ರಾಜ್ಯದಲ್ಲಿ ಮಳೆ-ಪ್ರವಾಹ ಪರಿಸ್ಥಿತಿ: ಮಾರ್ಗಸೂಚಿಯಂತೆ ನ್ಯಾಯಯುತ ಪರಿಹಾರ ಒದಗಿಸಲು ಕೇಂದ್ರ ತಂಡಕ್ಕೆ ಮುಖ್ಯಮಂತ್ರಿ ಮನವಿ

 ರಾಜ್ಯ ಸರ್ಕಾರವು ಅತ್ಯಂತ ನಿಖರವಾಗಿ ಹಾಗೂ ಪಾರದರ್ಶಕವಾಗಿ ಹಾನಿಯ ಅಂದಾಜುಪಟ್ಟಿ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನ್ಯಾಯಯುತ ಪರಿಹಾರ ಒದಗಿಸಲು ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.


By : Rekha.M
Online Desk

ಬೆಂಗಳೂರು:  ರಾಜ್ಯ ಸರ್ಕಾರವು ಅತ್ಯಂತ ನಿಖರವಾಗಿ ಹಾಗೂ ಪಾರದರ್ಶಕವಾಗಿ ಹಾನಿಯ ಅಂದಾಜುಪಟ್ಟಿ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನ್ಯಾಯಯುತ ಪರಿಹಾರ ಒದಗಿಸಲು ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯದ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶಿಶ್ ಕುಮಾರ್ ನೇತೃತ್ವದ ಕೇಂದ್ರ ಅಧ್ಯಯನ ತಂಡದೊಂದಿಗೆ ಸಭೆ ನಡೆಸಿ, ರಾಜ್ಯದಲ್ಲಿ ಪ್ರವಾಹದಿಂದ ಜುಲೈ, ಆಗಸ್ಟ್ ಹಾಗೂ ಈ ತಿಂಗಳು ಸಂಭವಿಸಿದ ಹಾನಿಯ ಕುರಿತು ಚರ್ಚಿಸಿದರು.

ರಾಜ್ಯದಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯಿಂದ ಸಂಭವಿಸಿದ ಹಾನಿಯ ಕುರಿತು ಹಾಗೂ ರಾಜ್ಯ ಸರ್ಕಾರ ಕೈಗೊಂಡ ಪರಿಹಾರ ಕ್ರಮಗಳ ಕುರಿತು ಸಭೆಯಲ್ಲಿ ವಿವರವಾದ ಮಾಹಿತಿ ಒದಗಿಸಲಾಯಿತು.

ತಂಡವು ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಹಾವೇರಿ, ಧಾರವಾಡ, ಗದಗ, ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ರೂಪಿಸಲಾಗಿತ್ತು. ಇದರೊಂದಿಗೆ ಅತಿ ಹೆಚ್ಚು ಭೂಕುಸಿತ, ಸಮುದ್ರ ಕೊರೆತ ಸಂಭವಿಸಿರುವ ಕೊಡಗು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೂ ಭೇಟಿ ನೀಡುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು. ಜೊತೆಗೆ ಬೆಂಗಳೂರು ನಗರ, ನೆರೆಯ ಮಂಡ್ಯ, ರಾಮನಗರ ಜಿಲ್ಲೆಗಳ ಪ್ರವಾಹ ಪರಿಸ್ಥಿತಿಯನ್ನು ಸಹ ಅವಲೋಕಿಸುವಂತೆ ತಿಳಿಸಲಾಯಿತು.

ಈ ಬಾರಿ ಅಧಿಕ  ಸಂಖ್ಯೆಯಲ್ಲಿ ಮೀನುಗಾರಿಕಾ ದೋಣಿಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ಸಂಭವಿಸಿದ ಹಾನಿ ಹಾಗೂ ರಾಮನಗರದ ರೇಷ್ಮೆ ರೀಲಿಂಗ್ ಘಟಕ ಹಾಗೂ ಟ್ವಿಸ್ಟಿಂಗ್ ಘಟಕಗಳಿಗೆ ಸಂಭವಿಸಿದ ಹಾನಿಯ ಕುರಿತೂ ಸಹ ಕೇಂದ್ರ ತಂಡದ ಗಮನಕ್ಕೆ ತಂದ ಮುಖ್ಯಮಂತ್ರಿಗಳು, ಮೊದಲ ಬಾರಿಗೆ ಇಂತಹ ಹಾನಿ ಸಂಭವಿಸಿದ್ದು, ಅವರಿಗೆ ಜೀವನೋಪಾಯಕ್ಕೆ ತೊಂದರೆಯಾಗಿದೆ. ಆದ್ದರಿಂದ ಮಾನವೀಯ ದೃಷ್ಟಿಯಿಂದ ಅವರಿಗೆ ನೆರವು ನೀಡಲು ಪರಿಶೀಲಿಸುವಂತೆ ಕೋರಿದರು.

