ತೆಲಂಗಾಣದ ಹೋಟೆಲ್ನಲ್ಲಿ ಅನಿರೀಕ್ಷಿತ ಅಗ್ನಿ ಅವಘಡ : ಅನೇಕರ ಸ್ಥಿತಿ ಗಂಭೀರ , ೮ ಮಂದಿಯ ದುರ್ಮರಣ

 ತೆಲಂಗಾಣದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಐಷಾರಾಮಿ ಹೋಟೆಲ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ  ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

                 ಹೊಟೆಲ್ ನಲ್ಲಿ ಬೆಂಕಿ ಅವಘಡ

By : Rekha.M
Online Desk

ಸಿಕಂದರಾಬಾದ್: ತೆಲಂಗಾಣದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಐಷಾರಾಮಿ ಹೋಟೆಲ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ  ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಿಕಂದರಾಬಾದ್‌ನ ರೂಬಿ ಪ್ರೈಡ್ ಎಂಬ ಐಷಾರಾಮಿ ಹೋಟೆಲ್ ಕಟ್ಟಡದ ನೆಲ ಮಹಡಿಯಲ್ಲಿರುವ ಇ-ಬೈಕ್ ಶೋರೂಮ್‌ನಲ್ಲಿ ಸೋಮವಾರ ರಾತ್ರಿ ಸ್ಫೋಟ ಸಂಭವಿಸಿದ ನಂತರ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಈ ವರೆಗೂ 8 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ಸುಟ್ಟಗಾಯಗಳಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ಸಮಯದಲ್ಲಿ, ಪಾಸ್‌ಪೋರ್ಟ್ ಕಚೇರಿಗೆ ಸಮೀಪವಿರುವ ಈ ಹೋಟೆಲ್‌ನಲ್ಲಿ 25 ಮಂದಿ ಇದ್ದರು ಎಂದು ಹೇಳಲಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಮೂಲಗಳ ಪ್ರಕಾರ ರೂಬಿ ಮೋಟಾರ್ಸ್ ಶೋರೂಂನಲ್ಲಿ ಇರಿಸಲಾಗಿದ್ದ ಇ-ಬೈಕ್  ಬ್ಯಾಟರಿ ಅಥವಾ ಜನರೇಟರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿರುವ ಶಂಕೆ ಇದೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಹೇಳಿದ್ದಾರೆ.

ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡೀ ಅಂಗಡಿಯನ್ನು ಆವರಿಸಿಕೊಂಡಿದ್ದು ಬಳಿಕ ಕಟ್ಟಡದ ಇತರೆ ಭಾಗಗಳಿಗೆ ವ್ಯಾಪಿಸಿದೆ. ಬೆಂಕಿಗಿಂತ ಹೊಗೆಯೇ ಅಲ್ಲಿದ್ದವರಿಗೆ ಉಸಿರುಗಟ್ಟಿಸಿದೆ. ವಿಚಾರ ತಿಳಿಯುತ್ತಲೇ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಕಾರ್ಯಾಚರಣೆ ಆರಂಭಿಸಿ ಕೆಲವು ಗಂಟೆಗಳ ನಂತರವೂ ದಟ್ಟವಾದ ಹೊಗೆ ಹೊರಹೊಮ್ಮುತ್ತಲೇ ಇತ್ತು. ಅಕ್ಕಪಕ್ಕದಲ್ಲಿದ್ದ ಕೆಲವು ಸ್ಥಳೀಯರು ಕೂಡ ಕಾರ್ಯಾಚರಣೆಯಲ್ಲಿ ನೆರವಾಗಿ ಅಮೂಲ್ಯ ಜೀವಗಳ ರಕ್ಷಣೆಗೆ ಸಹಕರಿಸಿದರು ಎನ್ನಲಾಗಿದೆ.

