರ ಜನವರಿ 21ರಂದು ತಹಸೀಲ್ದಾರ್ ಕೆ.ಆರ್. ರಕ್ಷಿತ್ ಅವರು ಮೇಟಗಳ್ಳಿ ಠಾಣೆಯಲ್ಲಿ ಜವರೇಗೌಡ, ಶಿವಮ್ಮ, ಸುಶೀಲ, ಅನಿಲ್‍ಕುಮಾರ್, ದುರ್ಗಾಪ್ರಸಾದ್ ಮತ್ತು ಬಿ. ಕುಮಾರ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ದುರ್ಗಾಪ್ರಸಾದ್ ಮತ್ತು ಬಿ. ಕುಮಾರ್ ಎಂಬುವರು ನಕಲಿ ದಾಖಲೆಗಳನ್ನು ನಂಬಿ ಜಮೀನು ಖರೀದಿಸಿದವರಾದರೆ ಉಳಿದವರು ಮಾರಾಟಗಾರರು ಎಂದು ಹೇಳಲಾಗಿದೆ.

ಯಾದವಗಿರಿ ನಿವೇಶನ: ಯಾದವಗಿರಿಯ 152ನೇ ಸಂಖ್ಯೆಯ 80×100 ನಿವೇಶನದ ಮೇಲೆ ಸಾಲ ಪಡೆಯಲು ಮೈಸೂರಿನ ಗೌಸಿಯಾನಗರದ ಮೊಹಮ್ಮದ್ ನಯೀಂ, ರಾಜೀವ್‍ನಗರದ ಗೈಡ್ ಮುಬಾರಕ್ ಷರೀಫ್ ಮತ್ತು ಉದಯಗಿರಿಯ ಶಹಜಹಾನ್ ಅವರುಗಳು ಸ್ಟೇಟ್ ಬ್ಯಾಂಕ್ ಇಂಡಿಯಾದ ನಕಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರು. ಎಸ್‍ಬಿಐನ ಪ್ಯಾನೆಲ್ ವಕೀಲರಾದ ಶ್ರೀಮತಿ ಸೀತಾದೇವಯ್ಯ ಅವರ ಬಳಿ ಕಾನೂನು ಅಭಿಪ್ರಾಯಕ್ಕೆ ದಾಖಲೆಗಳನ್ನು ಬ್ಯಾಂಕ್ ಸಲ್ಲಿಸಿತ್ತು. ಅವರು ಪರಿಶೀಲನೆ ನಡೆಸಿದಾಗ ಈ ದಾಖಲೆಗಳು ಮುಡಾದಿಂದ ನೀಡಲ್ಪಟ್ಟ ದಾಖಲೆಗಳಾಗಿಲ್ಲದೆ, ನಕಲಿ ದಾಖಲೆಗಳು ಎಂಬುದು ಬೆಳಕಿಗೆ ಬಂದಿದೆ. ಈ ವ್ಯಕ್ತಿಗಳು ಬೆಂಗಳೂರಿನ ಅಕ್ರಂ ಮತ್ತು ಚಾರ್ಟೆಡ್ ಅಕೌಂಟೆಡ್ ಶ್ರೀನಿವಾಸಮೂರ್ತಿ ಅವರು ತಿಳಿಸಿದ ಮೇರೆಗೆ ವಕೀಲರ ಕಚೇರಿಗೆ ಬಂದಿರುವುದಾಗಿ ತಿಳಿಸಿದ್ದರು. ನೈಜ ಸ್ಥಿತಿ ಎಂದರೆ ಸದರಿ ನಿವೇಶನವು ಮುಡಾಗೆ ಸೇರಿದ ನಿವೇಶನವಾಗಿತ್ತು. ಈ ಸಂಬಂಧ 2020ರ ಡಿಸೆಂಬರ್ 31ರಂದು ಅಂದಿನ ಮುಡಾ ಆಯುಕ್ತ ನಟೇಶ್ ಅವರು ಲಕ್ಷ್ಮೀಪುರಂ ಠಾಣೆಗೆ ದೂರು ಸಲ್ಲಿಸಿದ್ದರು.Post a Comment

Previous Post Next Post