ರಾಹುಲ್ ನಾಯಕತ್ವಕ್ಕೆ ಅವಕಾಶ

 

ರಾಹುಲ್ ಗಾಂಧಿ ಅವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಪಕ್ಷವು ಬುಧವಾರ ಭಾರತ್ ಜೋಡೊ ಯಾತ್ರೆಯನ್ನು ಆರಂಭಿಸಿದೆ.

ಈ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ,ದೆಹಲಿ, ಪಂಜಾಬ್, ಚಂಡೀಗಡ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಹಾದುಹೋಗಲಿದ್ದು, ಹಲವು ತಿಂಗಳುಗಳ ಕಾಲ ಈ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಬಾವುಟಗಳು ಹಾರಾಡಲಿವೆ.

ಎಲ್ಲರನ್ನೂ ಒಳಗೊಳ್ಳುವ ಮೂಲಕ ದೇಶದ ಏಕತೆಯನ್ನು ಸಾರುವ ಉದ್ದೇಶ ಕೂಡ ಯಾತ್ರೆಗೆ ಇದೆ. ಈ ಯಾತ್ರೆಯು ಪಕ್ಷದಲ್ಲಿ ಹೊಸ ಚೈತನ್ಯ ವನ್ನು ತುಂಬಲಿದೆ ಎಂಬ ನಿರೀಕ್ಷೆಯು ಕಾರ್ಯಕರ್ತರಲ್ಲಿಯೂ ನಾಯಕರಲ್ಲಿ ಯೂ ಇದೆ. ಆದರೆ, ಪಕ್ಷಕ್ಕೆ ಒಬ್ಬ ಗಟ್ಟಿ ನಾಯಕ ಇಲ್ಲದಿದ್ದರೆ, ಸಂಘಟನೆ ಯಲ್ಲಿ ಒಗ್ಗಟ್ಟು ಕಾಣದಿದ್ದರೆ, ಹೊಸ ಚೈತನ್ಯ ಮತ್ತು ಹೊಸ ದಿಕ್ಕು ಇಲ್ಲದಿದ್ದರೆ ಇಡೀ ಯಾತ್ರೆಯು ಠುಸ್ ಆಗುವ ಸಾಧ್ಯತೆ ಬಹಳಷ್ಟಿದೆ.

ಕಾಂಗ್ರೆಸ್ ಪಕ್ಷವು ತನ್ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡಲು ಪ್ರಕ್ರಿಯೆಯನ್ನು ಶುರು ಮಾಡಿದಷ್ಟೇ ಬೇಗ ತಣ್ಣಗಾಗಿಸಿದೆ. ಗಾಂಧಿ ಕುಟುಂಬದ ಹೊರತು ಯಾರಾದರೊಬ್ಬರು ಈ ಬಾರಿ ಪಕ್ಷದ ಚುಕ್ಕಾಣಿ ಹಿಡಿಯಬಹುದು ಎಂಬ ಭರವಸೆ ಪಕ್ಷದ ನಾಯಕರಲ್ಲಿ ಮೂಡಿತ್ತು. ಆದರೆ, ಇದೀಗ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ತಣ್ಣಗಾಗಿದ್ದರಿಂದ ಪಕ್ಷದಲ್ಲಿ ಉತ್ಸಾಹದ ವಾತಾವರಣ ಇಲ್ಲ. ಅಲ್ಲದೆ, ರಾಹುಲ್ ಗಾಂಧಿ ನಾಯಕತ್ವವನ್ನು ವಿರೋಧಿಸಿ ಘಟಾನುಘಟಿ ನಾಯಕರು ಪಕ್ಷವನ್ನು ತೊರೆಯುತ್ತಿರುವುದು ಮತ್ತೊಂದೆಡೆ ಮುಖಭಂಗ.

ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ಹಿಮಾಚಲ ಪ್ರದೇಶದಲ್ಲಿ ಪಕ್ಷದ ಸ್ಥಾನಗಳಿಗೆ ಕ್ರಮವಾಗಿ ಗುಲಾಂ ನಬಿ ಆಜಾದ್ ಮತ್ತು ಆನಂದ ಶರ್ಮಾ ಅವರು ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. ಇವರಿಬ್ಬರೂ ಪಕ್ಷದ ಪ್ರಮುಖ ನಾಯಕರು. ಯಾತ್ರೆಯು
ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಪಕ್ಷದೊಳಗೆ ನಡೆಯುತ್ತಿರುವ ಇಂತಹ ವಿದ್ಯಮಾನಗಳು ನಿರಾಸೆ ಮೂಡಿಸಿವೆ. ಇಂತಹ ಸನ್ನಿವೇಶದಲ್ಲೂ ರಾಹುಲ್ ಗಾಂಧಿ ಅವರೇ ಭಾರತ್‌ಜೋಡೋ ಯಾತ್ರೆಯ ನೇತೃತ್ವ ವಹಿಸಿದ್ದು, ಅವರ ನಾಯಕತ್ವ ಸಾಬೀತುಪಡಿಸಲು ಇದೊಂದು ಸುವರ್ಣಾವಕಾಶವೇ ಎನ್ನಬಹುದು. ಆದರೆ ಅದು ಈ ಯಾತ್ರೆ ಎಷ್ಟರಮಟ್ಟಿಗೆ ಯಶಸ್ವಿ ಯಾಗಲಿದೆ ಎಂಬುದರ ಮೇಲೆ ನಿರ್ಧಾರವಾಗಲಿದೆ.


Post a Comment

Previous Post Next Post