ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ನಗದು ಗಿಫ್ಟ್; ಸರ್ಕಾರಕ್ಕೆ ತೀವ್ರ ಮುಜುಗರ; ಲೋಕಾಯುಕ್ತರಿಗೆ ದೂರು!

 ಮುಖ್ಯಮಂತ್ರಿಗಳ ಕಚೇರಿಯಿಂದ ಕೆಲವು  ಪತ್ರಕರ್ತರಿಗೆ ದೀಪಾವಳಿ ಉಡುಗೊರೆಯಾಗಿ 1 ಲಕ್ಷ ರೂಪಾಯಿ ನಗದು ಉಡುಗೊರೆ ನೀಡಿರುವ ಆರೋಪ  ಕೇಳಿಬಂದಿದ್ದು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ.

                  ಸಿಎಂ ಬಸವರಾಜ ಬೊಮ್ಮಾಯಿ

By : Rekha.M
Online Desk

ಬೆಂಗಳೂರು: ಮುಖ್ಯಮಂತ್ರಿಗಳ ಕಚೇರಿಯಿಂದ ಕೆಲವು  ಪತ್ರಕರ್ತರಿಗೆ ದೀಪಾವಳಿ ಉಡುಗೊರೆಯಾಗಿ 1 ಲಕ್ಷ ರೂಪಾಯಿ ನಗದು ಉಡುಗೊರೆ ನೀಡಿರುವ ಆರೋಪ  ಕೇಳಿಬಂದಿದ್ದು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ. ಸಿಎಂಒ ಮೂಲಗಳ ಪ್ರಕಾರ, ಮುಖ್ಯಮಂತ್ರಿಗಳು ಕ್ಷಮೆ ಕೋರಿದ್ದು ತಮಗೆ ನಗದು ಉಡುಗೊರೆ ಬಗ್ಗೆ ಮಾಹಿತಿ ಇರಲಿಲ್ಲ ಈ ಬಗ್ಗೆ ತನಿಖೆಗೆ ಆದೇಶಿಸುತ್ತಿರುವುದಾಗಿ ತಿಳಿದುಬಂದಿದೆ.

ರಾಜಕೀಯ ವರದಿಗಾರಿಕೆ ವಿಭಾಗದಲ್ಲಿರುವ ಕೆಲವು ಹಿರಿಯ ಪತ್ರಕರ್ತರು ತಮಗೆ ಅ.22 ರಂದು ಹಬ್ಬದ ಉಡುಗೊರೆ ಬಾಕ್ಸ್ ಗಳಲ್ಲಿ ಸಿಹಿ ಹಾಗೂ ಡ್ರೈ ಫ್ರೂಟ್ಸ್ ಇರುವ ಬಾಕ್ಸ್ ಗಳು ಹಾಗೂ ಒಂದು ಲಕ್ಷ ರೂಪಾಯಿ ನಗದು ಇರುವ ಲಕೋಟೆ ಬಂದಿತ್ತು ಎಂದು ಆರೋಪಿಸಿದ್ದರು.

ಪ್ರತಿ ವರ್ಷದ ದೀಪಾವಳಿಗೆ ಸಿಎಂಒಯಿಂದ ಸಿಹಿ ಹಾಗೂ ಡ್ರೈಫ್ರೂಟ್ಸ್ ಗಳ ಉಡುಗೊರೆ ಬರುವುದು ಸಾಮಾನ್ಯ ವಿಷಯವಾಗಿದೆ. ಆದರೆ ಈ ಬಾರಿ ಲಕೋಟೆಯಲ್ಲಿ ಒಂದು ಲಕ್ಷ ರೂಪಾಯಿ ಹಣ ಬಂದಿದ್ದು ಪತ್ರಕರ್ತರ ವಲಯದಲ್ಲಿ ಅಚ್ಚರಿ ಹಾಗೂ ಆಕ್ರೋಶಗಳಿಗೆ ಕಾರಣವಾಗಿತ್ತು. ಕೆಲವು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿ ನಗದು ಉಡುಗೊರೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಸಿಎಂಒ ಗೆ ಬರೆದಿದ್ದರು. 

ಈ ರೀತಿಯಾಗಿ ಎಷ್ಟು ಮಂದಿ ಪತ್ರಕರ್ತರಿಗೆ ನಗದು ಉಡುಗೊರೆ ಹೋಗಿದೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. 