ಅಗ್ನಿಶಾಮಕ ಇಲಾಖೆ ಡಿಜಿ ಸಂಜಯ್ ಜೈನ್ ಮಾತನಾಡಿ, ರಾತ್ರಿ 9.20 ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಎರಡು ಅಗ್ನಿಶಾಮಕ ಟೆಂಡರ್‌ಗಳನ್ನು ಸೇವೆಗೆ ಒತ್ತಲಾಯಿತು. ಗಾಯಾಳುಗಳನ್ನು ಗಾಂಧಿ ಆಸ್ಪತ್ರೆ ಮತ್ತು ಯಶೋದಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಹೋಟೆಲ್ 23 ಕೊಠಡಿಗಳನ್ನು ಹೊಂದಿದ್ದು, ಬೆಂಕಿ ಕಾಣಿಸಿಕೊಂಡಾಗ ಸರಿಸುಮಾರು 50 ಪ್ರತಿಶತ ಕೊಠಡಿಗಳಲ್ಲಿ ಗ್ರಾಹಕರಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಸನತ್‌ನಗರ ಶಾಸಕ ಹಾಗೂ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಕೂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಕಟ್ಟಡದಲ್ಲಿ ತುರ್ತು ನಿರ್ಗಮನದ ಮಾರ್ಗವಿಲ್ಲದ ಕಾರಣ ಏಳು ಮಂದಿ ವಿವಿಧ ಮಹಡಿಗಳಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಕೆಲ ನಿವಾಸಿಗಳು ಪೈಪ್‌ಲೈನ್‌ ಮೂಲಕ ಕೆಳಗೆ ಇಳಿಯಲು ಯತ್ನಿಸಿದರು. ಅಗ್ನಿಶಾಮಕ ದಳ ಹೈಡ್ರಾಲಿಕ್ ಎಲಿವೇಟರ್ ಬಳಸಿ ನಾಲ್ವರನ್ನು ರಕ್ಷಿಸಿದೆ.

ಫೈರ್ ಸ್ಪ್ರಿಂಕ್ಲರ್‌ಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ
ಮಾಧ್ಯಮಗಳೊಂದಿಗೆ ಮಾತನಾಡಿದ ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಮತ್ತು ಸಚಿವ ತಲಸಾನಿ ಶ್ರೀನಿವಾಸ್ ಯಾದವ್, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸ್ಫೋಟ ಮತ್ತು ಬೆಂಕಿಗೆ ನಿಜವಾಗಿ ಏನು ಕಾರಣ ಎಂಬುದನ್ನು ತನಿಖೆಯ ಬಳಿಕ ತಿಳಿಯಲಿದೆ ಎಂದು ಹೇಳಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಹೊಟೆಲ್ ಗೆ ಅಳವಡಿಸಲಾಗಿದ್ದ ಫೈರ್ ಸ್ಪ್ರಿಂಕ್ಲರ್‌ಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ರಾತ್ರಿ 9.37ಕ್ಕೆ ಅಗ್ನಿ ಅವಘಡದ ಕರೆ ಮಾಡಲಾಗಿದ್ದು, ತಕ್ಷಣವೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಎಂದು ಅಗ್ನಿಶಾಮಕ ವಿಭಾಗದ ಡಿಜಿ ಸಂಜಯ್ ಜೈನ್ ಹೇಳಿದ್ದಾರೆ.

ಅಂತೆಯೇ ಕಟ್ಟಡದ ಸೆಲ್ಲಾರ್‌ನಲ್ಲಿಯೂ ಹಲವಾರು ವಾಹನಗಳನ್ನು ನಿಲ್ಲಿಸಲಾಗಿದೆ. ಕಟ್ಟಡದಲ್ಲಿ ಸುಮಾರು 20 ರಿಂದ 23 ಜನರಿದ್ದರು. ಹೆಚ್ಚಿನ ನಿವಾಸಿಗಳು ವ್ಯಾಪಾರಸ್ಥರಾಗಿದ್ದರು ಮತ್ತು ಉತ್ತರ ಭಾರತೀಯರು ಎಂದು ತೋರುತ್ತದೆ. ಹೊಗೆಯು ಮೆಟ್ಟಿಲುಗಳ ಮೂಲಕ ಕಟ್ಟಡವನ್ನು ಆವರಿಸಿತು. ಅವರಲ್ಲಿ ಕೆಲವರು ಹೊಗೆಯಿಂದ ಉಸಿರುಕಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆಂದು ತೋರುತ್ತದೆ ಎಂದು ಸಿವಿ ಆನಂದ್ ಹೇಳಿದ್ದಾರೆ.Post a Comment

Previous Post Next Post