ಕಿಚ್ಚ ಸುದೀಪ್ ನಿವಾಸ ಮುಂದೆ ಧರಣಿ ನಡೆಸುವುದಾಗಿ ನಿರ್ಮಾಪಕ ಕೆಸಿಎನ್ ಕುಮಾರ್ ಎಚ್ಚರಿಕೆ!

 ಅಭಿನಯ ಚಕ್ರವರ್ತಿ, ಮಾಣಿಕ್ಯ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಕಿಚ್ಚ ಸುದೀಪ್ ತಮಗೆ ಕೊಟ್ಟಿರುವ ಮಾತನ್ನು ಈಡೇರಿಸದಿದ್ದರೆ ಅವರ ಮನೆ ಮುಂದೆ ಧರಣಿ ನಡೆಸುವುದಾಗಿ ಸ್ಯಾಂಡಲ್ ವುಡ್ ನಿರ್ಮಾಪಕ ಕೆಸಿಎನ್ ಕುಮಾರ್(Producer K C N Kumar) ಎಚ್ಚರಿಕೆ ನೀಡಿದ್ದಾರೆ. 

                              ನಿರ್ಮಾಪಕ ಕೆ ಸಿ ಎನ್ ಕುಮಾರ್, ಕಿಚ್ಚ ಸುದೀಪ್(ಸಂಗ್ರಹ ಚಿತ್ರ)

Posted By : Rekha.M
Online Desk

ಬೆಂಗಳೂರು: ಅಭಿನಯ ಚಕ್ರವರ್ತಿ, ಮಾಣಿಕ್ಯ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಕಿಚ್ಚ ಸುದೀಪ್ ತಮಗೆ ಕೊಟ್ಟಿರುವ ಮಾತನ್ನು ಈಡೇರಿಸದಿದ್ದರೆ ಅವರ ಮನೆ ಮುಂದೆ ಧರಣಿ ನಡೆಸುವುದಾಗಿ ಸ್ಯಾಂಡಲ್ ವುಡ್ ನಿರ್ಮಾಪಕ ಕೆಸಿಎನ್ ಕುಮಾರ್(Producer K C N Kumar) ಎಚ್ಚರಿಕೆ ನೀಡಿದ್ದಾರೆ. 

ಈ ಮಧ್ಯೆ ವಿವಾದಕ್ಕೆ ಸಂಬಂಧಿಸಿ ನಟ ಸುದೀಪ್(Kichcha Sudeep) ಒಂದೂವರೆ ತಿಂಗಳ ಹಿಂದೆ ತಮ್ಮ ವಕೀಲರ ಮೂಲಕ ಫಿಲ್ಮ್ ಚೇಂಬರ್‌ಗೆ ಪ್ರತಿಕ್ರಿಯಿಸಿ, ಕುಮಾರ್ ಅವರು ಆರೋಪಿಸಿರುವಂತೆ ಮಾಡಿರುವ ಹಣಕಾಸಿನ ವಹಿವಾಟಿನ ಬಗ್ಗೆ ಪುರಾವೆ ನೀಡುವಂತೆ ಕೇಳಿದ್ದರು ಎಂದು ತಿಳಿದುಬಂದಿದೆ.

ಸ್ಯಾಂಡಲ್ ವುಡ್ ನಿರ್ಮಾಪಕ ಕೆ ಸಿ ಎನ್ ಕುಮಾರ್  ಏಳು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಜೊತೆ ಮಾಡಿಕೊಂಡಿರುವ ಅಗ್ರಿಮೆಂಟ್ ನಂತೆ ಚಿತ್ರ ಮಾಡಿ ಕೊಟ್ಟಿರುವ ಮಾತು ಈಡೇರಿಸದಿದ್ದರೆ ಸುದೀಪ್ ಅವರ ನಿವಾಸ ಅಥವಾ ಶೂಟಿಂಗ್ ಸ್ಥಳದಲ್ಲಿ ಧರಣಿ ನಡೆಸುವುದಾಗಿ ಕುಮಾರ್ ಬೆದರಿಕೆ ಹಾಕಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿನ್ನೆ ಪತ್ರಿಕಾಗೋಷ್ಠಿ ಕರೆದು ಕುಮಾರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. 

ನಡೆದಿರುವ ಘಟನೆಯೇನು?: ಸುದೀಪ್ ಏಳು ವರ್ಷಗಳ ಹಿಂದೆಯೇ ನನ್ನ ಚಿತ್ರ ಮಾಡುತ್ತೇನೆ ಎಂದು ಹೇಳಿಕೊಂಡು ಬರುತ್ತಾ ಅಡ್ವಾನ್ಸ್ ಸಹ ತೆಗೆದುಕೊಂಡಿದ್ದರು. ಅವರ ಇತ್ತೀಚಿನ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆಯ ನಂತರ ತಮ್ಮ ಪ್ರಾಜೆಕ್ಟ್ ಮಾಡಬೇಕಾಗಿತ್ತು. ಆದರೆ ಅವರು ಈಗ ಬೇರೆ ಚಿತ್ರ ಒಪ್ಪಿಕೊಂಡಿದ್ದು ಇದರಿಂದ ನಮಗೆ ಬಹಳ ನಷ್ಟವಾಗುತ್ತಿದೆ ಎಂದು ಕುಮಾರ್ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸುದೀಪ್ ಮತ್ತು ಇತರ ನಟರಿಗೆ ಸಂಭಾವನೆ ಕೂಡ ನೀಡಿದ್ದೇನೆ ಎನ್ನುತ್ತಾರೆ. 

