ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಹಪೀಡಿತ ಮಳೆಯಾಗಿ ಅನಾಹುತವಾಗಿದ್ದರೆ ಹಲವು ಜಿಲ್ಲೆಗಳಲ್ಲಿಯೂ ವರುಣಾರ್ಭಟವಾಗಿದ್ದು ಜನರಿಗೆ ಸಾಕಷ್ಟುತೊಂದರೆಯನ್ನುಂಟುಮಾಡಿದೆ.
ಧಾರವಾಡ ಮತ್ತು ಗದಗದ ಮಳೆಯ ಚಿತ್ರಣ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಹಪೀಡಿತ ಮಳೆಯಾಗಿ ಅನಾಹುತವಾಗಿದ್ದರೆ ಹಲವು ಜಿಲ್ಲೆಗಳಲ್ಲಿಯೂ ವರುಣಾರ್ಭಟವಾಗಿದ್ದು ಜನರಿಗೆ ಸಾಕಷ್ಟು ತೊಂದರೆಯನ್ನುಂಟುಮಾಡಿದೆ.
ಗದಗ ಜಿಲ್ಲೆಯ ಜಲ್ಲಿಗೇರಿ ತಾಂಡಾದಲ್ಲಿ ಕಳೆದ ರಾತ್ರಿಯಿಡೀ ಸುರಿದ ಮಳೆಗೆ ವಿದ್ಯುತ್ ಸರಬರಾಜು ವ್ಯತ್ಯಯವುಂಟಾಗಿದ್ದು ಜನರು ನಿದ್ದೆಯಿಲ್ಲದೆ ಕಳೆದಿದ್ದಾರೆ. ಆದಷ್ಟು ಬೇಗನೆ ಸಹಾಯಕ್ಕೆ ಬನ್ನಿ ಎಂದು ಮಹಿಳೆಯೊಬ್ಬರು ಅಧಿಕಾರಿಗಳು, ರಾಜಕೀಯ ನಾಯಕರನ್ನು ಒತ್ತಾಯಿಸುತ್ತಿದ್ದಾರೆ.ಗದಗ ಜಿಲ್ಲೆಯಲ್ಲಿ ಭಾರೀ ಮಳೆಗೆ ಬೆಣ್ಣೆಹಳ್ಳ, ಮಲಪ್ರಭಾ ನದಿಯ ಜಲಾನಯನ ಪ್ರದೇಶಗಳ ಸಮೀಪದ ಗ್ರಾಮಗಳು ದ್ವೀಪಗಳಾಗಿ ಬದಲಾಗುತ್ತಿವೆ. ಗಂಗಾಪುರ ಗ್ರಾಮದ ರಸ್ತೆ ಜಲಾವೃತಗೊಂಡಿದೆ.
ಕೋಲಾರ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಬೂದಿಕೋಟೆ ಮಾರ್ಕಂಡೇಯ ಅಣೆಕಟ್ಟು ತುಂಬಿ ತಮಿಳು ನಾಡು ಕಡೆಗೆ ನೀರು ಹರಿಯುತ್ತಿದೆ.
ಹುಬ್ಬಳ್ಳಿ ಸಮೀಪದ ಶಲವಡಿ ಗ್ರಾಮದ ಬಳಿ ನವಲಗುಂದ-ರಾನ್ ರಸ್ತೆ ಮಳೆ ಗುಂಡಿಗೆ ಬಿದ್ದಿರುವುದನ್ನು ನೋಡಬಹುದು. ಧಾರವಾಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳ, ಕೆರೆಗಳು ತುಂಬಿ ಹರಿಯುತ್ತಿವೆ.
ಧಾರವಾಡದಲ್ಲಿ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿ ಕುಂಡಗೋಳ ತಾಲ್ಲೂಕಿನ ಚಿಕ್ನೂರ್ತಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಳೆಯ ಅಬ್ಬರದಿಂದ ಅಣ್ಣಿಗೇರಿ ಮತ್ತು ನವಲಗುಂದ ತಾಲೂಕಿನ ಶಾಲಾ-ಕಾಲೇಜಿಗೆ ಇಂದು ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.
ಚಿತ್ರದುರ್ಗದಲ್ಲಿ ಭಾರೀ ಮಳೆಯಾಗಿದ್ದು ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ಕಾಮಗಾರಿ ಮಾಡಿರುವುದರಿಂದ ನೀರು ನಿಂತು ತುರುವನೂರು ಮುಖ್ಯ ರಸ್ತೆಯ ರೈಲ್ವೆ ಕೆಳ ಸೇತುವೆ ಭಾಗದಲ್ಲಿ ನೀರು ನಿಂತು ಸವಾರರಿಗೆ ಭಾರೀ ತೊಂದರೆಯಾಗಿದೆ.
ಕೇಂದ್ರ ತಂಡ ಭೇಟಿ: ರಾಜ್ಯದಲ್ಲಿ ಮುಂಗಾರು ಧಾರಾಕಾರ ಮುಂದುವರಿದಿದ್ದು, ನಿರೀಕ್ಷೆಗೂ ಮೀರಿದ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ವಿತರಣೆ ಸಂಬಂಧ ಅಧ್ಯಯನಕ್ಕಾಗಿ ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಲಿದೆ. ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕಾಗಿ ಕೇಂದ್ರದ ತಂಡ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದೆ, ಪ್ರಸ್ತುತ ಆಗಿರುವ ಹಾನಿಯ ಬಗ್ಗೆ ಮನವಿ ನೀಡಲಾಗುವುದು. ಕೆಲವು ಜಿಲ್ಲೆಗಳಲ್ಲಿ ತಂಡ ಅಧ್ಯಯನದ ನಂತರ ರಾಜ್ಯ ಸರ್ಕಾರ, ತಂಡದೊಂದಿಗೆ ಸಭೆ ನಡೆಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Post a Comment