ಇ.ಡಿ ನಡೆಸಿದ ದಾಳಿಗಳಿಂದ ಮನೀಶ್ ಸಿಸೋಡಿಯಾ ವಿರುದ್ಧ ಯಾವ ಸಾಕ್ಷಿಯೂ ಸಿಕ್ಕಿಲ್ಲ: ಅರವಿಂದ ಕೇಜ್ರಿವಾಲ್

 ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಇಂದು ಮತ್ತೆ 35 ಹೊಸ ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದು, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಪುರಾವೆಗಳನ್ನು ಹುಡುಕಲು ಕೇಂದ್ರದ ತನಿಖಾ ಸಂಸ್ಥೆಗಳು ನಡೆಸಿದ ನೂರಾರು ದಾಳಿಗಳು ಏನನ್ನೂ ನೀಡಿಲ್ಲ ಮತ್ತು ಏನನ್ನೂ ಮಾಡಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ತಿಳಿಸಿದ್ದಾರೆ.

                                    ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

By : Rekha.M

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಇಂದು ಮತ್ತೆ 35 ಹೊಸ ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದು, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಪುರಾವೆಗಳನ್ನು ಹುಡುಕಲು ಕೇಂದ್ರದ ತನಿಖಾ ಸಂಸ್ಥೆಗಳು ನಡೆಸಿದ ನೂರಾರು ದಾಳಿಗಳು ಏನನ್ನೂ ನೀಡಿಲ್ಲ ಮತ್ತು ಏನನ್ನೂ ಮಾಡಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳದ (ಸಿಬಿಐ) ನೂರಾರು ಅಧಿಕಾರಿಗಳ ಸಮಯವನ್ನು ‘ಕೆಟ್ಟ ರಾಜಕೀಯ’ಕ್ಕಾಗಿ ವ್ಯರ್ಥ ಮಾಡಲಾಗುತ್ತಿದೆ ಎಂದು ದೂರಿದರು.

ಈಗ ರದ್ದಾದ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಬಗ್ಗೆ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಇ.ಡಿ ದೆಹಲಿ, ಪಂಜಾಬ್ ಮತ್ತು ಹೈದರಾಬಾದ್‌ನ ಸುಮಾರು 35 ಸ್ಥಳಗಳಲ್ಲಿ ಮುಂಜಾನೆ ದಾಳಿ ನಡೆಸಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ದೆಹಲಿ ಅಬಕಾರಿ ನೀತಿ 2021-22ರ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಮುಖ ಆರೋಪಿಯಾಗಿದ್ದಾರೆ.

'500ಕ್ಕೂ ಹೆಚ್ಚು ದಾಳಿಗಳು, 300ಕ್ಕೂ ಹೆಚ್ಚು ಅಧಿಕಾರಿಗಳು ಮನೀಶ್ ಸಿಸೋಡಿಯಾ ವಿರುದ್ಧ ಪುರಾವೆಗಳನ್ನು ಹುಡುಕಲು ಮೂರು ತಿಂಗಳಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ. ಸಿಸೋಡಿಯಾ ಅವರು ಯಾವುದೇ ಅಕ್ರಮ ಎಸಗಿಲ್ಲದ ಕಾರಣ, ದಾಳಿಯಲ್ಲಿ ಅಧಿಕಾರಿಗಳಿಗೆ ಏನೂ ಪತ್ತೆಯಾಗಿಲ್ಲ' ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

‘ಒಬ್ಬರ ಕೊಳಕು ರಾಜಕಾರಣಕ್ಕಾಗಿ ಹಲವು ಅಧಿಕಾರಿಗಳ ಸಮಯ ವ್ಯರ್ಥವಾಗುತ್ತಿದೆ. ಹೀಗಾದರೆ, ಈ ದೇಶ ಹೇಗೆ ಪ್ರಗತಿ ಸಾಧಿಸುತ್ತದೆ ಎಂದು ಪ್ರಶ್ನಿಸಿದರು.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಸಿಬಿಐ ತನಿಖೆಗೆ ಶಿಫಾರಸು ಮಾಡಿದ ನಂತರ ಅಬಕಾರಿ ನೀತಿ ಕುರಿತು ತನಿಖೆ ಆರಂಭವಾಗಿದೆ. ಅಲ್ಲದೆ 11 ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು.

ಈ ಪ್ರಕರಣದಲ್ಲಿ ಎಎಪಿ ಶಾಸಕ ದುರ್ಗೇಶ್ ಪಾಠಕ್ ಮತ್ತು ತಿಹಾರ್ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಅವರನ್ನು ಇ.ಡಿ ಪ್ರಶ್ನಿಸಿದೆ.


Post a Comment

Previous Post Next Post