ಕುಮಾರಸ್ವಾಮಿ -ಯೋಗೇಶ್ವರ್ ಕ್ರೆಡಿಟ್ ವಾರ್: ಎಚ್ ಡಿಕೆ ಹೊರಗಿಟ್ಟು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ; ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

 ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನಡುವಿನ ಜಟಾಪಟಿ ಮತ್ತೆ ಶುರುವಾಗಿದೆ.

                   ಯೋಗೇಶ್ವರ್ ಮತ್ತು ಕುಮಾರಸ್ವಾಮಿ

By : Rekha.M
Online Desk

ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನಡುವಿನ ಜಟಾಪಟಿ ಮತ್ತೆ ಶುರುವಾಗಿದೆ. ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿಗೆ 50 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದ್ದು ಇದಕ್ಕಾಗಿ ಇಬ್ಬರ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ.

ಚನ್ನಪಟ್ಟಣ ಕ್ಷೇತ್ರದ ಗ್ರಾಮೀಣಾಭಿವೃದ್ಧಿಗೆ ಸಿಎಂ ವಿಶೇಷ ಅನುದಾನಕ್ಕಾಗಿ ಉಭಯ ನಾಯಕರು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು. ಅದಕ್ಕಾಗಿ 50 ಕೋಟಿ ರೂ ಬಿಡುಗಡೆಯಾಗಿತ್ತು.

ಚನ್ನಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ರಾಮನಗರ ‌ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಆದ್ರೆ ಅವರು ಗೈರಾದ ಹಿನ್ನೆಲೆ ಎಂಎಲ್ ಸಿ ಯೋಗೇಶ್ವರ್ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಯೋಗೇಶ್ವರ್ ಶೇ 40 ಕಮಿಷನ್ ಗಾಗಿಯೇ ಈ ಕಾಮಗಾರಿಗಳಿಗೆ ಚಾಲನೆ ಕೊಡಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಇನ್ನು ತಮ್ಮನ್ನು ಕಡೆಗಣಿಸಿರುವ ಬಗ್ಗೆ ಹೆಚ್​ಡಿ ಕುಮಾರಸ್ವಾಮಿಗೆ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದು ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಸಚಿವ ಅಶ್ವತ್ಥ್ ನಾರಾಯಣ್ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎನ್ನಲಾಗಿದೆ. ಆದ್ರೆ ಇವರಿಬ್ಬರ ಜಗಳದ ನಡುವೆ ಸಧ್ಯ ಎಂಎಲ್ ಸಿ ಯೋಗೇಶ್ವರ್ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮತ್ತು ಕೆಆರ್​ಡಿ‌ಐಎಲ್​ನ ವತಿಯಿಂದ ಗ್ರಾಮೀಣ ರಸ್ತೆಗಳ ಭೂಮಿ‌ಪೂಜೆ ಕಾರ್ಯಕ್ರಮ ನಡೆದಿದ್ದು ಚನ್ನಪಟ್ಟಣ ತಾಲ್ಲೂಕಿನ ರಸ್ತೆಗಳ ಅಭಿವೃದ್ಧಿಗಾಗಿ ಸಿಎಂ ಬೊಮ್ಮಾಯಿ 50 ಕೋಟಿ ರೂ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು.

ಅಶ್ವತ್ಥ್ ನಾರಾಯಣ್ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಸದನದಲ್ಲಿ ಗುಡುಗಿದ ಬೆನ್ನಲ್ಲೇ ಸಚಿವ ಅಶ್ವತ್ಥ್ ನಾರಾಯಣ್ ಶಂಕುಸ್ಥಾಪನೆಗೆ ಮುಂದಾಗಿದ್ದರು. ಆದ್ರೆ ಈಗ ಅವರೇ ಗೈರಾಗಿದ್ದಾರೆ. ಹಾಗೂ ಹೆಚ್​ಡಿ ಕುಮಾರಸ್ವಾಮಿ ಅವರನ್ನ ಭೂಮಿ‌ಪೂಜೆಯಿಂದ ಹೊರಗಿಟ್ಟಿದ್ದಾರೆ.

Post a Comment

Previous Post Next Post