ಮಹಾಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ, ಯುವತಿ ಸಾವು: ಹೊಳೆಯಂತಾದ ರಸ್ತೆಗಳು, ಪ್ರವಾಹಪೀಡಿತ ಬೆಂಗಳೂರು ಸ್ಥಿತಿಗತಿ

 ಉದ್ಯಾನನಗರಿ, ಐಟಿ ನಗರಿ ಎಂದು ಹೆಸರು ಗಳಿಸಿರುವ ಬೆಂಗಳೂರಿನಲ್ಲಿ ವರುಣಾರ್ಭಟದಿಂದ ಕಳೆದೆರಡು ದಿನಗಳಿಂದ ಪ್ರಳಯಕ್ಕೆ ಜನ ತತ್ತರಿಸಿ ಹೋಗಿದ್ದಾರೆ(Heavy rain Bengaluru). ರಾಜಧಾನಿಯ ಪ್ರತಿಷ್ಠಿತ ಬಡಾವಣೆಗಳೇ ನೀರಿನಿಂದ ಮುಳುಗಡೆಯಾಗಿವೆ. ರಾಜಧಾನಿಗೆ ಜಲಗಂಡಾಂತರ ಎದುರಾಗಿದೆ. ಎಸ್ ಡಿಆರ್ ಎಫ್, ಎನ್ ಡಿಆರ್ ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

                                 ಬೆಂಗಳೂರಿನ ಆರ್‌ಎಂಝಡ್ ಇಕೋಸ್ಪೇಸ್ ಬಳಿ ವಾಹನಗಳು ಪ್ರವಾಹಪೀಡಿತ                                                                              ನೀರಿನಿಂದ ತುಂಬಿರುವ ಹೊರ ವರ್ತುಲ ರಸ್ತೆಯಲ್ಲಿ ಚಲಿಸುತ್ತಿರುವುದು

By : Rekha.M
Online Desk

ಬೆಂಗಳೂರು: ಉದ್ಯಾನನಗರಿ, ಐಟಿ ನಗರಿ ಎಂದು ಹೆಸರು ಗಳಿಸಿರುವ ಬೆಂಗಳೂರಿನಲ್ಲಿ ವರುಣಾರ್ಭಟದಿಂದ ಕಳೆದೆರಡು ದಿನಗಳಿಂದ ಪ್ರಳಯಕ್ಕೆ ಜನ ತತ್ತರಿಸಿ ಹೋಗಿದ್ದಾರೆ(Heavy rain Bengaluru). ರಾಜಧಾನಿಯ ಪ್ರತಿಷ್ಠಿತ ಬಡಾವಣೆಗಳೇ ನೀರಿನಿಂದ ಮುಳುಗಡೆಯಾಗಿವೆ. ರಾಜಧಾನಿಗೆ ಜಲಗಂಡಾಂತರ ಎದುರಾಗಿದೆ. ಎಸ್ ಡಿಆರ್ ಎಫ್, ಎನ್ ಡಿಆರ್ ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. 

ಎಲ್ಲಿ ನೋಡಿದರಲ್ಲಿ ನೀರು, ರಸ್ತೆಯೆಲ್ಲಾ ಹೊಳೆಯಂತಾಗಿ ದೋಣಿಗಳು ಚಲಿಸುತ್ತಿವೆ, ಜನರು ಈಜಾಡಿಕೊಂಡು ಹೋಗುವಂತಾಗಿದೆ ಪರಿಸ್ಥಿತಿ. ಅನೇಕ ಕಡೆ ಅಪಾರ್ಟ್ ಮೆಂಟ್ ಗಳ ಬೇಸ್ ಮೆಂಟ್ ಗೆ ನೀರು ಹೋಗಿ ನೆಲಮಹಡಿಯವರೆಗೆ ನೀರು ಆವೃತವಾಗಿ ಜನರು ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಸರ್ಜಾಪುರ, ಎಲೆಕ್ಟ್ರಾನಿಕ್ಸ್ ಸಿಟಿ, ಮಹದೇವಪುರ, ವೈಟ್ ಫೀಲ್ಡ್, ಮಾರತ್ ಹಳ್ಳಿ, ಕೋರಮಂಗಲ ಗಳಲ್ಲಿ ಅಪಾರ್ಟ್ ಮೆಂಟ್ ಗಳ ಪಾರ್ಕಿಂಗ್ ಜಾಗದಲ್ಲಿ ನೀರು ತುಂಬಿ ವಾಹನಗಳು ತೇಲುತ್ತಿವೆ. ನೀರಿನಲ್ಲಿ ವಿಷಜಂತುಗಳು, ಕೊಳಕು ವಸ್ತುಗಳು ತೇಲಿ ಬರುತ್ತಿದ್ದು ನಿವಾಸಿಗಳಿಗೆ ಮತ್ತಷ್ಟು ಭಯ, ಆತಂಕ ಎದುರಾಗಿದೆ.
ಬೆಂಗಳೂರಿನ ಮಾರತ್ತಹಳ್ಳಿ-ಸಿಲ್ಕ್ ಬೋರ್ಡ್ ರಸ್ತೆಯ ಹೊರ ವರ್ತುಲ ರಸ್ತೆಯಲ್ಲಿ ಭಾರೀ ಮಳೆಯಿಂದಾಗಿ ಭಾರೀ ಪ್ರಮಾಣದ ಜಲಾವೃತವಾಗಿದ್ದು ಸಂಚಾರ ದಟ್ಟಣೆ ಮುಂದುವರಿದಿದೆ.

