ಬೆಂಗಳೂರು: ಫ್ಲೆಕ್ಸ್ ವಿಚಾರಕ್ಕೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ, ಎಫ್ಐಆರ್ ದಾಖಲು

 ಫ್ಲೆಕ್ಸ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವ ಘಟನೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿಜಯನಗರದ ಎಂ.ಸಿ.ಲೇಔಟ್‌ನ ಬಿಜಿಎಸ್ ಆಟದ ಮೈದಾನದಲ್ಲಿ ಶುಕ್ರವಾರ ನಡೆದಿದೆ.

                  ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯುತ್ತಿರುವುದು.
By :Rekha.M
Online Desk

ಬೆಂಗಳೂರು: ಫ್ಲೆಕ್ಸ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವ ಘಟನೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿಜಯನಗರದ ಎಂ.ಸಿ.ಲೇಔಟ್‌ನ ಬಿಜಿಎಸ್ ಆಟದ ಮೈದಾನದಲ್ಲಿ ಶುಕ್ರವಾರ ನಡೆದಿದೆ.

ಗೋವಿಂದರಾಜ ನಗರ ಕ್ಷೇತ್ರದ ಮಾಜಿ ಶಾಸಕ ಪ್ರಿಯಾಕೃಷ್ಣ ಬೆಂಬಲಿಗರು ಮತ್ತು ಹಾಲಿ ಶಾಸಕ, ಸಚಿವರೂ ಆದ ವಿ.ಸೋಮಣ್ಣ ಬೆಂಬಲಿಗರ ನಡುವೆ ಈ ಮಾರಾಮಾರಿ ನಡೆದಿದೆ ಎನ್ನಲಾಗಿದೆ.

ಕಾಂಗ್ರೆಸ್‌ ಬೆಂಬಲಿಗರು ಬಿಜಿಎಸ್‌ ಆಟದ ಮೈದಾನದಲ್ಲಿ ಮಾ.19ರಂದು ಕಾರ್ಯಕ್ರಮ ನಡೆಸಲು ಬಿಬಿಎಂಪಿಯಿಂದ ಅನುಮತಿ ಪಡೆದಿದ್ದರು. ಆದರೆ, ಯುಗಾದಿ ಉತ್ಸವ ಕಾರ್ಯಕ್ರಮ ನಡೆಸಲು ಶುಕ್ರವಾರ ಮೈದಾನದಲ್ಲಿ ಫ್ಲೆಕ್ಸ್‌ ಅಳವಡಿಸಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ.

ಇದನ್ನು ಬಿಜೆಪಿ ಕಾರ್ಯಕರ್ತರು ಪ್ರಶ್ನೆ ಮಾಡಿದಾಗ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದೊಣ್ಣೆ-ಕಲ್ಲುಗಳಿಂದ ಹೊಡೆದಾಡಿಕೊಂಡಿದ್ದಾರೆ. ಕೊನೆಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಸ್ಥಳದಲ್ಲಿ ಲಾಠಿಚಾರ್ಜ್ ನಡೆಸಿದ್ದಾರೆಂದು ತಿಳಿದುಬಂದಿದೆ. ಈ ಗಲಾಟೆಯಲ್ಲಿ ಬಿಜೆಪಿಯ ಹಲವು ಕಾರ್ಯಕರ್ತರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆನ್ನಲಾಗಿದೆ.

ಘಟನೆ ಸಂಬಂಧ ಗೋವಿಂದರಾಜ ನಗರ ಠಾಣೆ ಪೊಲೀಸರು ದೂರು-ಪ್ರತಿದೂರು ಸ್ವೀಕರಿಸಿದ್ದು, ಇದೀಗ ಮೂರು ಎಫ್ಐಆರ್ ಗಳನ್ನು ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಎರಡೂ ಗುಂಪುಗಳು ಕಲ್ಲು ತೂರಾಟ ನಡೆಸಿದ್ದು, ನಮ್ಮ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ 3 ಎಫ್‌ಐಆರ್‌ಗಳು ದಾಖಲಾಗಿವೆ. ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ಬಿ ನಿಂಬರಗಿ ಹೇಳಿದ್ದಾರೆ.


Post a Comment

Previous Post Next Post