ಭಾರಿ ಅಗ್ನಿ ಅವಘಡ: ಹುಟ್ಟುಹಬ್ಬಕ್ಕೆಂದು ಬೆಂಗಳೂರಿನಿಂದ ಆಂಧ್ರ ಪ್ರದೇಶಕ್ಕೆ ತೆರಳಿದ್ದ ಟೆಕ್ಕಿ ಸೇರಿ ಮೂವರು ಸಾವು

 ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ಪೇಪರ್ ಪ್ಲೇಟ್ ಕಾರ್ಖಾನೆಯ ತಯಾರಿಕಾ ಘಟಕದಲ್ಲಿ ಬುಧವಾರ ನಸುಕಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಕಾರ್ಖಾನೆಯ ಉತ್ಪಾದನಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ.

                    ಪ್ರಾತಿನಿಧಿಕ ಚಿತ್ರ

By : Rekha.M
Online Desk

ಅಮರಾವತಿ: ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ಪೇಪರ್ ಪ್ಲೇಟ್ ಕಾರ್ಖಾನೆಯ ತಯಾರಿಕಾ ಘಟಕದಲ್ಲಿ ಬುಧವಾರ ನಸುಕಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಕಾರ್ಖಾನೆಯ ಉತ್ಪಾದನಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ.

ಈ ವೇಳೆ ಕಾರ್ಖಾನೆಯೊಳಗೆ ಸಿಲುಕಿ ಉಸಿರುಗಟ್ಟಿ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಭಾಸ್ಕರ್, ದಿಲ್ಲಿ ಬಾಬು ಮತ್ತು ಬಾಲಾಜಿ ಎಂದು ಗುರುತಿಸಲಾಗಿದೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದರು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯ ನಂತರ ಪೊಲೀಸರು ತಿಳಿಸಿದ್ದಾರೆ.

ಕಟ್ಟಡದ ಮೊದಲ ಮಹಡಿಯಲ್ಲಿ ಉತ್ಪಾದನಾ ಘಟಕವಿದ್ದರೆ, ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ಮಾಲೀಕ ಭಾಸ್ಕರ್ ವಾಸವಾಗಿದ್ದರು. ಮಂಗಳವಾರ ತನ್ನ ಮಗ ದಿಲ್ಲಿ ಬಾಬು ಹುಟ್ಟುಹಬ್ಬವನ್ನು ಆಚರಿಸಲೆಂದು ಮನೆಯಲ್ಲಿದ್ದ ಭಾಸ್ಕರ್, ದಿಲ್ಲಿ ಬಾಬು ಮತ್ತು ಬಾಲಾಜಿ ಬೆಂಕಿಯಲ್ಲಿ ಸಿಲುಕಿಕೊಂಡರು.

ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ದಿಲ್ಲಿ ಬಾಲು ಅವರು ಮಂಗಳವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲೆಂದು ಸೋಮವಾರವಷ್ಟೇ ತಮ್ಮ ಊರಾದ ಚಿತ್ತೂರಿಗೆ ಆಗಮಿಸಿದ್ದರು.

ಘಟನೆ ಸಂಭವಿಸಿದಾಗ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರುವಷ್ಟರಲ್ಲಿ ತಡವಾಗಿತ್ತು ಎಂದು ಅಕ್ಕಪಕ್ಕದ ಮನೆಗಳ ನಿವಾಸಿಗಳು ಆರೋಪಿಸಿದ್ದಾರೆ. ಅಗ್ನಿಶಾಮಕ ವಾಹನಗಳಲ್ಲಿ ಸಾಕಷ್ಟು ನೀರು ಇರಲಿಲ್ಲ. ಹೀಗಾಗಿ ಟ್ಯಾಂಕ್‌ಗೆ ನೀರನ್ನು ತುಂಬಿಕೊಂಡು ಮತ್ತೆ ಬೆಂಕಿಯನ್ನು ಆರಿಸಲು ಸ್ಥಳಕ್ಕೆ ತಲುಪಬೇಕಾಯಿತು ಎಂದು ದೂರಿದ್ದಾರೆ.
Post a Comment

Previous Post Next Post