ಸಿ ಎಂ ಬೊಮ್ಮಾಯಿ : ಸಫಾಯಿ ಕರ್ಮಚಾರಿಗಳಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ವಿತರಿಸಿದರು

 ದ್ವಿಚಕ್ರ ವಾಹನಗಳ  ಯೋಜನೆ ಹತ್ತು ಮಹಾನಗರ ಪಾಲಿಕೆಗಳಿಗೆ ವಿಸ್ತರಣೆ ಆಗಿದ್ದು, ಮೊದಲ ಹಂತದಲ್ಲಿ 400 ಜನರಿಗೆ  ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

                          ದ್ವಿಚಕ್ರ ವಾಹನ ವಿತರಿಸಿದ ಸಿಎಂ ಬೊಮ್ಮಾಯಿ

By : Rekha.M
Online Desk

ಬೆಂಗಳೂರು:  ದ್ವಿಚಕ್ರ ವಾಹನಗಳ  ಯೋಜನೆ ಹತ್ತು ಮಹಾನಗರ ಪಾಲಿಕೆಗಳಿಗೆ ವಿಸ್ತರಣೆ ಆಗಿದ್ದು, ಮೊದಲ ಹಂತದಲ್ಲಿ 400 ಜನರಿಗೆ  ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವತಿಯಿಂದ ವಿಧಾನಸೌಧದ  ಮೆಟ್ಟಿಲುಗಳ ಬಳಿ  ವಿಧಾನಸೌಧ, ವಿಕಾಸಸೌಧ  ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಸಫಾಯಿ ಕರ್ಮಚಾರಿಗಳಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಿ  ಮಾತನಾಡಿದರು.

ಸಫಾಯಿ ಕರ್ಮಚಾರಿಗಳಿಗೂ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿ ಅವರ ಬದುಕಿಗೆ ಶಕ್ತಿಯನ್ನು ತುಂಬುವ, ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಬದುಕನ್ನು ನಿರಾಳ ಮಾಡುವ ಅವಶ್ಯಕತೆ ಇದೆ. ಅವರು ಮಾಡುತ್ತಿರುವ ಕೆಲಸ ಅತ್ಯಂತ ಪ್ರಮುಖ ಕೆಲಸ. ನಾವು ಸೃಷ್ಟಿ ಮಾಡುವ ಕಸವನ್ನು ಪ್ರತಿನಿತ್ಯ ನಿರಂತರವಾಗಿ ದಣಿವಿಲ್ಲದೆ  ಮಾಡುತ್ತಿದ್ದಾರೆ. ಆ ಕಾಯಕವನ್ನು ಗುರುತಿಸಿ ಪುರಸ್ಕರಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ಈ ಉತ್ತಮ ಕೆಲಸ ಮಾಡಿದ ನಿಗಮದ ಅಧ್ಯಕ್ಷ ರು ಹಾಗೂ ಸದಸ್ಯರುಗಳಿಗೆ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ವಿದೇಶದಲ್ಲಿ ಕರ್ಮಚಾರಿಗಳು ಕಾರುಗಳಲ್ಲಿ ಓಡಾಡುವುದನ್ನು ಕೇಳಿದ್ದೆವು. ಈಗ ಇದು ನಮ್ಮ ದೇಶದಲ್ಲಿಯೂ ಆಗುತ್ತಿದೆ. ಈಗ ಸ್ಕೂಟರ್ ನಲ್ಲಿ ಓಡಾಡುವಂತಾಗಿದ್ದು,  ಬರುವ ದಿನಗಳಲ್ಲಿ ಅವರಿಗೆ ಕಾರುಗಳನ್ನು ಒದಾಗಿಸುವಂತಾಗುವ ವಿಶ್ವಾಸವಿದೆ ಎಂದರು.

ಅವರ ಎಲ್ಲಾ ವಿಚಾರಗಳಿಗೆ ಸರ್ಕಾರ ಸ್ಪಂದಿಸುತ್ತಿದೆ. ವಾಹನಗಳಿಗೆ ಇದಕ್ಕೆ ಬಾಕ್ಸ್ ಜೋಡಿಸಲು ಸೂಚಿಸಿದ್ದು, ಬಾಬು ಜಗಜೀವನ್ ರಾಮ್ ಹೆಸರಿನಲ್ಲಿ ಪ್ರತಿ ಕ್ಷೇತ್ರಕ್ಕೆ  ಬಾಕ್ಸ್ ಉಳ್ಳ 100 ಸ್ಕೂಟರ್ ಗಳನ್ನು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ವಾಗುವಂತೆ ಒದಗಿಸಲು ತೀರ್ಮಾನಿಸಿ ಆದೇಶಿಸಲಾಗಿದೆ.  ಸುಮಾರು 25 ಸಾವಿರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನುಕೂಲವಾಗುತ್ತದೆ. ಸರ್ಕಾರ ಹಂತ ಹಂತವಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ.

ಯುವಕರಿಗೆ, ಎಸ್.ಸಿ/ ಎಸ್.ಟಿ ಜನಾಂಗದವರಿಗೆ ಮಹಿಳೆಯರಿಗೆ ಒದಗಿಸಲಾಗುತ್ತಿದೆ.  ಇದೊಂದು ಬಡವರ, ದುಡಿಯುವ ವರ್ಗದ ಪರವಾದ ಸರ್ಕಾರ. ಸಾಮಾಜಿಕ ನ್ಯಾಯ ಅನ್ನುವುದು ಕೇವಲ ಮಾತಿನಲ್ಲಿ ಅಲ್ಲದೆ ಕೃತಿಯಲ್ಲಿ ಮಾಡಿ ತೋರಿಸುತ್ತಿರುವ ಸರ್ಕಾರ ಎಂದು ಮುಖ್ಯಮಂತ್ರಿಗಳು ಹೇಳಿದರು.

ಸಚಿವ ಗೋವಿಂದ ಕಾರಜೋಳ, ಜೊತ ಶ್ರೀನಿವಾಸ ಪೂಜಾರಿ, ಸಫಾಯಿ ಕರ್ಮಚಾರಿ ಆಯೋಗದ  ಅಧ್ಯಕ್ಷ ಶಿವಣ್ಣ, ಸಫಾಯಿ ಕರ್ಮಚಾರಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.    Post a Comment

    Previous Post Next Post