ವಿಧಾನಸಭೆ ಮಹಾ ಸಮರಕ್ಕೆ ಮೂಹೂರ್ತ ಫಿಕ್ಸ್: ಒಂದೇ ಹಂತದಲ್ಲಿ ಮತದಾನ; ವಿಕಲ ಚೇತನರಿಗೆ ಮನೆಯಿಂದಲೇ ಮತದಾನದ ಅವಕಾಶ!

 ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

                                                                   ವಿಧಾನಸೌಧ

By : Rekha.M
Online Desk

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ. ಮತ್ತು ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಈಶಾನ್ಯದ ಮೂರು ರಾಜ್ಯಗಳ ಚುನಾವಣೆ ಸಕ್ಸಸ್ ಆಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ನಮ್ಮ ಪ್ರಯತ್ನ. ಕರ್ನಾಟಕದಲ್ಲಿ ಪುರುಷ ಮತದಾರರು 2,62,42,561 ಇದ್ದು, 2,59,26,319 ಮಹಿಳಾ ಮತದಾರರು ಇದ್ದಾರೆ. ಇನ್ನು ಕರ್ನಾಟಕದಲ್ಲಿ 4,699 ತೃತೀಯ ಲಿಂಗಿಗಳು ಮತದಾರರು ಇದ್ದು, 12.15 ಲಕ್ಷ ಯುವ ಮತದಾರರು ಇದ್ದಾರೆ.

ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಮಾಹಿತಿ ನೀಡಿದರು. ಇದೇ ಮೊದಲ ಬಾರಿಗೆ ಮತದಾನ ಮಾಡುವ 18-19 ವಯಸ್ಸಿನ ಮತದಾರರ ಸಂಖ್ಯೆ 9,17,241. ಕರ್ನಾಟಕದಲ್ಲಿ 5.55 ಲಕ್ಷ ವಿಕಲಚೇತನ ಮತದಾರರರು ಇದ್ದಾರೆ.

ಭಾರತದ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನದ ದಿನಾಂಕಗಳನ್ನು ಪ್ರಕಟಿಸಿದೆ. ಚುನಾವಣಾ ದಿನಾಂಕಗಳ ಘೋಷಣೆಯೊಂದಿಗೇ ʼಮಾದರಿ ನೀತಿ ಸಂಹಿತೆʼ  ಜಾರಿಗೆ ಬಂದಿದೆ. ರಾಜಕೀಯ ನಾಯಕರು, ಪಕ್ಷಗಳು, ಅಧಿಕಾರಿಗಳು, ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲರೂ ಈ ನೀತಿಸಂಹಿತೆಗೆ ಬದ್ಧರಾಗಿರಬೇಕಾಗುತ್ತದೆ.

ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಆಯೋಗ ಕ್ರಮ ಕೈಗೊಳ್ಳಲಿದೆ. ಬೆಂಗಳೂರಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗುತ್ತಿದೆ. ಇದನ್ನು ತಡೆಯಲು ಪರಿಹಾರ ಕಂಡುಕೊಳ್ಳಲು ಎಲೆಕ್ಟ್‌ಥಾನ್ ಕೈಗೊಳ್ಳಲು ಮುಂದಾಗಿದ್ದೇವೆ. ಐಐಎಸ್ಸಿ ಇದರಲ್ಲಿ ಕೈಜೋಡಿಸಿದೆ ಎಂದು ಮಾಹಿತಿ ನೀಡಿದ್ದಾರೆ.
Post a Comment

Previous Post Next Post