ವಿಮಾನ ಹಾರಾಟಕ್ಕೆ ವ್ಯತ್ಯಯ: ಪ್ರತಿಕೂಲ ಹವಾಮಾನದಿಂದಾಗಿ ಭಾರೀ ಮಳೆಯಿಂದಾಗಿ ವಿಮಾನಗಳ ಹಾರಾಟ ತಡವಾಗಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಬಹುತೇಕ ಐಟಿ ಕಂಪೆನಿಗಳಿಗೆ ಇಂದು ಕೂಡ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂ ವ್ಯವಸ್ಥೆ ನೀಡಲಾಗಿದೆ. ಇನ್ನು ಹಲವು ಕಂಪೆನಿಗಳಲ್ಲಿ ಯಮಲೂರು ಪ್ರದೇಶದಲ್ಲಿ ಉದ್ಯೋಗಿಗಳು ಟ್ರ್ಯಾಕ್ಟರ್ ಬಳಸಿ ಕಚೇರಿಗೆ ಕಚೇರಿಯಿಂದ ಮನೆಗೆ ಹೋಗುತ್ತಿರುವ ದೃಶ್ಯ ಕಂಡುಬಂದಿದೆ.

ಬೆಂಗಳೂರಿನಲ್ಲಿ ಇನ್ನೂ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇನ್ನು ಮುಂದಿನ 4 ದಿನ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೆಪ್ಟೆಂಬರ್ 9 ಶುಕ್ರವಾರದವರೆಗೆ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.ಬೆಂಗಳೂರಿನಲ್ಲಿ ಇಂದಿನಿಂದ 2 ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 7ರಿಂದ 9ರವರೆಗೆ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಿಗೆ ಕೂಡ ಮೂರು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ 4 ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದಿನಿಂದ ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ. ಬೀದರ್, ಕಲಬುರಗಿ, ವಿಜಯಪುರ, ಗದಗ, ಧಾರವಾಡ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಮುಂದಿನ 4 ದಿನಗಳ ಕಾಲ ಮಳೆಯಾವ ಸಾಧ್ಯತೆ ದಟ್ಟವಾಗಿದೆ.

ಯುವತಿ ಸಾವು; ಬೆಂಗಳೂರಿನ ಮಳೆಗೆ ಯುವತಿ ಮೃತಪಟ್ಟಿರುವ ವರದಿಯಾಗಿದೆ. ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾಪುರದಲ್ಲಿ ಈ ಘಟನೆ ನಡೆದಿದೆ.23 ವರ್ಷದ ಅಖಿಲಾ ಮೃತ ಯುವತಿ. ಮಾರತಹಳ್ಳಿಯಿಂದ ವರ್ತೂರು ಕೋಡಿ ಮಾರ್ಗ ಮಧ್ಯೆ ನಿನ್ನೆ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದೆ. ನಿನ್ನೆ ರಾತ್ರಿ 8 ಗಂಟೆಗೆ ಶಾಲೆಯಲ್ಲಿ ಕೆಲಸ ಮುಗಿಸಿ ಹೊರಟಿದ್ದ ಅಖಿಲಾ ರಾತ್ರಿ 9.30ಕ್ಕೆ ಸಿದ್ದಾಪುರದ ಮಯೂರು ಬೇಕರಿ ಬಳಿ ಬಂದಿದ್ದಾರೆ. ರಸ್ತೆಯಲ್ಲಿ ಮಂಡಿಯುದ್ದಕ್ಕೆ ನೀರು ನಿಂತಿತ್ತು. ನೀರಿನ ಮಧ್ಯೆಯೇ ಅಖಿಲಾ ಸ್ಕೂಟರ್ ಚಲಾಯಿಸಿಕೊಂಡು ಬಂದಿದ್ದರು. 

