ಆರ್ಥಿಕವಾಗಿ ದುರ್ಬಲ ವರ್ಗದವರಿಗೆ(EWS) ಕೇಂದ್ರ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 10ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು ನ್ಯಾಯಾಲಯ ಮುಂದೆ ನಿನ್ನೆ ವಾದ ಮಂಡಿಸಿದ್ದಾರೆ.
ಸುಪ್ರೀಂ ಕೋರ್ಟ್
ನವದೆಹಲಿ: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ(EWS) ಕೇಂದ್ರ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 10ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು ನ್ಯಾಯಾಲಯ ಮುಂದೆ ನಿನ್ನೆ ವಾದ ಮಂಡಿಸಿದ್ದಾರೆ.
ಸರ್ಕಾರದ ಈ ತಿದ್ದುಪಡಿಯು ಸಂವಿಧಾನದ ಸಮಾನತೆ ಪರಿಕಲ್ಪನೆಗೆ ಹಾನಿಯನ್ನುಂಟುಮಾಡುತ್ತದೆ ಎಂದು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಪಂಚ ಪೀಠದ ಮುಂದೆ 39 ಮಂದಿ ಸಹಿ ಹಾಕಿದ್ದ ಆಕ್ಷೇಪವನ್ನು ಜನ್ಹಿತ್ ಅಭಿಯಾನ್ ಎಂಬುವವರು ಪ್ರಶ್ನಿಸಿದ್ದಾರೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇಕಡಾ 10ರಷ್ಟು ಮೀಸಲಾತಿ ಕಲ್ಪಿಸುವ 103ನೇ ಸಂವಿಧಾನ ವಿಧಿ ತಿದ್ದುಪಡಿಯನ್ನು ಪ್ರಶ್ನಿಸಿ ಅವರು ಅರ್ಜಿ ಸಲ್ಲಿಸಿದ್ದಾರೆ. ಹಿಂದಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಈ ಪ್ರಕರಣವನ್ನು 2020ರ ಆಗಸ್ಟ್ 5ರಂದು ಸಂವಿಧಾನ ಪೀಠಕ್ಕೆ ಉಲ್ಲೇಖಿಸಿತ್ತು.
ಮುಖ್ಯನ್ಯಾಯಮೂರ್ತಿ ಜೊತೆಗೆ ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್, ದಿನೇಶ್ ಮಹೇಶ್ವರಿ, ಎಸ್ ಬಿ ಪರ್ದಿವಾಲ ಮತ್ತು ಬೇಲಾ ತ್ರಿವಾದಿ ಅವರು ಈ ಸರ್ವೋಚ್ಚ ನ್ಯಾಯಪೀಠದಲ್ಲಿದ್ದಾರೆ.
ಅಸಮಾನವಾಗಿ ಪರಿಗಣಿಸುವ ಸಂವಿಧಾನದ ಕಲ್ಪನೆಯನ್ನು ಶೂನ್ಯಗೊಳಿಸಲು ಮತ್ತು ತಟಸ್ಥಗೊಳಿಸಲು ಪ್ರಯತ್ನವಿದು ಎಂದು ಪ್ರೊಫೆಸರ್ ಡಾ. ಮೋಹನ್ ಗೋಪಾಲ್ ಅವರು ತಿದ್ದುಪಡಿಯನ್ನು ಟೀಕಿಸಿದ್ದಾರೆ. ಮೀಸಲಾತಿಯು ಸಂವಿಧಾನದ ಮೇಲಿನ ವಂಚನೆಯಾಗಿದೆ ಎಂದು ಪ್ರತಿಪಾದಿಸಿದ ಪ್ರೊ.ಗೋಪಾಲ್, ಮೀಸಲಾತಿಯು ಹಿಂದುಳಿದ ಗುಂಪುಗಳಿಗೆ ಸಂವಿಧಾನದಲ್ಲಿ ಪ್ರಾತಿನಿಧ್ಯದ ಸಾಧನವಾಗಿದೆ. ಆದರೆ EWS ಮೀಸಲಾತಿಯ ಪ್ರಯೋಜನಗಳು ಸಮಾಜದಲ್ಲಿನ ಮುಂದುವರಿದ ವರ್ಗಗಳಿಗೆ ಮಾತ್ರ ಪ್ರಯೋಜನವಾಗಿದೆ ಎಂದಿದ್ದಾರೆ.
