ಡಾ.ಪುನೀತ್‌ರಾಜ್‌ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಚಾಲನೆ

 ಚುನಾವಣಾ ನೀತಿ ಸಂಹಿತೆ ಜಾರಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಾರ್ವಜನಿಕ ಯೋಜನೆಗಳ ಉದ್ಘಾಟನೆ ಮತ್ತು ಲೋಕಾರ್ಪಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.

                                                             ಸಿಎಂ ಬೊಮ್ಮಾಯಿ

By : Rekha.M
Online Desk

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಾರ್ವಜನಿಕ ಯೋಜನೆಗಳ ಉದ್ಘಾಟನೆ ಮತ್ತು ಲೋಕಾರ್ಪಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬಿಬಿಎಂಪಿಯಿಂದ ಪಂತರಪಾಳ್ಯದಲ್ಲಿ ನಿರ್ಮಿಸಲಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಡಾ.ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿ ಚಾಲನೆ ನೀಡಿದ ಮಾತನಾಡಿದ ಬೊಮ್ಮಾಯಿಯವರು, ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಕೊಂಡಾಡಲು ಈ ವೇದಿಕೆಯನ್ನು ಬಳಸಿಕೊಂಡರು.

ಆಸ್ಪತ್ರೆಯನ್ನು ರೂ.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಸ್ಪತ್ರೆಯಲ್ಲಿ ಮೂಲ ಸೌಕರ್ಯ, ತುರ್ತು ಚಿಕಿತ್ಸಾ ಘಟಕ, ಔಷಧಾಲಯ, ಕಚೇರಿಗಳು, ನರ್ಸ್ ಗಳಿಗೆ ಕೊಠಡಿ, ಸ್ತ್ರೀರೋಗ ವಿಭಾಗ, ಪ್ರಯೋಗಾಲಯ, ಶಸ್ತ್ರಚಿಕಿತ್ಸೆ ವಿಭಾಗ, ರಕ್ತ ಸಂಗ್ರಹ ಕೊಠಡಿ, ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಆಪರೇಷನ್ ಥಿಯೇಟರ್, ಮಕ್ಕಳ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲಾಗಿದೆ. ಅದೇ ರೀತಿ, 15 ಎಕರೆ 08 ಗುಂಟಾ ವಿಸ್ತೀರ್ಣದ ನಾಯಂಡಹಳ್ಳಿ ಕೆರೆಯನ್ನು 7.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ಇದೇ ವೇಳೆ ಸಚಿವ ವಿ.ಸೋಮಣ್ಣ ಅವರನ್ನು ಬೊಮ್ಮಾಯಿಯವರು ಶ್ಲಾಘಿಸಿದರು. ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ನಗರಗಳನ್ನು ನೋಡಿದ್ದೇನೆ. ಆದರೆ, ಅವುಗಳಿಗೆ ಹೋಲಿಸಿದರೆ ಬೆಂಗಳೂರು ಉತ್ತಮವಾಗಿದೆ. ನಮ್ಮಲ್ಲಿ ಅನೇಕ ಅಂತರರಾಷ್ಟ್ರೀಯ ಕಂಪನಿಗಳಿವೆ. ಬ್ರಾಂಡ್ ಬೆಂಗಳೂರು ನಿರ್ಮಿಸಲು ಮತ್ತು ಪ್ರಚಾರ ಮಾಡಲು ಬದ್ಧರಾಗಿದ್ದೇವೆ ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿಗೆ ಒಂದು ವರ್ಷದಲ್ಲಿ 8,000 ಕೋಟಿ ಮಂಜೂರು ಮಾಡಿದ್ದೇನೆ. ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸೇಫ್ ಸಿಟಿ ಯೋಜನೆಯಡಿ 7,000 ಕ್ಯಾಮೆರಾಗಳನ್ನು ಅಳವಡಿಕೆಗೆ ನಿರ್ಧರಿಸಿದ್ದರು. ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡಲು ಅನುಮತಿ ನೀಡಿದ್ದು ನಮ್ಮ ಸರ್ಕಾರ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ವಸತಿ ಸಚಿವ ವಿ.ಸೋಮಣ್ಣ, ದಿವಂಗತ ನಟ ಪುನೀತರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


Post a Comment

Previous Post Next Post