410 ಕೋಟಿ ರೂ. ವೆಚ್ಚದಲ್ಲಿ ಕಾರಾಗೃಹಗಳ ನಿರ್ಮಾಣ, 51 ಕೋಟಿ ರೂ. ವೆಚ್ಚದಲ್ಲಿ ಠಾಣೆಗಳಿಗೆ ಹೈಟೆಕ್ ಸ್ಪರ್ಶ!

 ಬೆಂಗಳೂರು: ಪೊಲೀಸ್ ಠಾಣೆಗಳಿಗೆ ಆಧುನಿಕ ಸ್ಪರ್ಶ ನೀಡಲು ರಾಜ್ಯದಲ್ಲಿ ರೂ.240 ಕೋಟಿಗಳ ವೆಚ್ಚದಲ್ಲಿ 116 ನೂತನ ಪೊಲೀಸ್ ಠಾಣೆಗಳನ್ನು ನಿರ್ಮಿಸಿ ನಮ್ಮ ಸರ್ಕಾರ ದಾಖಲೆ ನಿರ್ಮಿಸಿದ್ದು, ಉಳಿದ ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣ ಕಾರ್ಯವನ್ನು ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.

   


ವಿಧಾನಸಭೆಯಲ್ಲಿ 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿಗಳು, ರಾಜ್ಯದ ಆಡಳಿತ ವ್ಯವಸ್ಥೆಯನ್ನ ಬಲಪಡಿಸಿ, ನಾಗರೀಕ ಅತ್ಯುತ್ತಮ ಸೇವೆಯನ್ನು ಒದಗಿಸಲು ಹಾಗೂ ಯುವ ಜನತೆಗೆ ಹೆಚ್ಚಿನ ಉದ್ಯೋಗಾವಕಾಶವನ್ನು ಒದಗಿಸುವುದಾಗಿ ತಿಳಿಸಿದರು.

 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ನೂತನ ಪೊಲೀಸ್ ಕಚೇರಿಗಳು, ಪೊಲೀಸ್ ಠಾಣೆಗಳ ನಿರ್ಮಾಣ, ಉನ್ನತೀಕರಣ ಮತ್ತು ಆಧುನೀಕರಣಕ್ಕೆ ರೂ.348 ಕೋಟಿ ವೆಚ್ಚ ಮಾಡಲಾಗಿದೆ. ಅದೇ ರೀತಿ ರೂ.410 ಕೋಟಿಗಳ ವೆಚ್ಚದಲ್ಲಿ ಕಾರಾಗೃಹಗಳ ನಿರ್ಮಾಣ ಮತ್ತು ರೂ.51 ಕೋಟಿ ವೆಚ್ಚದಲ್ಲಿ ಕಾರಾಗೃಹ ಆಧುನೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

  ಪೊಲೀಸ್ ಠಾಣೆಗಳಿಗೆ ಆಧುನಿಕ ಸ್ಪರ್ಶ ನೀಡಲು ರಾಜ್ಯದಲ್ಲಿ ರೂ.240 ಕೋಟಿಗಳ ವೆಚ್ಚದಲ್ಲಿ 116 ನೂತನ ಪೊಲೀಸ್ ಠಾಣೆಗಳನ್ನು ನಿರ್ಮಿಸಿ ನಮ್ಮ ಸರ್ಕಾರ ದಾಖಲೆ ನಿರ್ಮಿಸಿದೆ. ಉಳಿದ ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣ ಕಾರ್ಯವನ್ನು ಮುಂದುವರೆಸಲಾಗುವುದು.

   ಬೆಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕಾಗಿ ಹೊಸದಾಗಿ ನಾಲ್ಕು ಸಂಚಾರಿ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಬೆಂಗಳೂರಿನಲ್ಲಿ 9 ಕಾನೂನು ಮತ್ತು ಸುವ್ಯವಸ್ಥೆ, ಐದು ಸಂಚಾರಿ, ಆರು ಮಹಿಳಾ ಪೊಲೀಸ್ ಠಾಣೆಗಳನ್ನು ಹೊಸದಾಗಿ ಸ್ಥಾಪಿಸಲಾಗುವುದು, ಬೆಂಗಳೂರು ನಗರದ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ವಿವಿಧ ಹಂತಗಳಲ್ಲಿ ಹೆಚ್ಚುವರಿಯಾಗಿ 2,000 ಹುದ್ದೆಗಳನ್ನು ಸೃಜಿಸಲಾಗುವುದು.

