ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರಕಾರ ಇವರೇ ಅತಿದೊಡ್ಡ ಪಪ್ಪು!

 ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಅಭಿಷೇಕ್ ಬ್ಯಾನರ್ಜಿ

By : Rekha.m
Online Desk

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದ ತನಿಖೆಯ ಭಾಗವಾಗಿ ಸುಮಾರು ಎಂಟು ಗಂಟೆಗಳ ಕಾಲ ಅದಧಿಕಾರಿಗಳಿಂದ ವಿಚಾರಣೆ ಎದುರಿಸಿದ ಅವರು, ಮತ್ತೊಂದು ಪಕ್ಷದ ನಾಯಕನನ್ನು ಪಪ್ಪು ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ ಅಮಿತ್ ಶಾ ಅವರೇ ದೊಡ್ಡ ಪಪ್ಪು. ಕೇಂದ್ರೀಯ ಸಂಸ್ಥೆಗಳನ್ನು ಬಳಸದೆ ರಾಜಕೀಯ ಮಾಡಲು ಅವರಿಗೆ ಸಾಧ್ಯವಿಲ್ಲ ಎಂದು ಅವರು ದೂರಿದ್ದಾರೆ.

ಬಂಗಾಳದಲ್ಲಿ ಕಲ್ಲಿದ್ದಲು ಮತ್ತು ಜಾನುವಾರು ಕಳ್ಳಸಾಗಣೆಗೆ ಅಮಿತ್ ಶಾ ಅವರೇ ನೇರ ಹೊಣೆ. 'ಸಿಐಎಸ್ಎಫ್ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಕೂಡ ಕಲ್ಲಿದ್ದಲು ಹಗರಣದಲ್ಲಿ ಸಂಬಂಧ ಹೊಂದಿದೆ. ಗಡಿಯಲ್ಲಿ ಗೋವು ಕಳ್ಳಸಾಗಣೆ ಮಾಡುತ್ತಿರುವಾಗ ಬಿಎಸ್ಎಫ್ (ಗಡಿ ಭದ್ರತಾ ಪಡೆ) ಏನು ಮಾಡುತ್ತಿತ್ತು?. ಇದು ಗೋವು ಸಾಗಣೆಯ ಭ್ರಷ್ಟಾಚಾರವಲ್ಲ, ಕೇಂದ್ರ ಗೃಹ ಸಚಿವರ ಭ್ರಷ್ಟಾಚಾರ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ಅವರೇ ಗೋಕಳ್ಳರು. ಗೋ ಕಳ್ಳತನದ ತನಿಖೆಯನ್ನು ಗೋ ಕಳ್ಳರೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಮ್ಮ ವಿಚಾರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ನಾನು ಅಕ್ರಮವಾಗಿ ಐದು ಪೈಸೆ ತೆಗೆದುಕೊಂಡಿದ್ದೇನೆ ಎಂದು ಯಾರಾದರೂ ಸಾಬೀತುಪಡಿಸಿದರೆ, ನಾನು ಗಲ್ಲಿಗೇರಲು ಸಿದ್ಧನಿದ್ದೇನೆ. ನಾನು 30 ಬಾರಿ ವಿಚಾರಣೆಯನ್ನು ಎದುರಿಸಲು ಸಿದ್ಧನಿದ್ದೇನೆ ಹಾಗೂ ತಲೆಬಾಗಲು ಸಿದ್ಧನಿದ್ದೇನೆ. ಆದರೆ,  ಬಂಗಾಳದ ಜನರು ಬಿಜೆಪಿ ಮುಂದೆ ಎಂದಿಗೂ ತಲೆಬಾಗುವುದಿಲ್ಲ ಎಂದು ಅವರು ಹೇಳಿದರು.

ಬ್ಯಾನರ್ಜಿ ಅವರನ್ನು ಇ.ಡಿ ವಿಚಾರಣೆಗೊಳಪಡಿಸುತ್ತಿರುವುದು ಇದು ಮೂರನೇ ಬಾರಿ. ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿರುವ 41 ವ್ಯಕ್ತಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಈ ವರ್ಷ ಜುಲೈನಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು, ಆದರೆ ಅದರಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಹೆಸರಿಲ್ಲ.

'ಬಂಗಾಳದ ಜನರಿಗೆ ದೇಶಭಕ್ತಿಯನ್ನು ಕಲಿಸಲು ಪ್ರಯತ್ನಿಸುವ ಮೊದಲು ಅವರು (ಅಮಿತ್ ಶಾ) ಮೊದಲು ತಮ್ಮ ಮಗನಿಗೆ (ಜಯ್ ಶಾ) ದೇಶಭಕ್ತಿಯನ್ನು ಕಲಿಸಲಿ. ಇ.ಡಿ ಮತ್ತು ಸಿಬಿಐ ಅನ್ನು ಚೂಬಿಡುವ ಮೂಲಕ ನನ್ನನ್ನು ಹೆದರಿಸಬಹುದು ಎಂದು ಅವರು ಭಾವಿಸಿದ್ದರೆ, ಅದು ತಪ್ಪು. ಅವರು ಇಲ್ಲಿಯವರೆಗೆ ನನ್ನ ಹೆಂಡತಿ ಮತ್ತು ನನ್ನನ್ನು ಏಳು ಬಾರಿ ಪ್ರಶ್ನಿಸಿದ್ದಾರೆ. ಆದರೆ, ಫಲಿತಾಂಶ ಶೂನ್ಯವಾಗಿದೆ. ಆದರೆ, ಲಂಚ ತೆಗೆದುಕೊಳ್ಳುವಾಗ ಕ್ಯಾಮರಾದಲ್ಲಿ ಸಿಕ್ಕಿಬಿದ್ದ ಬಿಜೆಪಿ ನಾಯಕರನ್ನು ಕೇಂದ್ರದ ತನಿಖಾ ಸಂಸ್ಥೆಗಳು ಎಂದಿಗೂ ಕರೆದಿಲ್ಲ' ಎಂದು ಕಿಡಿಕಾರಿದ್ದಾರೆ.

ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿಯ ಸುವೇಂದು ಅಧಿಕಾರಿ ಈಗ ನಾಪತ್ತೆಯಾಗಿರುವ ಕಲ್ಲಿದ್ದಲು ಹಗರಣದ ಆರೋಪಿಗಳಲ್ಲಿ ಒಬ್ಬರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಿದ ಬ್ಯಾನರ್ಜಿ, ಇದನ್ನು ಸಾಬೀತುಪಡಿಸಲು ಆಡಿಯೊ ಕ್ಲಿಪ್ ಹೊಂದಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಹೇಳಿದ್ದಾರೆ.


Post a Comment

Previous Post Next Post