'ಹಿಂದೂ ಪರಿಶಿಷ್ಟರಿಗೆ ಮಾತ್ರ ಮೀಸಲಾತಿ, ಮತಾಂತರಿಗಳಿಗೆ ಅಲ್ಲ': ವಿಶ್ವ ಹಿಂದೂ ಪರಿಷತ್

 ‘ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬಾರದು.. ಹಿಂದೂ ಪರಿಶಿಷ್ಟರಿಗೆ ಮಾತ್ರ ಮೀಸಲಾತಿ ಇರಬೇಕು’ ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

                          ವಿಶ್ವ ಹಿಂದೂ ಪರಿಷತ್ ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್

By : Rekha.M 
Online Desk

ಬೆಂಗಳೂರು: ‘ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬಾರದು.. ಹಿಂದೂ ಪರಿಶಿಷ್ಟರಿಗೆ ಮಾತ್ರ ಮೀಸಲಾತಿ ಇರಬೇಕು’ ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

ಈ ಕುರಿತು ಮಾತನಾಡಿರುವ ವಿಶ್ವ ಹಿಂದೂ ಪರಿಷತ್ ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಅವರು, '‘ಪರಿಶಿಷ್ಟ ಜಾತಿಯ ವ್ಯಕ್ತಿಗಳು ಬೇರೆ ಧರ್ಮಗಳಿಗೆ ಮತಾಂತರಗೊಂಡರೆ ಅವರಿಗೆ ಪರಿಶಿಷ್ಟ ಜಾತಿಯ ಸ್ಥಾನ ನೀಡಬೇಕೇ ಎಂದು ಪರಿಶೀಲಿಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್‌ ನೇತೃತ್ವದ ವಿಚಾರಣಾ ಆಯೋಗವನ್ನು ಕೇಂದ್ರವು ನೇಮಿಸಿದೆ. ‘ಸಂವಿಧಾನದ ಆಶಯದಂತೆ ಹಿಂದೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಾತ್ರ ಮೀಸಲಾತಿಯ ಹಕ್ಕುಗಳನ್ನು ನೀಡಬೇಕು’ ಎಂದು ಹೇಳಿದರು.

ಪರಿವರ್ತಿತ ಪರಿಶಿಷ್ಟ ಜಾತಿಗೆ ಅನುಸೂಚಿತ ಜಾತಿ ಸ್ಥಿತಿ ಮತ್ತು ಅಸ್ತಿತ್ವದಲ್ಲಿರುವ ಪರಿಶಿಷ್ಟ ಜಾತಿಗಳ ಮೇಲೆ ಇದರಿಂದಾಗುವ ಪರಿಣಾಮಗಳ ಕುರಿತು ವಿಸೃತ್ತ ಸಮಾಲೋಚನೆಗಳು ನಡೆಯಬೇಕು. ಈ ಪ್ರಕ್ರಿಯೆಯಲ್ಲಿ ವಿಶ್ವ ಹಿಂದೂ ಪರಿಷತ್ ಸಕ್ರಿಯವಾಗಿ ಭಾಗವಹಿಸುತ್ತದೆ. ತಮ್ಮ ಧರ್ಮದಲ್ಲಿ ಯಾವುದೇ ಜಾತಿ ಭೇದಗಳಿಲ್ಲ ಎಂದು ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳು ಹೇಳಿಕೊಳ್ಳುತ್ತವೆ. ಆದ್ದರಿಂದ ಆ ಧರ್ಮಗಳಿಗೆ ಮತಾಂತರಗೊಂಡ ಪರಿಶಿಷ್ಟರಿಗೆ ಮೀಸಲಾತಿ ಸೌಲಭ್ಯ ವಿಸ್ತರಿಸಬಾರದು. 1950ರಲ್ಲಿ ಸಂವಿಧಾನದ ಅನುಸೂಚಿತ ಜಾತಿಗಳ ಆದೇಶದಂತೆ ಹಿಂದೂ ಪರಿಶಿಷ್ಟ ಜಾತಿಗಳಿಗೆ ಮಾತ್ರ ಮೀಸಲಾತಿ ಸೌಲಭ್ಯಗಳನ್ನು ನೀಡಬೇಕು ಎಂದು ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.

ಅಲ್ಲದೆ ‘ಇದರ ಹೊರತಾಗಿ, ಕ್ರಿಶ್ಚಿಯನ್ ಮಿಷನರಿಗಳು, ಇಸ್ಲಾಮಿಕ್ ಸಂಘಟ ನೆಗಳು ಈ ಸೌಲಭ್ಯವನ್ನು ಪರಿವರ್ತಿತ ಪರಿಶಿಷ್ಟರಿಗೂ ವಿಸ್ತರಿಸಬೇಕು ಎಂದು ಪ್ರಯತ್ನಿಸುತ್ತಿವೆ. ಆದರೆ ಪರಿಶಿಷ್ಟ ಜಾತಿಯ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ ಎಂದು ಅವರು ಹೇಳಿದರು

‘ದೇಗುಲಗಳನ್ನು ಸರ್ಕಾರದ ಆಡಳಿತದಿಂದ ಮುಕ್ತಗೊಳಿಸಿ’
ಅಂತೆಯೇ ‘ರಾಜ್ಯ ಸರ್ಕಾರದ ಆಡಳಿತದಲ್ಲಿರುವ ದೇವಸ್ಥಾನಗಳನ್ನು ಹಿಂದೂ ಸಮಾಜಕ್ಕೆ ಮರಳಿ ನೀಡಬೇಕು ಎಂದು ಒತ್ತಾಯಿಸಿದ ಅವರು, ಈ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಭೇಟಿ ಮಾಡಿದ್ದು, ಅವರು ಸಹ ದೇವಸ್ಥಾನಗಳು ಸರ್ಕಾರದ ಆಡಳಿತದಿಂದ ಮುಕ್ತಗೊಳಿಸಬೇಕು. ಬರುವ ದಿನಗಳಲ್ಲಿ ಪ್ರತ್ಯೇಕ ವ್ಯವಸ್ಥೆ ರೂಪಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ವಿಎಚ್‌ಪಿ ಜಂಟಿ ಕಾರ್ಯದರ್ಶಿ ಕೋಟೇಶ್ವರ ಶರ್ಮ, ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಕೇಶವ್ ಹೆಗಡೆ, ಸದಸ್ಯ ವಿನಾಯಕ್ ಇದ್ದರು.
 Post a Comment

Previous Post Next Post