ಮಂಗಳೂರು, ಬೆಂಗಳೂರು ಸೇರಿ ದೇಶಾದ್ಯಂತ 11 ರಾಜ್ಯಗಳಲ್ಲಿ ಎನ್ಐಎ ದಾಳಿ, ತೀವ್ರ ಶೋಧ: ಸುಮಾರು 100 ಮಂದಿ ವಶ

 ದೇಶಾದ್ಯಂತ ಮತ್ತೊಮ್ಮೆ ರಾಷ್ಟ್ರೀಯ ತನಿಖಾ ದಳ (National Investigation Agency – NIA) ಮತ್ತು ಜಾರಿ ನಿರ್ದೇಶನಾಲಯಗಳು(ED) ತನ್ನ ದಾಳಿ, ಶೋಧ ಕಾರ್ಯವನ್ನು ಮುಂದುವರಿಸಿವೆ. 


By : Rekha.M
Online Desk

ಮಂಗಳೂರು/ ಬೆಂಗಳೂರು: ದೇಶಾದ್ಯಂತ ಮತ್ತೊಮ್ಮೆ ರಾಷ್ಟ್ರೀಯ ತನಿಖಾ ದಳ (National Investigation Agency – NIA) ಮತ್ತು ಜಾರಿ ನಿರ್ದೇಶನಾಲಯಗಳು(ED) ತನ್ನ ದಾಳಿ, ಶೋಧ ಕಾರ್ಯವನ್ನು ಮುಂದುವರಿಸಿವೆ.

ದೇಶಾದ್ಯಂತ ಇಂದು ಗುರುವಾರ ಬೆಳ್ಳಂಬೆಳಗ್ಗೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎನ್ಐಎ, ಇಡಿ ದಾಳಿ ಮುಂದುವರಿಸಿದ್ದು ರಾಜ್ಯದ ಪೊಲೀಸರ ನೆರವಿನೊಂದಿಗೆ ಪಿಫ್ಐ ಸಂಘಟನೆಯ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಏಕೆ ಈ ದಾಳಿ?: ಅನೇಕ ಸ್ಥಳಗಳಲ್ಲಿ ಎನ್ಐಎ ಹುಡುಕಾಟ ನಡೆಸುತ್ತಿದೆ. ಭಯೋತ್ಪಾದನೆಗೆ ಧನಸಹಾಯ, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರನ್ನು ಮೂಲಭೂತವಾಗಿ ರೂಪಿಸುವ ವ್ಯಕ್ತಿಗಳ ವಸತಿ ಮತ್ತು ಅಧಿಕೃತ ಆವರಣದಲ್ಲಿ ಈ ಹುಡುಕಾಟಗಳನ್ನು ನಡೆಸಲಾಗುತ್ತಿದೆ.

ಮಂಗಳೂರಿನಲ್ಲಿ ಭಾರೀ ಪ್ರತಿಭಟನೆ: ರಾಷ್ಟ್ರೀಯ ತನಿಖಾ ದಳ, ಇಡಿ ದಾಳಿ, ಶೋಧಕಾರ್ಯವನ್ನು ಖಂಡಿಸಿ ಕರಾವಳಿ ಜಿಲ್ಲೆಯ ನಗರ ಮಂಗಳೂರಿನಲ್ಲಿ ಪಿಎಫ್ಐ, ಎಸ್ ಡಿಪಿಐ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಲ್ಲಿ 100ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಪಿಎಫ್ಐ, ಎಸ್ ಡಿಪಿಐ ಸಂಘಟನೆಗಳ ಕಚೇರಿಗಳು, ಮುಖಂಡರ ನಿವಾಸಗಳ ಮೇಲೆ ದಾಳಿ ನಡೆದಿದೆ. ಎನ್​ಐಎ ದಾಳಿ ಖಂಡಿಸಿ ಪಿಎಫ್​ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನೆಲ್ಲಿಕಾಯಿ ರಸ್ತೆಯಲ್ಲಿ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಅರೆಮೀಸಲು ಪಡೆಯಿಂದ ಕಟ್ಟೆಚ್ಚರ ವಹಿಸಲಾಗಿದೆ.

ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್​ಐ ಕಚೇರಿ (Popular Front of India – PFI) ಮೇಲೆ ಗುರುವಾರ ನಸುಕಿನ 3.30ರ ವೇಳೆಯಲ್ಲಿ ದಾಳಿ ನಡೆಸಿದೆ. ಶಸ್ತ್ರಸಜ್ಜಿತ ಕೇಂದ್ರೀಯ ಪಡೆಗಳೊಂದಿಗೆ ಸ್ಥಳಕ್ಕೆ ಬಂದಿರುವ ಅಧಿಕಾರಿಗಳು ಇದೀಗ ಕಚೇರಿಗೆ ಪ್ರವೇಶಿಸಿದ್ದಾರೆ. ಕೇರಳ, ಉತ್ತರ ಪ್ರದೇಶ, ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಇರುವ ಎಸ್​ಡಿಪಿಐ ಕಚೇರಿಗಳ (Social Democratic Party of India – SDPI) ಮೇಲೆಯೂ ದಾಳಿ ನಡೆದಿದೆ. ಎಸ್​ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೂಬಕರ್ ಕುಳಾಯಿ ಸೋದರನ ಮನೆಗೂ ಅಧಿಕಾರಿಗಳು ಪ್ರವೇಶಿಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್​ಐಎ ತನಿಖೆ ನಡೆಸುತ್ತಿದೆ. ಮಂಗಳೂರಿನ ಸ್ಥಳೀಯ ಪೊಲೀಸರು ಸಹ ರಸ್ತೆಯಲ್ಲಿ ಉಪಸ್ಥಿತರಿದ್ದು ಭದ್ರತೆ ಒದಗಿಸಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ: ಎನ್​ಐಎ ತನಿಖೆ ಚುರುಕು
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಜುಲೈ 26ರ ರಾತ್ರಿ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಕಾರ್ಯಕರ್ತರ ತೀವ್ರ ಒತ್ತಾಯದ ನಂತರ ಪ್ರಕರಣದ ತನಿಖೆಯನ್ನು ಎನ್ಐಎ ಗೆ ವಹಿಸಲಾಯಿತು. ತನಿಖೆ ಆರಂಭಿಸಿರುವ ಅಧಿಕಾರಿಗಳು ಕಳೆದ 6ನೇ ತಾರೀಖು ಸುಳ್ಯ ಹಾಗೂ ಪುತ್ತೂರು ತಾಲ್ಲೂಕಿನ 32 ಕಡೆಗಳಲ್ಲಿ ಮನೆಗಳು ಹಾಗು ಇತರೆ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದರು. ಇದೀಗ ಬಂಧಿತರಾಗಿರುವ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕಾರ ನೀಡಿದವರ ವಿಚಾರಣೆಯನ್ನೂ ಎನ್​ಐಎ ನಡೆಸುತ್ತಿದೆ.

ಬೆಂಗಳೂರಿನಲ್ಲಿಯೂ ದಾಳಿ: ಬೆಂಗಳೂರಿನಲ್ಲಿ ಇದುವರೆಗೆ 4 ಕಡೆ ಎನ್ಐಎ ದಾಳಿ ನಡೆದಿದೆ. ರಿಚ್ ಮಂಡ್ ಟೌನ್ ನ ಅಪಾರ್ಟ್ ಮೆಂಟ್ ವೊಂದರ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಯುತ್ತಿದೆ. ಪಿಎಫ್ಐ ಸಂಘಟನೆ ಕಾರ್ಯದರ್ಶಿಯ ನಿವಾಸ ಮೇಲೆ ದಾಳಿ ನಡೆಯುತ್ತಿದೆ. 

ಕೇರಳದಲ್ಲಿ ಎನ್ಐಎ ಮತ್ತು ಜಾರಿ ನಿರ್ದೇಶನಾಲಯ ಪಿಎಫ್ಐ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರ ಕಚೇರಿ, ನಿವಾಸವಿರುವ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ದಾಳಿ ನಡೆಯುತ್ತಿದೆ.

Post a Comment

Previous Post Next Post