ಸಂವಿಧಾನದ 103ನೇ ತಿದ್ದುಪಡಿಯು ಮೀಸಲಾತಿಯ ಫಲಾನುಭವಿಗಳಾಗಿರುವ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ದುರ್ಬಲಗೊಳಿಸುವ ಮತ್ತು ಸಮಾನತೆಯ ಸಂಹಿತೆಯನ್ನು ಉಲ್ಲಂಘಿಸುವ ರೀತಿಯಲ್ಲಿ ಸಮಾನತೆಯ ಉಲ್ಲಂಘನೆಯಾಗಿದೆ ಎಂದು ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಕೂಡ ಆಕ್ಷೇಪಿಸಿ ವಾದ ಮಂಡಿಸಿದ್ದಾರೆ.
ನಾವು ಬಡವರಲ್ಲಿ ಬಡವರು ಮತ್ತು ಅತ್ಯಂತ ದುರ್ಬಲರನ್ನು ಸ್ಪಷ್ಟವಾಗಿ ಹೊರಗಿಡುತ್ತಿದ್ದೇವೆ. ಕಾರ್ಯವಿಧಾನವು ಅಸಮಾನ ಮತ್ತು ತಾರತಮ್ಯವಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮತ್ತು ಹಿಂದುಳಿದ ವರ್ಗ ಇಬ್ಬರಿಗೂ ಮೀಸಲಾತಿ ಬೇಕು ಎಂದು ಬಿಂಬಿಸುವುದು ಸರಿಯಲ್ಲ. ಆರ್ಥಿಕ ಅನನುಕೂಲತೆಯು ಶಾಶ್ವತವಲ್ಲ. ತಾತ್ಕಾಲಿಕವಾಗಿರುತ್ತದೆ. ಇದು ವ್ಯಕ್ತಿಯ ಅನನುಕೂಲತೆಯನ್ನು ಆಧರಿಸಿದ್ದು ಅದನ್ನು ಹಣದಿಂದ ಸರಿಪಡಿಸಬಹುದು ಎಂದು ಅರೋರ ವಾದಿಸಿದ್ದಾರೆ.
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದವರನ್ನು ಹೊರತುಪಡಿಸಿ ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಮೀಸಲಾತಿ ಒದಗಿಸುವ ಸಂವಿಧಾನದ 103 ನೇ ತಿದ್ದುಪಡಿ ಸಮಾನತೆಯ ಸಂಹಿತೆಗೆ ವಿರುದ್ಧವಾಗಿದೆ. ಹೀಗಾಗಿ ಸಂವಿಧಾನದ ಮೂಲ ಲಕ್ಷಣಗಳನ್ನು ಉಲ್ಲಂಘಿಸಲಾಗಿದೆ ಎಂದು ಹಿರಿಯ ವಕೀಲ ಸಂಜಯ್ ಪಾರಿಖ್ ಸುಪ್ರೀಂ ಕೋರ್ಟ್ ಪೀಠದ ಮುಂದೆ ಆಕ್ಷೇಪ ಸಲ್ಲಿಸಿದ್ದಾರೆ. ಸಂವಿಧಾನದ ಅಡಿಯಲ್ಲಿ ಕಲ್ಪಿಸಲಾಗಿರುವ ಮೀಸಲಾತಿ ಅಥವಾ ವಿಶೇಷ ನಿಬಂಧನೆಯಲ್ಲಿ ಆರ್ಥಿಕ ಮಾನದಂಡಗಳು ಬರುವುದಿಲ್ಲ ಎಂಬುದು ಪಾರಿಖ್ ಅವರ ವಾದವಾಗಿದೆ.
Post a Comment