ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆಯಾದ ಯೋಜನೆಗಳಿವು...

 ʻಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಎಂಬ ಯೋಜನೆ ವರ್ಷವಿಡೀ ನಡೆಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.

                                                                   ಕನ್ನಡ ಧ್ವಜ
Posted By : Rekha.M
Source : Online Desk

ಬೆಂಗಳೂರು: ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾಗಿ 1ನೇ ನವೆಂಬರ್, 2023ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ʻಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಎಂಬ ಯೋಜನೆ ವರ್ಷವಿಡೀ ನಡೆಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ. 

ʻಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಯೋಜನೆಯಲ್ಲಿ ಇಡೀ ವರ್ಷ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ, ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಮತ್ತು ಯುವಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ. 

ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಎಂ.ಎಂ. ಕಲಬುರಗಿ ಅವರ ಹೆಸರಿನಲ್ಲಿ ಒಂದು ಟ್ರಸ್ಟ್ ನ್ನು ಸ್ಥಾಪಿಸಲಾಗುವುದು ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರತಿಷ್ಠಾನದ ಮೂಲಕ ಅವರ ಸಾಹಿತ್ಯ ಹಾಗೂ ಪರಿಸರ ಸಂರಕ್ಷಣೆಯ ಚಿಂತನೆಗಳನ್ನು ಯುವಜನಾಂಗಕ್ಕೆ ಪರಿಚಯಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಎರಡು ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದೂ ಸಿಎಂ ಬಜೆಟ್ ನಲ್ಲಿ ಘೋಷಿಸಿದ್ದಾರೆ. 

ನಮ್ಮ ರಾಜ್ಯದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು ಮತ್ತು ಯುವ ಪೀಳಿಗೆಗೆ ಪರಿಚಯಿಸಲು ಪ್ರಮುಖ ಪಾತ್ರವಹಿಸುತ್ತಿರುವ ರಾಮನಗರ ಜಿಲ್ಲೆಯ ಜಾನಪದ ಲೋಕಕ್ಕೆ ಎರಡು ಕೋಟಿ ರೂ. ಅನುದಾನ ನೀಡಲಾಗುವುದು. ಇದೇ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯಲ್ಲಿ ಜಾನಪದ ಲೋಕ ಸ್ಥಾಪನೆ ಮಾಡಲಾಗುವುದು. ಬಂಜಾರ ಸಮುದಾಯದ ಸಾಂಸ್ಕೃತಿಕ ಮತ್ತು ಜಾನಪದ ನೃತ್ಯ ಕಲೆಗಳು ನಶಿಸಿ ಹೋಗುತ್ತಿರುವ ಕಾರಣ ಅವರ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಉಳಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.


Post a Comment

Previous Post Next Post