ರಾಜ್ಯವು 330 ಕಿ.ಮೀ. ಕರಾವಳಿ ಪ್ರದೇಶವನ್ನು ಹೊಂದಿದ್ದು, ಸಮುದ್ರ ಕೊರೆತ ತಡೆಗಟ್ಟಲು ಹಲವು ಸೂಕ್ಷ್ಮ ಪ್ರದೇಶಗಳಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಹೊಸ ಜಾಗಗಳಲ್ಲಿ ಕಡಲಕೊರೆತ ಉಂಟಾಗಿದ್ದು, ರಾಜ್ಯದ ಸಂಪೂರ್ಣ ಕರಾವಳಿ ಪ್ರದೇಶದ ರಕ್ಷಣೆಗೆ ಕೇಂದ್ರದ ನೆರವಿನ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿಯೂ ಹಿಂದೆ ಪ್ರವಾಹ ಕಾಣಿಸಿಕೊಳ್ಳದ ಕಲಬುರಗಿ, ಗದಗ, ಬೀದರ್, ಕೊಪ್ಪಳ ಮೊದಲಾದ ಜಿಲ್ಲೆಗಳಲ್ಲಿ ಈ ಬಾರಿ ಪ್ರವಾಹ ಉಂಟಾಗಿದೆ. ಕಳೆದ ನವೆಂಬರ್ ತಿಂಗಳಿನಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಮಳೆಯ ಮಾದರಿಯನ್ನು ಅಧ್ಯಯನ ನಡೆಸುವ ಅಗತ್ಯವಿದೆ. ಸತತ ಮಳೆಯಿಂದಾಗಿ ರಾಜ್ಯದ ಬಹುತೇಕ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಕೆರೆ ತುಂಬಿ ಹಾಗೂ ಕೆರೆ ಏರಿ ಒಡೆದು ಪ್ರವಾಹ ಉಂಟಾಗುತ್ತಿದೆ. ನದಿ ಪ್ರವಾಹಕ್ಕಿಂತ ಭಿನ್ನ ಪರಿಸ್ಥಿತಿ ಇದಾಗಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಮೂಲಸೌಕರ್ಯ ದುರಸ್ತಿಗೆ 1600 ಕೋಟಿ ರೂ. ಬಿಡುಗಡೆ

ರಾಜ್ಯದಲ್ಲಿ ಕಳೆದ ನವೆಂಬರ್ ನಿಂದೀಚೆಗೆ ಮೂಲಸೌಕರ್ಯಗಳ ದುರಸ್ತಿಗೆ ಎರಡು ಬಾರಿ 500 ಕೋಟಿ ರೂ.ಗಳಂತೆ ಹಾಗೂ ಎರಡು ದಿನಗಳ ಹಿಂದೆ 600 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಬೆಳೆ ಹಾನಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನೀಡುತ್ತಿದ್ದು, 18.58 ಲಕ್ಷ ರೈತರಿಗೆ ಒಟ್ಟು 2452 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಇದರಲ್ಲಿ 1160 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರದ ಬೊಕ್ಕಸದಿಂದ ಭರಿಸಲಾಗಿದೆ. ಮನೆ ಹಾನಿಗೂ ನಷ್ಟದ ಪ್ರಮಾಣವನ್ನು ಆಧರಿಸಿ, ಪರಿಹಾರ ವಿತರಿಸಲಾಗುತ್ತಿದೆ. ಈ ಎಲ್ಲ ಪರಿಹಾರಗಳನ್ನೂ ಅತ್ಯಂತ ತ್ವರಿತವಾಗಿ, ಪಾರದರ್ಶಕವಾಗಿ ನೇರವಾಗಿ ಸಂತ್ರಸ್ತರ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಕಳೆದ ಒಂದು ವಾರದಿಂದೀಚೆಗೆ ಪುನಃ ಭಾರಿ ಮಳೆಯಾಗುತ್ತಿದ್ದು, ಬೆಂಗಳೂರು, ರಾಮನಗರ, ಮಂಡ್ಯ ಮತ್ತಿತರ ಜಿಲ್ಲೆಗಳಲ್ಲಿ ಬಹಳಷ್ಟು ಹಾನಿಯಾಗಿದೆ. ಈ ಅವಧಿಯಲ್ಲಿ ಸಂಭವಿಸಿದ ನಷ್ಟದ ಕುರಿತು ಪೂರಕ ಪ್ರಸ್ತಾವನೆಯನ್ನು ಸಹ ಕೂಡಲೇ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್ ನೇತೃತ್ವದ ತಂಡವು ಕೇಂದ್ರ ಹಣಕಾಸು ಇಲಾಖೆಯ ಉಪಕಾರ್ಯದರ್ಶಿ ಮಹೇಶ್ ಕುಮಾರ್, ಇಂಧನ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾವ್ಯ ಪಾಂಡೆ, ಜಲಶಕ್ತಿ ಸಚಿವಾಲಯದ ಅಶೋಕ್ ಕುಮಾರ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧೀಕ್ಷಕ ಅಭಿಯಂತರ ವಿ.ವಿ.ಶಾಸ್ತ್ರಿ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಡಾ. ಕೆ. ಮನೋಹರನ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ. ತಿವಾರಿ ಅವರನ್ನು ಒಳಗೊಂಡಿದೆ.
Post a Comment

Previous Post Next Post