ಜಮೀನು ಕಬಳಿಕೆ ಆರೋಪ: ಸಾರಿಗೆ ಸಚಿವ ಶ್ರೀರಾಮುಲು ವಜಾಕ್ಕೆ ಕಾಂಗ್ರೆಸ್ ನಾಯಕ ಉಗ್ರಪ್ಪ ಆಗ್ರಹ

 ಜಮೀನು ಕಬಳಿಕೆ ಆರೋಪ ಎದುರಿಸುತ್ತಿರುವ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಆಗ್ರಹಿಸಿದ್ದಾರೆ.

             ವಿ.ಎಸ್.ಉಗ್ರಪ್ಪ

By : Rekha.M
Online Desk

ಬೆಂಗಳೂರು: ಜಮೀನು ಕಬಳಿಕೆ ಆರೋಪ ಎದುರಿಸುತ್ತಿರುವ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಆಗ್ರಹಿಸಿದ್ದಾರೆ.

ತುಂಗ ಭದ್ರಾ ನಾಲೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಕಬಳಿಸಿರುವ ಆರೋಪ ಎದುರಿಸುತ್ತಿರುವ ಸಚಿವ ಬಿ. ಶ್ರೀರಾಮುಲು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಉಗ್ರಪ್ಪ ಒತ್ತಾಯಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶ್ರೀರಾಮುಲು ಅವರು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರೊಂದಿಗೆ ಶಾಮೀಲಾಗಿ 27 ಎಕರೆ 5 ಗುಂಟೆ ಸರ್ಕಾರಿ ಜಮೀನು ಕಬಳಿಸಿರುವುದು ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ. ಶ್ರೀರಾಮುಲು ಅವರು ರಾಜಕಾಲುವೆಗಾಗಿ ಸ್ವಾಧೀನಪಡಿಸಿಕೊಂಡ 10 ಎಕರೆ ಭೂಮಿ ಸೇರಿದಂತೆ 27.25 ಎಕರೆ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ ಎಂದರು.

2011ರ ಫೆ.2ರಂದು ಕಂದಾಯ ನಿರೀಕ್ಷಕರಿಂದ ಡಿಸಿವರೆಗಿನ ಅಧಿಕೃತ ಯಂತ್ರೋಪಕರಣಗಳನ್ನು ದುರುಪಯೋಗಪಡಿಸಿಕೊಂಡು ಎರಡು ವಾರದಲ್ಲಿ ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗಿದೆ. ಒಂದೆಡೆ ಜನಾರ್ದನ ರೆಡ್ಡಿ ಅವರ ಪತ್ನಿ ರುಕ್ಮಿಣಿ ಬಡಾವಣೆಯನ್ನು 17.5 ಎಕರೆಯಲ್ಲಿ ಅಭಿವೃದ್ಧಿಪಡಿಸಿದ್ದರೆ, ಇನ್ನೊಂದೆಡೆ ಕಾಲುವೆಗೆ ಸ್ವಾಧೀನಪಡಿಸಿಕೊಂಡ 10 ಎಕರೆ ಜಮೀನನ್ನು ಶ್ರೀರಾಮುಲು ಕಬಳಿಸಿದ್ದಾರೆ. ನ್ಯಾಯಾಲಯಕ್ಕೆ ಆರೋಪಪಟ್ಟಿಯೂ ಸಲ್ಲಿಕೆಯಾಗಿದೆ. ಬಿಜೆಪಿ ನಾಯಕರಿಗೆ ನೈತಿಕತೆ ಇದ್ದರೆ ರಾಮುಲು ಅವರನ್ನು ಸಂಪುಟದಿಂದ ಕೈಬಿಡಲಿ ಎಂದು ಉಗ್ರಪ್ಪ ಹೇಳಿದರು.

ಒಟ್ಟು 300 ಕೋಟಿ ರೂ ಮೌಲ್ಯದ ಜಮೀನನ್ನು ಕಬಳಿಸಲಾಗಿದ್ದು, ಬಳ್ಳಾರಿಯ ಹಿಂದಿನ ಜಿಲ್ಲಾಧಿಕಾರಿ ಬಿ. ಶಿವಪ್ಪ ಸೇರಿದಂತೆ 11 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿದೆ. ಶ್ರೀರಾಮುಲು ಸಚಿವ ಸ್ಥಾನದಲ್ಲಿ ಮುಂದುವರಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಕಾರಣದಿಂದ ಅವರ ರಾಜೀನಾಮೆ ಪ‍ಡೆಯಬೇಕು. ಆರೋಪಿಗಳ ಜಾಮೀನು ರದ್ಧತಿಗೆ ಲೋಕಾಯುಕ್ತ ಪೊಲೀಸರು ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಲೋಕಾಯುಕ್ತ ಪೊಲೀಸರಿಗೆ ತನಿಖೆಗೆ ಸೂಚಿಸಲಾಗಿದ್ದು, ಅವರು ಮಾರ್ಚ್ 31, 2022 ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
Post a Comment

Previous Post Next Post