ಜೆಡಿಎಸ್ ಚುನಾವಣಾ ಸೂತ್ರಧಾರ ಪ್ರಶಾಂತ್ ಕಿಶೋರ್!

 

ಚುನಾವಣಾ ಮಾಂತ್ರಿಕ ಪ್ರಶಾಂತ್‍ಕಿಶೋರ್ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಕೆಲಸ ಮಾಡಲಿದ್ದಾರೆ.

2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಯಲ್ಲಿ ತನ್ನ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲು ಪರಿಶ್ರಮಪಡುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಚುನಾವಣಾ ತಂತ್ರಗಾರಿಕೆಯಲ್ಲಿ ಪ್ರಶಾಂತ್ ಕಿಶೋರ್ ಕೈಜೋಡಿಸಲಿದ್ದಾರೆ. ತೆಲಂಗಾಣ ಮುಖ್ಯ ಮಂತ್ರಿ. ಕೆ.ಚಂದ್ರಶೇಖರ್ ರಾವ್, ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಮಹದಾಸೆಯಿಂದ ಪ್ರಶಾಂತ್ ಕಿಶೋರ್ ಅವರನ್ನು ಆ ಪಕ್ಷದ ಪರವಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ನಿನ್ನೆ ಹೈದರಾಬಾದ್ ನಲ್ಲಿ ಕುಮಾರಸ್ವಾಮಿ ಅವರು ಚಂದ್ರಶೇಖರ್‍ರಾವ್ ಅವ ರನ್ನು ಭೇಟಿ ಮಾಡಿ, ಸುಮಾರು ಮೂರು ತಾಸುಗಳ ಕಾಲ ಪ್ರಸಕ್ತ ರಾಜಕೀಯದ ಬಗ್ಗೆ ಚರ್ಚೆ ಮಾಡಿದ ಸಂದರ್ಭದಲ್ಲಿ ಚುನಾವಣಾ ಮಾಂತ್ರಿಕನಿಗೆ ಉಸ್ತುವಾರಿ ವಹಿಸಲು ತೀರ್ಮಾನ ತೆಗೆದುಕೊಂಡರೆನ್ನಲಾಗಿದೆ.

ಕರ್ನಾಟಕದಲ್ಲಿ ನೀವು ಸ್ವತಂತ್ರವಾಗಿ ಅಧಿಕಾರಕ್ಕೆ ಬರ ಬೇಕು, ನಿಮಗೆ ರಾಜಕೀಯವಾಗಿ ನಾನು ಎಲ್ಲ ರೀತಿಯ ಸಹಕಾರ ಕೊಡುತ್ತೇನೆ ಎಂಬ ಭರವಸೆಯನ್ನು ಕುಮಾರ ಸ್ವಾಮಿ ಅವರಿಗೆ ನೀಡಿರುವ ರಾವ್, ನೀವು ಯಾವುದೇ ರಾಷ್ಟ್ರೀಯ ಪಕ್ಷದ ಜೊತೆ ಕೈ ಜೋಡಿಸಬೇಡಿ. ರೈತರ ಪರವಾಗಿ ಹೋರಾಟ ನಡೆಸಿರುವ ಕುಟುಂಬ ಜನರ ಸೇವೆ ಮಾಡಬೇಕು. ಇದಕ್ಕೆ ಮನಪೂರಕವಾಗಿ ನಿಮ್ಮ ಜೊತೆ ಕೈಜೋಡಿಸುತ್ತೇನೆ. ಪ್ರಶಾಂತ್ ಕಿಶೋರ್ ಅವರ ಸಹಕಾರ ಪಡೆದುಕೊಳ್ಳಿ, ಸದ್ಯಕ್ಕೆ ಅವರು ನಮ್ಮ ಸಲಹೆಗಾರರಾಗಿದ್ದಾರೆ. ನಾನೇ ಅವರಿಗೆ ಚುನಾವಣೆಯ ಬಗ್ಗೆ ಎಲ್ಲವನ್ನೂ ಹೇಳಿ ವಹಿಸಿಕೊಡುತ್ತೇನೆ. ನನ್ನ ಸಲಹೆ ಮೇರೆಗೆ ಅವರು ಇತ್ತೀಚೆಗೆ ನಡೆದ, ತಮಿಳುನಾಡಿನ ಚುನಾವಣೆಯಲ್ಲಿ ಡಿಎಂಕೆ ಸ್ಟಾಲಿನ್ ಪರ ಕೆಲಸ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತರಿಸಿದ್ದಾರೆ. ಕರ್ನಾಟಕದಲ್ಲೂ ನೀವು ಅಧಿಕಾರಕ್ಕೆ ಬರಬೇಕು. ನಿಮಗೆ ಚುನಾವಣೆ ದೂರವಿಲ್ಲ. ನೀವು ಜನರ ಬಳಿ ದಿನಗಟ್ಟಲೇ ಕಳೆಯುವ ಬದಲು ಚುನಾವಣಾ ತಂತ್ರಗಾರಿಕೆ ಅಳವಡಿಸಿಕೊಳ್ಳಿ. ಇದರಲ್ಲಿ ನಿಮಗೆ ಪ್ರಶಾಂತ್ ನೆರವಾಗಲಿದ್ದಾರೆ.

