ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ತ್ರಿಪಾಠಿ ನಾಮಪತ್ರ ತಿರಸ್ಕೃತ; ಈಗ ಖರ್ಗೆ Vs ತರೂರ್

 ರಾಜಕೀಯ ವಲಯದಲ್ಲಿ ತೀವ್ರ ಕೂತುಹಲ ಮೂಡಿಸಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಜಾರ್ಖಂಡ್‌ನ ಮಾಜಿ ಸಚಿವ ಕೆಎನ್ ತ್ರಿಪಾಠಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕೆ ಸಲ್ಲಿಸಿದ್ದ ನಾಮಪತ್ರವನ್ನು...

               ನಾಮಪತ್ರ ಸಲ್ಲಿಸಿದ ಖರ್ಗೆ ಮತ್ತು ತರೂರ್

By : Rekha.M
Online Desk

ನವದೆಹಲಿ: ರಾಜಕೀಯ ವಲಯದಲ್ಲಿ ತೀವ್ರ ಕೂತುಹಲ ಮೂಡಿಸಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಜಾರ್ಖಂಡ್‌ನ ಮಾಜಿ ಸಚಿವ ಕೆಎನ್ ತ್ರಿಪಾಠಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕೆ ಸಲ್ಲಿಸಿದ್ದ ನಾಮಪತ್ರವನ್ನು ಶನಿವಾರ ತಿರಸ್ಕರಿಸಲಾಗಿದೆ. ಇದರೊಂದಿಗೆ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ಪೈಪೋಟಿ ಏರ್ಪಟ್ಟಿದೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶುಕ್ರವಾರ ಈ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.

ನಾಮಪತ್ರ ಪರಿಶೀಲನೆ ಬಳಿಕ ಇಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು, ಮೂವರು ಅಭ್ಯರ್ಥಿಗಳು ಒಟ್ಟು 20 ಫಾರ್ಮ್ ಗಳನ್ನು ಸಲ್ಲಿಸಿದ್ದರು. ಅವುಗಳಲ್ಲಿ ನಾಲ್ಕು ತಿರಸ್ಕೃತವಾಗಿವೆ ಎಂದರು.

ಖರ್ಗೆ ಅವರು 14 ಫಾರ್ಮ್ ಗಳನ್ನು ಸಲ್ಲಿಸಿದರೆ, ತರೂರ್ ಅವರು ಐದು ಮತ್ತು ತ್ರಿಪಾಠಿ ಅವರು ಕೇವಲ ಒಂದು ಫಾರ್ಮ್ ಸಲ್ಲಿಸಿದ್ದರು. ಅದು ಸಹ ತಿರಸ್ಕೃತವಾಗಿದೆ ಎಂದಿದ್ದಾರೆ.

ತ್ರಿಪಾಠಿ ಅವರಿಗೆ ಪ್ರತಿಪಾದಕರಾಗಿ ಮಾಡಿದ್ದ ಒಬ್ಬರ ಸಹಿ ಹೊಂದಿಕೆಯಾಗದ ಕಾರಣ ಮತ್ತು ಇನ್ನೊಬ್ಬ ಪ್ರತಿಪಾದಕರ ಸಹಿ ಪುನರಾವರ್ತನೆಯಾದ ಕಾರಣ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಮಿಸ್ತ್ರಿ ತಿಳಿಸಿದ್ದಾರೆ.

ಮಲಿಕಾರ್ಜುನ್ ಖರ್ಗೆ ಮತ್ತು ಶಶಿ ತರೂರ್ ಅವರು ತಮ್ಮ ನಾಮಪತ್ರಗಳನ್ನು ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನಾಂಕವಾಗಿದೆ. ಆ ದಿನ ಚಿತ್ರಣ ಸ್ಪಷ್ಟವಾಗುತ್ತದೆ. ಯಾರೂ ನಾಮಪತ್ರ ಹಿಂತೆಗೆದುಕೊಳ್ಳದಿದ್ದರೆ ಮತದಾನ ಪ್ರಕ್ರಿಯೆ ನಡೆಯುತ್ತದೆ ಎಂದು ಮಿಸ್ತ್ರಿ ಹೇಳಿದ್ದಾರೆ.


Post a Comment

Previous Post Next Post