ನೀರು ಹೆಚ್ಚಾಗಿದ್ದರಿಂದ ಸ್ಕೂಟರ್ ಆಫ್ ಆಗಿ ಬೀಳುವ ಸಮಯದಲ್ಲಿ ಸಹಾಯಕ್ಕೆ ಬಲ ಭಾಗದಲ್ಲೇ ಇದ್ದ ಎಲೆಕ್ಟ್ರಿಕಲ್ ಪೋಲ್ ಕಂಬವನ್ನು ಮುಟ್ಟಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಮೃತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಳಗೆ ಬಿದ್ದ ಯುವತಿಯನ್ನು ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಖಿಲಾ ಮೃತರಾಗಿದ್ದಾರೆ.

ಇದೀಗ ಘಟನಾ ಸ್ಥಳಕ್ಕೆ ವೈಟ್ ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ವೈದೇಹಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ. ಬೆಸ್ಕಾಂ ಹಾಗೂ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಯುವತಿ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ.

ಸಹಾಯವಾಣಿಗೆ ಕರೆ ಮಾಡಿ: ನಿಮ್ಮ ಮನೆ, ಬೀದಿ ಅಥವಾ ಏರಿಯಾದಲ್ಲಿ ಮಳೆಯಿಂದ ಯಾವುದೇ ಸಮಸ್ಯೆ ಉಂಟಾದಲ್ಲಿ ಬಿಬಿಎಂಪಿ ಸಹಾಯವಾಣಿಗೆ ಕರೆ ಮೂಲಕ ಮಾಹಿತಿ ನೀಡಬಹುದು.1533 ಗೂ ಕರೆ ಮಾಡಿ ಮಳೆ ಅನಾಹುತ ಬಗ್ಗೆ ಮಾಹಿತಿ ನೀಡಬಹುದು. ಸಹಾಯಕ್ಕಾಗಿ ಮನವಿ ಮಾಡಬಹುದು.  ಅಥವಾ 2266 0000 ಸಂಖ್ಯೆಯನ್ನೂ ಸಂಪರ್ಕಿಸಬಹುದು.  WhatsApp ಮೂಲಕ  94806 85700 ಈ ಸಂಖ್ಯೆಗೆ ನಿಮ್ಮ ಸಮಸ್ಯೆ ತಿಳಿಸಬಹುದು.

ಕೆಲ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ: ಮಳೆಯಿಂದಾಗಿ ಸರ್ಜಾಪುರ, ಬೆಳ್ಳಂದೂರು ಮಾರತಹಳ್ಳಿ, ಔಟರ್ ರಿಂಗ್​ರೋಡ್​ಗಳಲ್ಲಿ ನೀರು ನಿಂತಿದೆ. ರಸ್ತೆಗಳಲ್ಲಿ ನೀರು ಕಡಿಮೆಯಾಗದ ಹಿನ್ನೆಲೆಯಲ್ಲಿ ರಸ್ತೆಗಳ ಮೇಲೆ ಸಂಚಾರ ದುಸ್ತರವಾಗಿದೆ. ಇಂದೂ ಮಳೆಯಾಗಬಹುದು ಎಂಬ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ನಗರದ ಮಹದೇವಪುರ, ಬೊಮ್ಮನಹಳ್ಳಿ, ಕೃಷ್ಣರಾಜಪುರ (ಕೆಆರ್ ಪುರಂ) ಮತ್ತು ಮಂಡೂರು ವ್ಯಾಪ್ತಿಯ ಎಲ್ಲ ಸರ್ಕಾರಿ, ಅನುದಾನಿತ ಶಾಲಾ-ಕಾಲೇಜುಗಳಿಗೆ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ. 