ಚುನಾವಣೆಗೆ ಬಹಳ ಸಮಯವಿಲ್ಲ. ನೀವು ಯಾತ್ರೆ ಮತ್ತು ಗ್ರಾಮವಾಸ್ತವ್ಯ ಎಂದು ಸಮಯ ಹಾಳು ಮಾಡಬೇಡಿ. ಜನರ ಬಳಿ ತೆರಳಿ, ಅವರ ಕಷ್ಟ ಸುಖಗಳಿಗೆ ಸ್ಪಂದಿಸಿ, ಸಂಘಟನೆಗಾಗಿ ಸಮಾವೇಶ ನಡೆಯಲಿ. ರೈತರ ಕಷ್ಟ ಸುಖಗಳನ್ನು ಆಲಿಸಿ, ಅಧಿಕಾರಕ್ಕೆ ಬಂದರೆ ಏನು ಮಾಡುತ್ತೀರಿ ಎಂಬ ಭರವಸೆ ನೀಡಿ, ಚುನಾವಣಾ ಸಮೀಪದಲ್ಲಿ ನಾನೂ ನಿಮ್ಮ ಜೊತೆ ಕೈಜೋಡಿಸುತ್ತೇನೆ. ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸುವ ಮೂಲಕ ಕೇಂದ್ರ ಸರ್ಕಾರ ರೈತರ ಬೆನ್ನೆಲುಬು ಮುರಿಯಲು ಹೊರಟಿದೆ. ಇದರ ವಿರುದ್ಧ ರಾಷ್ಟ್ರಾದ್ಯಂತ ಪರ್ಯಾಯ ರೈತ ಸಂಘಟನೆ ಹುಟ್ಟು ಹಾಕಬೇಕು.

ನೀವು ರೈತ ನಾಯಕರ ಜೊತೆ ಹೋರಾಟ ನಡೆಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಅವರು ಎಂದಿಗೂ ನಿಮ್ಮನ್ನು ಕೈಬಿಡುವುದಿಲ್ಲ ಎಂದು ತಮ್ಮ ಸರ್ಕಾರ ಕೃಷಿಕನ ಪರವಾಗಿ ಕೈಗೊಂಡ ತೀರ್ಮಾನಗಳನ್ನು ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. 2014ರ ಲೋಕಸಭಾ ಚುನಾವಣೆಯ ನಂತರ ದೇಶದ ನಂಬರ್ ಒನ್ ಎಲೆಕ್ಷನ್ ಸ್ಪೆಷಲಿಷ್ಟ್ ಎಂದೇ ಖ್ಯಾತರಾದ ಪ್ರಶಾಂತ್ ಕಿಶೋರ್ ಅವರು ತದನಂತರದ ದಿನಗಳಲ್ಲಿ ಗುಜರಾತ್,ಪಶ್ಚಿಮಬಂಗಾಳ,ಉತ್ತರ ಪ್ರದೇಶ,ತಮಿಳ್ನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳ ಪರವಾಗಿ ಚುನಾವಣಾ ರಣನೀತಿಯನ್ನು ರೂಪಿಸಿದ್ದರು. ಈ ಪೈಕಿ ಬಹುತೇಕ ರಾಜ್ಯಗಳಲ್ಲಿ ಪ್ರಶಾಂತ್ ಕಿಶೋರ್ ರಣನೀತಿಯಂತೆ ಕೆಲಸ ಮಾಡಿದ ಪಕ್ಷಗಳು ಗೆಲುವು ಸಾಧಿಸಿ, ಅಧಿಕಾರ ಹಿಡಿದಿವೆ. ಇತ್ತೀಚೆಗೆ ತಮಿಳ್ನಾಡು ವಿಧಾನಸಭಾ ಚುನಾವಣೆಯಲ್ಲಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿ.ಎಂ.ಕೆ ಪಕ್ಷದ ಪರವಾಗಿ ಪ್ರಶಾಂತ್ ಕಿಶೋರ್ ರೂಪಿಸಿದ ಚುನಾವಣಾ ತಂತ್ರಗಾರಿಕೆ ಯಶಸ್ವಿಯಾಗಿತ್ತಲ್ಲದೆ,ಸ್ಟಾಲಿನ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ. ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಬಯಸಿತ್ತಾದರೂ,ತಮಗೆ ಎಐಸಿಸಿ ಉಪಾಧ್ಯಕ್ಷ ಸ್ಥಾನವೇ ಬೇಕು ಎಂದು ಅವರು ಪಟ್ಟು ಹಿಡಿದ ಪರಿಣಾಮವಾಗಿ ಮೌನವಾಗಿತ್ತು.

ಈ ಹಿನ್ನೆಲೆಯಲ್ಲಿ ಪ್ರಶಾಂತ್ ಕಿಶೋರ್ ಇದೀಗ ತಮ್ಮದೇ ಹೊಸ ಶಕ್ತಿಯನ್ನು ಸ್ಥಾಪಿಸಿದ್ದು,ಅದೇ ಕಾಲಕ್ಕೆ ಕರ್ನಾಟಕದಲ್ಲಿ ಜೆಡಿಎಸ್ ಪರವಾಗಿ ರಣತಂತ್ರ ರೂಪಿಸಲು ಬಂದ ಆಹ್ವಾನವನ್ನು ಒಪ್ಪಿದ್ದಾರೆ ಎಂದು ಮೂಲಗಳು ಹೇಳಿವೆ.
Post a Comment

Previous Post Next Post