ಭಾರಿ ಮಳೆಯಿಂದಾಗಿ ರಾಜ್ಯದಲ್ಲಿನ 71 ತಾಲೂಕುಗಳಲ್ಲಿ ಅಂತರ್ಜಲದ ಮಟ್ಟದಲ್ಲಿ ಹೆಚ್ಚಳ : ಜೆ ಸಿ ಮಾಧುಸ್ವಾಮಿ

 ರಾಜ್ಯಾದ್ಯಂತ ಭಾರಿ ಮಳೆಯ ಪರಿಣಾಮ 71 ತಾಲೂಕುಗಳಲ್ಲಿ ಅಂತರ್ಜಲದ ಮಟ್ಟ ಏರಿಕೆಯಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ.

                    ಜೆ. ಸಿ. ಮಾಧುಸ್ವಾಮಿ

By : Rekha.M
Online Desk

ಬೆಂಗಳೂರು: ರಾಜ್ಯಾದ್ಯಂತ ಭಾರಿ ಮಳೆಯ ಪರಿಣಾಮ 71 ತಾಲೂಕುಗಳಲ್ಲಿ ಅಂತರ್ಜಲದ ಮಟ್ಟ ಏರಿಕೆಯಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ.

ಈ 71 ತಾಲೂಕುಗಳಲ್ಲಿ ಅಂತರ್ಜಲದ ನೀರಿನ ಪ್ರಮಾಣ ಕಡಿಮೆ ಇತ್ತು. ವರದಿಗಾರರೊಂದಿಗೆ ಮಾತನಾಡಿದ ಸಚಿವರು, ಮಳೆಯಿಂದಾಗಿ ಹಾನಿ ಉಂಟಾಗುವುದು ಸಹಜ. ಆದರೆ ರಾಜ್ಯಾದ್ಯಂತ ಸುರಿದಿರುವ ಮಳೆಯ ಪರಿಣಾಮವಾಗಿ 71 ತಾಲೂಗಳ ಅಂತರ್ಜಲ ಪ್ರಮಾಣ ಗಣನೀಯ ಪ್ರಮಾಣದ ಏರಿಕೆ ಕಂಡಿದೆ ಎಂದು ಸಚಿವರು ತಿಳಿಸಿದ್ದಾರೆ. 

ಶೇ.60-70 ರಷ್ಟು ಕೆರೆಗಳು ಭರ್ತಿಯಾಗಿವೆ. ಇದರಿಂದಾಗಿ ಅಂತರ್ಜಲ ಪ್ರಮಾಣ ಏರಿಕೆ ಕಂಡಿದೆ. ಮುಂದಿನ 2-3 ವರ್ಷಗಳಲ್ಲಿ ರೈತರು ನೀರಿನ ಅಭಾವ ಇಲ್ಲದೇ ಉತ್ತಮ ಬೆಳೆಯನ್ನು ಪಡೆಯಬಹುದು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ನಗರ ಪ್ರದೇಶಗಳಲ್ಲಿ ಜಲಮಾರ್ಗಗಳನ್ನು ತಡೆಯುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಧುಸ್ವಾಮಿ, ನೀರಿನ ಹರಿವನ್ನು ತಡೆಯುವುದರಿಂದ ಹಲವು ಪ್ರದೇಶಗಳು ಮುಳುಗಡೆಯಾಗುತ್ತವೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಿದ್ದೇನೆ ಹಾಗೂ ಆಗಿರುವ ಹಾನಿಯನ್ನು ಸರಿಪಡಿಸುವುದಕ್ಕಾಗಿ ಅನುದಾನ ಬಿಡುಗಡೆ ಮಾಡುವುದಕ್ಕೆ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ. 

ರಾಮನಗರದ ಬಳಿ ಹಾದು ಹೋಗುವ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಮುಳುಗಡೆಯಾಗಿರುವ ಬಗ್ಗೆ ಮಾತನಾಡಿದ ಸಚಿವರು, ಯೋಜನೆಯ ಮೇಲ್ವಿಚಾರಣೆ ಮಾಡುತ್ತಿರುವ ಹೆದ್ದಾರಿ ಪ್ರಾಧಿಕಾರ ಹಲವು ಪ್ರಮುಖ ಅಂಶಗಳನ್ನು ಪರಿಗಣಿಸಿಲ್ಲ. ಇದನ್ನು ಸರಿಪಡಿಸುವಂತೆ ಸೂಚಿಸಿದ್ದೇನೆ ಹಾಗೂ ನೀರು ನುಗ್ಗುವಂತಹ ಪ್ರದೇಶಗಳಲ್ಲಿರುವ 50 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸೂಚಿಸಿದ್ದೇನೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.Post a Comment

Previous Post Next Post