ಮುಂಬೈ: ಹಣ್ಣುಗಳನ್ನು ಸಾಗಿಸುತ್ತಿದ್ದ ಕಂಟೈನರ್‌ನಿಂದ 502 ಕೋಟಿ ರೂ. ಮೌಲ್ಯದ 50 ಕೆಜಿ ಕೊಕೇನ್ ವಶ

 ಮುಂಬೈನ ನವ ಶೇವಾ ಬಂದರಿನಲ್ಲಿ ಹಣ್ಣುಗಳನ್ನು ಸಾಗಿಸುತ್ತಿದ್ದ ಕಂಟೈನರ್‌ನಿಂದ 502 ಕೋಟಿ ರೂಪಾಯಿ ಮೌಲ್ಯದ 50 ಕೆ.ಜಿಗಳಷ್ಟು 'ಉತ್ತಮ ಗುಣಮಟ್ಟದ' ಕೊಕೇನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆಆರ್‌ಐ) ವಶಪಡಿಸಿಕೊಂಡಿದೆ.

             ಪ್ರಾತಿನಿಧಿಕ ಚಿತ್ರ

By : Rekha.M

ಮುಂಬೈ: ಮುಂಬೈನ ನವ ಶೇವಾ ಬಂದರಿನಲ್ಲಿ ಹಣ್ಣುಗಳನ್ನು ಸಾಗಿಸುತ್ತಿದ್ದ ಕಂಟೈನರ್‌ನಿಂದ 502 ಕೋಟಿ ರೂಪಾಯಿ ಮೌಲ್ಯದ 50 ಕೆ.ಜಿಗಳಷ್ಟು 'ಉತ್ತಮ ಗುಣಮಟ್ಟದ' ಕೊಕೇನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆಆರ್‌ಐ) ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಮುದ್ರದ ಕಂಟೈನರ್‌ಗಳ ಮೂಲಕ ಕಳ್ಳಸಾಗಣೆ ಮಾಡಲು ಯತ್ನಿಸಿದ ಕೊಕೇನ್‌ನ ಅತಿ ದೊಡ್ಡ ವಶ ಇದಾಗಿದ್ದು, ಗುರುವಾರ ಡ್ರಗ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ದಕ್ಷಿಣ ಆಫ್ರಿಕಾದಿಂದ ನವ ಶೇವಾ ಬಂದರಿಗೆ ತರಲಾಗುತ್ತಿತ್ತು ಎಂದು ಅವರು ಹೇಳಿದರು.

ಡಿಆಆರ್‌ಐನ ಮುಂಬೈ ವಲಯ ಘಟಕವು ಕೊಕೇನ್ ರವಾನಿಸುತ್ತಿರುವ ಬಗ್ಗೆ ಗುಪ್ತಚರ ಮಾಹಿತಿಗಳನ್ನು ಸ್ವೀಕರಿಸಿದೆ. ಅದರಂತೆ, ಡಿಆರ್‌ಐ ಅಧಿಕಾರಿಗಳ ಸಮ್ಮುಖದಲ್ಲಿ ಕಂಟೈನರ್ ಅನ್ನು ಗುರುತಿಸಿ ಪರಿಶೀಲಿಸಿದಾಗ, ಉತ್ತಮ ಗುಣಮಟ್ಟದ ಕೊಕೇನ್‌ನ ತಲಾ 1 ಕೆಜಿ ತೂಕದ ಪೊಟ್ಟಣಗಳನ್ನು ಹಸಿರು ಸೇಬುಗಳ ಬಾಕ್ಸ್‌ಗಳಲ್ಲಿ ಇರಿಸಲಾಗಿತ್ತು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಇಂತಹ ಒಟ್ಟು 50 ಪೊಟ್ಟಣಗಳು ಪತ್ತೆಯಾಗಿವೆ. ಅಕ್ರಮ ಮಾರುಕಟ್ಟೆಯಲ್ಲಿ 502 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಅನ್ನು ಪರೀಕ್ಷೆಯ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಈ ವಾರದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದ ಕಿತ್ತಳೆ ಹಣ್ಣಿನ ಕಂಟೈನರ್‌ನಿಂದ 198 ಕೆ.ಜಿ ಮೆಥ್ ಮತ್ತು 9 ಕೆ.ಜಿ ಕೊಕೇನ್ ಅನ್ನು ವಾಶಿಯಲ್ಲಿ ವಶಪಡಿಸಿಕೊಂಡ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. ಈಗ ಅದೇ ಆಮದುದಾರರು ಭಾರತಕ್ಕೆ ಕಂಟೈನರ್ ತಂದಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಡಿಆರ್‌ಐ ಅಧಿಕಾರಿಗಳು ಆಮದುದಾರನನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದರು.


Post a Comment

Previous Post Next Post