ಈ ವಿಷಯವಾಗಿ ಸ್ಪಷ್ಟನೆ ನೀಡಿರುವ ಸಿಎಂಒ, "ಸಿಎಂ ಬೊಮ್ಮಾಯಿಯವರಿಗಾಗಲೀ, ಅಥವಾ ಮಾಧ್ಯಮಗಳೊಂದಿಗೆ ಸಮನ್ವಯ ಕಾರ್ಯದಲ್ಲಿ ತೊಡಗಿರುವವರಿಗಾಗಲೀ ನಗದು ಉಡುಗೊರೆ ಬಗ್ಗೆ ಮಾಹಿತಿ ಇಲ್ಲ, ನಾವು ಹಲವು ಪತ್ರಕರ್ತರು ಹಾಗೂ ಸಂಪಾದಕರಿಗೆ ಸ್ವೀಟ್ ಬಾಕ್ಸ್ ಗಳನ್ನು ಕಳಿಸಿಕೊಟ್ಟಿದ್ದೇವೆ ಆದರೆ ಅದರಲ್ಲಿ ನಗದು ಉಡುಗೊರೆ ಇದ್ದದ್ದು ತಿಳಿದಿರಲಿಲ್ಲ ಎಂದು ಹೇಳಿದೆ.

ಈ ಬೆಳವಣಿಗೆಗಳ ಬಗ್ಗೆ ವಿಪಕ್ಷ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಇದು ತೆರಿಗೆದಾರರ ಹಣದ ದುರುಪಯೋಗ ಎಂದು ಹೇಳಿದ್ದು, ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಆಗ್ರಹಿಸಿದೆ. ಈ ರೀತಿ ಉಡುಗೊರೆ ನೀಡುವುದಕ್ಕೆ ಹಣದ ಮೂಲ ಯಾವುದು? ಎಷ್ಟು ಮಂದಿಗೆ ಈ ರೀತಿ ಹಣ ನೀಡಲಾಗಿದೆ ಹಾಗೂ ಎಷ್ಟು ಮಂದಿ ಅದನ್ನು ಹಿಂತಿರುಗಿಸಿದ್ದಾರೆ ಎಂಬುದನ್ನು ರಾಜ್ಯದ ಜನತೆ ತಿಳಿಯಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕರ್ನಾಟಕದ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ್ದೀಪ್ ಸಿಂಗ್ ಸುರ್ಜೆವಾಲ ಟ್ವೀಟ್ ಮಾಡಿ "ಸಿಎಂ ಬೊಮ್ಮಾಯಿ ಹಾಗೂ ಅವರ ಕಚೇರಿಯಿಂದ ಲಂಚದ ಆಮಿಷದ ಹಗರಣವನ್ನು ಬಯಲಿಗೆಳೆದಿರುವ ದಿಟ್ಟ ಪತ್ರಕರ್ತರಿಗೆ ಹ್ಯಾಟ್ಸ್ ಆಫ್ ಎಲ್ಲರೂ ಮಾರಾಟಕ್ಕೆ ಇಲ್ಲ ಎಂಬುದನ್ನು ಬಿಜೆಪಿ ಸರ್ಕಾರ ಅರ್ಥ ಮಾಡಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಇನ್ನು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್ ಪಿ) ಈ ವಿಷಯವಾಗಿ ಲೋಕಾಯುಕ್ತರಿಗೆ ದೂರು ನೀಡಿದ್ದು, ದೀಪಾವಳಿ ಉಡುಗೊರೆಯ ಸೋಗಿನಲ್ಲಿ ಪತ್ರಕರ್ತರಿಗೆ ಲಂಚದ ಆಮಿಷವೊಡ್ಡಿರುವ ಸಿಎಂ ಬೊಮ್ಮಾಯಿ ಹಾಗೂ ಅವರ ಮಾಧ್ಯಮ ಸಂಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದೆ. 

ಜೆಎಸ್ ಪಿ ಯ ಸಹ ಅಧ್ಯಕ್ಷ ಆದರ್ಶ್ ಆರ್ ಅಯ್ಯರ್ ಅವರು ಮಾತನಾಡಿ, ಇ-ಮೇಲ್ ಮೂಲಕ ಲೋಕಾಯುಕ್ತ ಎಡಿಜಿಪಿಗೆ ದೂರು ನೀಡಲಾಗಿದೆ ಇದನ್ನೇ ಖುದ್ದಾಗಿ ಶನಿವಾರ ಲೋಕಾಯುಕ್ತರಿಗೆ ನೀಡಲಾಗುತ್ತದೆ. ಲಂಚ, ಭ್ರಷ್ಟಾಚಾರ, ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ಸಿಎಂ ಹಾಗೂ ಅವರ ಮಾಧ್ಯಮ ಸಂಯೋಜಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಲೋಕಾಯುಕ್ತ ಮೂಲಗಳ ಪ್ರಕಾರ, ಪ್ರಕ್ರಿಯೆಗಳ ಅನುಸಾರ, ಎಫ್ಐಆರ್ ದಾಖಲಿಸುವುದಕ್ಕೂ ಮುನ್ನ ಪ್ರಾಥಮಿಕ ತನಿಖೆ ನಡೆಸಬೇಕಾಗುತ್ತದೆ. ಮೇಲ್ನೋಟಕ್ಕೆ ಯಾವುದೇ ಅಂಶಗಳು ಕಂಡುಬಂದಲ್ಲಿ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ. ನಂತರ ವಿಸ್ತೃತ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. Post a Comment

Previous Post Next Post