ಚಿತ್ರದ ಸ್ಕ್ರಿಪ್ಟ್ ಬಗ್ಗೆ ಚರ್ಚಿಸಲು ಸುದೀಪ್ ಅವರನ್ನು ಖುದ್ದಾಗಿ ಹೈದರಾಬಾದ್ ಮತ್ತು ಬ್ಯಾಂಕಾಕ್‌ಗೆ ಕರೆದಿದ್ದೇನೆ. ಆಗಿರುವ ಸಮಸ್ಯೆ ಬಗ್ಗೆ ಅವರ ಪತ್ನಿ ಪ್ರಿಯಾ ಸುದೀಪ್ ಗೆ ಸಹ ಹೇಳಿದ್ದೆ. ಅವರು ಅದನ್ನು ಪರಿಹರಿಸುವ ಭರವಸೆ ನೀಡಿದರು, ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸುದೀಪ್ ಅವರನ್ನು ಭೇಟಿ ಮಾಡಲು ಹಲವು ಬಾರಿ ಪ್ರಯತ್ನಿಸಿದ್ದೆ, ಆದರೆ ಅವರು ನನ್ನ ಫೋನ್ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ.

ಸಮಸ್ಯೆ ಬಗೆಹರಿಸಲು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಇತರ ಸದಸ್ಯರನ್ನು ಸುದೀಪ್ ಮನೆಗೆ ಕಳುಹಿಸಿದ್ದೆ ಆದರೆ ಅದು ಸಫಲವಾಗಲಿಲ್ಲ. ನ್ಯಾಯ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರವನ್ನೂ ಬರೆದಿದ್ದೇನೆ. ತಮ್ಮ ಅಧ್ಯಕ್ಷರು ಸುದೀಪ್ ಅವರಿಗೆ ಪತ್ರ ಬರೆದರೂ ಸೌಹಾರ್ದಯುತ ನಿರ್ಣಯಕ್ಕೆ ಸಲಹೆ ನೀಡಿದ್ದರೂ ವ್ಯರ್ಥವಾಗಿದೆ. ಚೆನ್ನೈನಲ್ಲಿರುವ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಹ ಹೋಗಿದ್ದೇನೆ, ಆದರೆ ಏನೂ ಪ್ರಯೋಜನವಾಗಿಲ್ಲ. ತೀರಾ ನೊಂದು ಬೇರೆ ದಾರಿ ಕಾಣದೆ ಇಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಬಂದು ನಿಂತಿದ್ದೇನೆ ಎಂದಿದ್ದಾರೆ.

ನಮ್ಮ ಉದ್ದೇಶ ಸುದೀಪ್ ಅವರ ಮಾನಹಾನಿಯಲ್ಲ, ನ್ಯಾಯಯುತವಾಗಿ ನಡೆದುಕೊಳ್ಳುವುದು. ನಾನು ಏಳು ವರ್ಷಗಳಿಂದ ಆರ್ಥಿಕ ನಷ್ಟವನ್ನು ಮೌನವಾಗಿ ಸಹಿಸಿಕೊಂಡಿದ್ದೇನೆ. ಇನ್ನು ಸಹಿಸಲು ಸಾಧ್ಯವಿಲ್ಲ. ಖಾಸಗಿ ಫೈನಾನ್ಷಿಯರ್‌ಗಳಿಂದ ಪಡೆದ ಸಾಲದ ಬಡ್ಡಿ ಮರುಪಾವತಿಸಲು ಕೆಲವು ಆಸ್ತಿಗಳನ್ನೂ ಮಾರಾಟ ಮಾಡಿದ್ದೇನೆ ಎಂದು ಕುಮಾರ್ ಅಳಲು ತೋಡಿಕೊಂಡರು. 
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ ಅವರು ಸುದೀಪ್ ಅವರ ನಿವಾಸಕ್ಕೆ ಭೇಟಿ ನೀಡಿರುವುದಾಗಿ ಹೇಳಿದ್ದಾರೆ.

ಕೆಸಿಎನ್ ಮಾಡಿರುವ ಹಣಕಾಸು ವಹಿವಾಟಿಗೆ ದಾಖಲೆ ನೀಡಿದರೆ 5.50 ಕೋಟಿ ರೂಪಾಯಿ ಹಿಂತಿರುಗಿಸಲು ಸಿದ್ಧ ಎಂದು ಸುದೀಪ್ ಹೇಳಿಕೆ ನೀಡಿದ್ದಾರೆ. ಕುಮಾರ್ ಅವರು ಹಣಕಾಸಿನ ವಹಿವಾಟುಗಳ ಹಕ್ಕುಗಳನ್ನು ತೋರಿಸುವ ದಾಖಲೆಗಳನ್ನು ಒದಗಿಸಬಹುದು. ಸಮಸ್ಯೆಯನ್ನು ಬಗೆಹರಿಸಿ ಮುಂದೆ ಕೆಸಿಎನ್ ಮತ್ತು ಸುದೀಪ್ ಅವರು ಒಟ್ಟಿಗೆ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಬಣಕಾರ ಹೇಳಿದರು, ಅವರು ಸುದೀಪ್ ಅವರ ಮನೆ ಮುಂದೆ ಕುಮಾರ್ ಅವರ ಧರಣಿಗೆ ತಮ್ಮ ಬೆಂಬಲವನ್ನು ಭರವಸೆ ನೀಡಿದರು.


Post a Comment

Previous Post Next Post