ಹಾಸನ ವಿಮಾನ ನಿಲ್ದಾಣಕ್ಕೆ ಮತ್ತೆ ಅಡಿಗಲ್ಲು ಹಾಕಲು ಮುಂದಾದರೆ ಸಿಎಂ ಬೊಮ್ಮಾಯಿ ವಿರುದ್ಧ ಪ್ರತಿಭಟನೆ: ಜೆಡಿಎಸ್

 ಹಾಸನ ವಿಮಾನ ನಿಲ್ದಾಣಕ್ಕೆ ಮತ್ತೆ ಅಡಿಗಲ್ಲು ಹಾಕಲು ಮುಂದಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಜೆಡಿಎಸ್ ಬುಧವಾರ ಎಚ್ಚರಿಕೆ ನೀಡಿದೆ.

                                                               ಜೆಡಿಎಸ್ ನಾಯಕ ರೇವಣ್ಣ

By : Rekha.M
Online Desk

ಹಾಸನ: ಹಾಸನ ವಿಮಾನ ನಿಲ್ದಾಣಕ್ಕೆ ಮತ್ತೆ ಅಡಿಗಲ್ಲು ಹಾಕಲು ಮುಂದಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಜೆಡಿಎಸ್ ಬುಧವಾರ ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರದ ಶಂಕುಸ್ಥಾಪನೆ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಚಿವ, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಹಾಸನದಲ್ಲಿ ಬಿಜೆಪಿ ಮುಖಂಡರಿಗೆ ಮಾನಾ ಮಾರ್ಯಾದೆ ಇಲ್ಲದೆ ಅಡಿಗಲ್ಲು ಹಾಕೋಕೆ‌ ಹೊರಟಿದ್ದಾರೆ. ಸಿಎಂ ಬೊಮ್ಮಾಯಿಯವರಿಗೆ ಗೊತ್ತಿದೆಯೊ ಇಲ್ಲವೊ ಗೊತ್ತಿಲ್ಲ. ಮಾಜಿ ಪ್ರಧಾನಿ ದೇವೇಗೌಡ ಅವರು ಅಡಿಗಲ್ಲು ಹಾಕಿದ್ದ ವಿಮಾನ ನಿಲ್ದಾಣಕ್ಕೆ ಮತ್ತೆ ಅಡಿಗಲ್ಲು ಹಾಕೋಕ್ಕೆ ಬಿಜೆಪಿ ಹೊರಟಿದೆ ಎಂದು ಹೇಳಿದ್ದಾರೆ.

ಇನ್ನು ಪೂರ್ಣಗೊಳ್ಳದ ಯೋಜನೆಗಳ ಉದ್ಘಾಟನೆಗೆ ಸ್ಥಳೀಯ ಶಾಸಕರು, ಜಿಲ್ಲಾಡಳಿತ ಮಂಡಳಿ ಆತುರ ಮಾಡುತ್ತಿರುವುದೇಕೆ? ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಲ್ಲ ಯೋಜನೆಗಳಿಗೆ ಅನುದಾನ ನೀಡಲಾಗಿತ್ತು. ಹೀಗಾಗಿ ಬಿಜೆಪಿ ನಾಯಕರಿಗೆ ಕಾರ್ಯಕ್ರಮ ಆಯೋಜಿಸುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.

ನಾನೇ ಜಾರಿ ಮಾಡಿದ್ದ ಯೋಜನೆಗೆ ಮತ್ತೆ ಅಡಿಗಲ್ಲು ಹಾಕೊಕ್ಕೆ ಹೊರಟಿದ್ದಾರೆ. ಹೊಸದು ಯಾವುದಾದರು ಇದ್ದರೆ, ಅದಕ್ಕೆ ಅದಕ್ಕೆ ಅಡಿಗಲ್ಲು ಹಾಕಲಿ. ದೇವೇಗೌಡರು ಅಡಿಗಲ್ಲು ಹಾಕಿದ್ದಕ್ಕೆ ಮತ್ತೆ ಅಡಿಗಲ್ಲು ಹಾಕೋದು ಏನಿದೆ..? ಹಾಗೇನಾದರೂ ಮಾಡಲು ಮುಂದಾಗಿದ್ದೇ ಆದರೆ, ನಾವು ಉಗ್ರ ಹೋರಾಟ ಮಾಡುತ್ತೇವೆ. ಚುನಾವಣೆಗೆ ಇನ್ನು 15 ದಿನಗಳಿವೆ. ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಚೆಕ್ ಕೊಡುತ್ತಿದ್ದಾರೆ ಹಳೆ ಚೆಕ್ ಅನ್ನು ಆಗ ಕೊಡದೆ ಈಗ ಕೊಡುತ್ತಿದ್ದಾರೆ ಎಂದು ಅಸಮದಾನ ವ್ಯಕ್ತಪಡಿಸಿದರು.

ಮಾರ್ಚ್ 13 ರಂದು ಹಾಸನಕ್ಕೆ ಮುಖ್ಯಮಂತ್ರಿ ಬೊಮ್ಮಾಯಿಯವರು ಭೇಟಿ ನೀಡಲಿದ್ದು, ಈ ವೇಳೆ ಮಹಿಳಾ ಮತ್ತು ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಇತರೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಅವರ ಒತ್ತಡದ ಮೇರೆಗೆ ಹಾಸನದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.


Post a Comment

Previous Post Next Post