ದಸರಾ: ಛತ್ತೀಸ್‌ಗಢದಲ್ಲಿ ಸುಟ್ಟುಹೋಗದೆ ಉಳಿದ ರಾವಣನ 10 ತಲೆಗಳು.. ಗುಮಾಸ್ತನಿಗೆ ಶಿಕ್ಷೆ

 ಛತ್ತೀಸ್‌ಗಢದ ದಸರಾ ಆಚರಣೆಯ ವೇಳೆ ರಾವಣನ ಪ್ರತಿಕೃತಿಯ ಎಲ್ಲಾ ಹತ್ತು ತಲೆಗಳು ಸುಟ್ಟು ಹೋಗದ ಹಿನ್ನೆಲೆಯಲ್ಲಿ ಛತ್ತೀಸ್‌ಗಢದ ಧಮ್ತಾರಿ ನಾಗರಿಕ ಸಂಸ್ಥೆಯ ನೌಕರ(ಗುಮಾಸ್ತ)ನನ್ನು ಅಮಾನತುಗೊಳಿಸಲಾಗಿದೆ ಮತ್ತು ನಾಲ್ವರು...

                          ಸುಟ್ಟುಹೋಗದೆ ಉಳಿದ ರಾವಣನ 10 ತಲೆಗಳು

By : Rekha.M
Online Desk

ಧಮ್ತಾರಿ: ಛತ್ತೀಸ್‌ಗಢದ ದಸರಾ ಆಚರಣೆಯ ವೇಳೆ ರಾವಣನ ಪ್ರತಿಕೃತಿಯ ಎಲ್ಲಾ ಹತ್ತು ತಲೆಗಳು ಸುಟ್ಟು ಹೋಗದ ಹಿನ್ನೆಲೆಯಲ್ಲಿ ಛತ್ತೀಸ್‌ಗಢದ ಧಮ್ತಾರಿ ನಾಗರಿಕ ಸಂಸ್ಥೆಯ ನೌಕರ(ಗುಮಾಸ್ತ)ನನ್ನು ಅಮಾನತುಗೊಳಿಸಲಾಗಿದೆ ಮತ್ತು ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಅಕ್ಟೋಬರ್ 5 ರಂದು ಧಮ್ತಾರಿಯ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ರಾವಣನ ತಲೆಗಳು ಹಾಗೇ ಉಳಿದಿದ್ದು, ಮುಂಡ ಮಾತ್ರ ಸುಟ್ಟು ಬೂದಿಯಾಗಿತ್ತು.

ದಸರಾ ಅಥವಾ ವಿಜಯದಶಮಿಯು ವಾರ್ಷಿಕ ದುರ್ಗಾಪೂಜಾ ಉತ್ಸವದ ಅಂತ್ಯದಿನದಂದು ದುಷ್ಟರ ವಿರುದ್ಧ ವಿಜಯವನ್ನು ಸಂಕೇತಿಸಲು ರಾವಣನ ಪ್ರತಿಕೃತಿಗಳನ್ನು ದೇಶದಾದ್ಯಂತ ಸುಡಲಾಗುತ್ತದೆ. ಧಮ್ತಾರಿಯಲ್ಲಿ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮವನ್ನು ಸ್ಥಳೀಯ ನಾಗರಿಕ ಸಂಸ್ಥೆ ಆಯೋಜಿಸಿತ್ತು.

ದಸರಾ ಆಚರಣೆಯ ನಂತರ, ರಾವಣನ ಮೂರ್ತಿ ತಯಾರಿಕೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಗುಮಾಸ್ತ ರಾಜೇಂದ್ರ ಯಾದವ್ ಅವರನ್ನು ಅಮಾನತುಗೊಳಿಸಿ ಧಮ್ತಾರಿ ಮುನ್ಸಿಪಲ್ ಕಾರ್ಪೊರೇಷನ್ (ಡಿಎಂಸಿ) ಆದೇಶ ಹೊರಡಿಸಿದೆ. 2022 ರ ದಸರಾ ಆಚರಣೆಗಾಗಿ ರಾವಣನ ಪ್ರತಿಮೆಯನ್ನು ಮಾಡುವಲ್ಲಿ ಸಹಾಯಕ ಗ್ರೇಡ್-3 ರಾಜೇಂದ್ರ ಯಾದವ್ ಡಿಎಂಸಿಯ ಪ್ರತಿಷ್ಠೆ ಹಾಳು ಮಾಡುವಲ್ಲಿ ಗಂಭೀರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಸಹಾಯಕ ಎಂಜಿನಿಯರ್ ವಿಜಯ್ ಮೆಹ್ರಾ ಮತ್ತು ಉಪ ಎಂಜಿನಿಯರ್‌ಗಳಾದ ಲೋಮಸ್ ದೇವಾಂಗನ್, ಕಮಲೇಶ್ ಠಾಕೂರ್ ಮತ್ತು ಕಮತಾ ನಾಗೇಂದ್ರ ಎಂಬ ನಾಲ್ವರು ಅಧಿಕಾರಿಗಳಿಗೆ ಡಿಎಂಸಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಈ ಸಂಬಂಧ ಅವರ ಉತ್ತರ ಕೇಳಲಾಗಿದೆ. ಧಮ್ತಾರಿ ಮೇಯರ್ ವಿಜಯ್ ದೇವಾಂಗನ್ ಮಾತನಾಡಿ, ಮೂರ್ತಿ ತಯಾರಿಸುವ ಜವಾಬ್ದಾರಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಈಗ ಕಾಮಗಾರಿಯ ಪಾವತಿಯನ್ನು ತಡೆಹಿಡಿಯಲಾಗುವುದು ಎಂದಿದ್ದಾರೆ.

ಪಾಲಿಕೆ ಅಧಿಕಾರಿಗಳ ಪ್ರಕಾರ, ಕುಶಲಕರ್ಮಿಗಳು ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದರು ಎನ್ನಲಾಗಿದ್ದು, ಸಮಾರಂಭಕ್ಕೂ ಮುನ್ನ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದರು. ಪ್ರತಿಕೃತಿಯ ಹತ್ತು ತಲೆಗಳು ಸುಟ್ಟು ಹೋಗದೆ ಉಳಿದಿವೆ ಎಂದರೆ ಅದನ್ನು ಸರಿಯಾಗಿ ಮಾಡಲಾಗಿಲ್ಲ ಎಂದು ಅವರು ಹೇಳಿದ್ದಾರೆ.


Post a Comment

Previous Post Next Post