  ಪೊಲೀಸ್ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಅತ್ಯಂತ ಮಹತ್ತರ ಹೆಜ್ಜೆಯನ್ನಿಟ್ಟಿದ್ದು, ಪೊಲೀಸ್ ಗೃಹ-2025 ಯೋಜನೆಯಡಿ 2023-23ನೇ ಸಾಲಿನಲ್ಲಿ ರೂ.250 ಕೋಟಿ ಗಳನ್ನು ಒದಗಿಸಲಾಗಿದ್ದು, ಪ್ರಸಕ್ತ ವರ್ಷ ರೂ.450 ಕೋಟಿ ಗಳನ್ನು ಒದಗಿಸುವುದರ ಮೂಲಕ 3,000 ವಸತಿ ಗೃಹಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು.

   ರಾಜ್ಯದಲ್ಲಿ ಈಗಾಗಲೇ 8 ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ವರದಿಗಾಗಿ ಕಾಯುವ ಅವಧಿಯನ್ನು 2 ವರ್ಷಗಳಿಂದ ಒಂದು ತಿಂಗಳಿಗೆ ಇಳಿಸಲಾಗಿದೆ. ಪ್ರಸಕ್ತ ವರ್ಷ ರೂ.10 ಕೋಟಿ ವೆಚ್ಚದಲ್ಲಿ ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಪ್ರಾರಂಭಿಸಲಾಗುವುದು.

   ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಧಾರವಾಡದಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲಾಗುವುದು. ಹಳೆಯ ಮತ್ತು ಅನುಪಯುಕ್ತ ವಾಹನಗಳನ್ನು ಹಂತಹಂತವಾಗಿ ಬದಲಾಯಿಸಿ ಹೊಸ ವಾಹನಗಳನ್ನು ಇಲಾಖೆಗೆ ಸೇರ್ಪಡೆಗೊಳಿಸಲು ಪ್ರಸಕ್ತ ಸಾಲಿನಲ್ಲಿ ರೂ.50 ಕೋಟಿ ಅನುದಾನ ಒದಗಿಸಲಾಗುವುದು.

   ಈವರೆಗೆ ಮಾನವ ಮತ್ತು ವನ್ಯ ಜೀವಿ ಸಂಘರ್ಷಕ್ಕೆ ಒಳಗಾಗಿ ಪ್ರಾಣ ತೆತ್ತವರಿಗೆ ಸರ್ಕಾರದಿಂದ 7.5 ಕೋಟಿ ರೂ.ಪರಿಹಾರ ನೀಡಲಾಗುತ್ತಿತ್ತು. ಈ ಬಾರಿ ಬಜೆಟ್‌ನಲ್ಲಿ ಈ ಪರಿಹಾರದ ಮೊತ್ತವನ್ನು 7.5 ಲಕ್ಷ ರೂ,ನಿಂದ 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

   ಪ್ರಾಣಿಗಳ ಮೇಲಿನ ಹಿಂಸೆ ತಡೆಯಲು ಹಾಗೂ ಪ್ರಾಣಿಗಳ ಕಲ್ಯಾಣಕ್ಕಾಗಿ ಪ್ರಾಣಿ ಕಲ್ಯಾಣ ಮಂಡಳಿಗೆ 5 ಕೋಟಿ ರೂ. ಅನುದಾನ ನೀಡಲಾಗುವುದು. ಪ್ರಾಣಿ ಕಲ್ಯಾಣ ಮಂಡಳಿಯ ವತಿಯಿಂದ ಬೆಂಗಳೂರಿನಲ್ಲಿ ನಿರ್ಲಕ್ಷಿತ ಪ್ರಾಣಿಗಳ ಸೂಕ್ತ ಚಿಕಿತ್ಸೆ ನೀಡಲು ಚಿಕಿತ್ಸಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಅಲ್ಲದೇ ರಾಷ್ಟ್ರೀಯ ಪ್ರಾಣಿ ತಳಿ ಸಂಪನ್ಮೂಲ ಬ್ಯೂರೋದಿಂದ ಭಾರತೀಯ ದೇಶಿ ಶ್ವಾನ ತಳಿ ಎಂದು ಮಾನ್ಯತೆ ಪಡೆದ ಮುಧೋಳ ಹೌಂಡ್ ಶ್ವಾನ ತಳಿ ಅಭಿವೃದ್ಧಿಗಾಗಿ 5 ಕೋಟಿ ರೂ.ಅನುದಾನ ನೀಡಲಾಗುವುದು ಎಂದು ಹೇಳಿದರು.

Post a Comment

Previous Post Next Post