ಮಾರತ್ತಹಳ್ಳಿ-ಸರ್ಜಾಪುರ ರಿಂಗ್​ರೋಡ್ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಇಂದು ರಿಂಗ್​ರೋಡ್​ನಲ್ಲಿ ಲಘು ವಾಹನಗಳಿಗೆ ನಿಷೇಧ ವಿಧಿಸಲಾಗಿದೆ. ಬೆಂಗಳೂರಿನ ಔಟರ್​ ರಿಂಗ್​​ ರೋಡ್​ನಲ್ಲಿ ಸಿಲುಕಿದ್ದ ಬೆಂಜ್ ಕಾರ್​ನಲ್ಲಿ ಮೂವರು ಹೊರಬರಲು ಪರದಾಡಿದರು. ಸಹಾಯ ಮಾಡುವಂತೆ ಸವಾರರು ಕೂಗುತ್ತಿರುವ ಘಟನೆ ಮಾರತ್ತಹಳ್ಳಿಯ ಔಟರ್​ ರಿಂಗ್​ ರೋಡ್​​ನಲ್ಲಿ ನಡೆದಿದೆ.

ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಇಂದೂ ಸಹ ಟ್ರಾಫಿಕ್ ಜಾಮ್ ಆಗಬಹುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.ಬೆಂಗಳೂರಿನ ಸನ್ನಿ ಬ್ರೂಕ್ಸ್ ಲೇಔಟ್​ ಸಂಪೂರ್ಣವಾಗಿ ಜಲಾವೃತವಾಗಿದೆ. ನೀರಿನ ಪ್ರಮಾಣ ಇಂದು ಮತ್ತಷ್ಟು ಹೆಚ್ಚಾಗಿದ್ದು, ಜನರು ಲೇಔಟ್​ನಿಂದ ಹೊರಬರಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಲೇಔಟ್ ಒಳಭಾಗದಲ್ಲಿ ಮನೆಗಳ ಮುಂದೆ ನಿಲ್ಲಿಸಿರುವ ಐಷಾರಾಮಿ ಕಾರುಗಳು ನೀರಿನಲ್ಲಿ ತೇಲುತ್ತಿವೆ. ಕೆಲವೆಡೆ ಮನೆಯೊಳಗಿನ ಸೋಪಾಗಳು ತೇಲಿ ಹೊರಗೆ ಬಂದಿವೆ. ತುರ್ತು ಕೆಲಸಗಳಿಗೆ ಟ್ರ್ಯಾಕ್ಟರ್ ಮೂಲಕ ನಿವಾಸಿಗಳು ಸಂಚರಿಸುತ್ತಿದ್ದಾರೆ. ಸರ್ಜಾಪುರ ರಸ್ತೆಯ ದಿ ಕಂಟ್ರೀಸೈಡ್ ಅಪಾರ್ಟ್​ಮೆಂಟ್ ಸಂಪೂರ್ಣ ಜಲಾವೃತಗೊಂಡಿದೆ. ರೈನ್ ಬ್ರೂ ಡ್ರೈವ್ ಬಡಾವಣೆ ಪಕ್ಕದ ಕಂಟ್ರಿಸೈಡ್ ಅಪಾರ್ಟಮೆಂಟ್​ನಲ್ಲಿ ಸುಮಾರು 5 ಅಡಿಯಷ್ಟು ನೀರು ನಿಂತಿದೆ.

ಇಕೋಸ್ಪೇಸ್ ಬಳಿಯ ಮಾರತಹಳ್ಳಿ-ಸರ್ಜಾಪುರ ಮಾರ್ಗದ ಎರಡೂ ಬದಿಯ ರಸ್ತೆ ಜಲಾವೃತಗೊಂಡಿದೆ. ನಿನ್ನೆ ಒಂದು ಭಾಗದ ರಸ್ತೆ ಮಾತ್ರ ಮಳೆ ನೀರಿನಿಂದ ಮುಳುಗಿತ್ತು. ಇಂದು ಎರಡು ಬದಿಯ ರಸ್ತೆ ಜಲಾವೃತಗೊಂಡಿದೆ. ರಸ್ತೆ ಮೇಲೆ ನೀರು ರಭಸವಾಗಿ ಹರಿಯುತ್ತಿದೆ. ವಿಭೂತಿಪುರ ಕೆರೆ, ಸಾವಳಕೆರೆಗಳು ಭರ್ತಿಯಾಗಿರುವುದರಿಂದ ನೀರು ರಸ್ತೆಗೆ ನುಗ್ಗುತ್ತಿದೆ.Post a Comment

Previous Post Next Post