ಸ್ವಂತ ಅಳಿಯನನ್ನೇ ಹುಚ್ಚನಂತೆ ಬಿಂಬಿಸಲು ಪ್ರಯತ್ನಿಸಿದ ಮತ್ತು ಬಲವಂತವಾಗಿ ಮೆಂಟಲ್ ಆಸ್ಪತ್ರೆಗೆ ಸೇರಿಸಿದ ಹಾಗೂ ಅಪಹರಣ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಎಫ್ಐಆರ್ (ಸಾಂಕೇತಿಕ ಚಿತ್ರ)
ಬೆಂಗಳೂರು: ಸ್ವಂತ ಅಳಿಯನನ್ನೇ ಹುಚ್ಚನಂತೆ ಬಿಂಬಿಸಲು ಪ್ರಯತ್ನಿಸಿದ ಮತ್ತು ಬಲವಂತವಾಗಿ ಮೆಂಟಲ್ ಆಸ್ಪತ್ರೆಗೆ ಸೇರಿಸಿದ ಹಾಗೂ ಅಪಹರಣ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಮತ್ತು ಇತರ ಐವರು ಕುಟುಂಬದ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಬೆಳ್ಳಾರೆ ನಿವಾಸಿಯಾದ ದಿವ್ಯಪ್ರಭಾ ಅವರ ಅಳಿಯ ನವೀನ್ ಎಂ ಗೌಡ ಅವರು ದೂರು ದಾಖಲಿಸಿದ್ದಾರೆ. ನವೀನ್ ಪತ್ನಿ ಸ್ಪಂದನಾ, ಆಕೆಯ ಕುಟುಂಬಸ್ಥರಾದ ಪರಶುರಾಮ್, ಸ್ಪರ್ಶಿತಾ, ಮಹದೇವಗೌಡ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ.
ಪೊಲೀಸರ ಪ್ರಕಾರ, ನವೀನ್ 2019 ರಲ್ಲಿ ಸ್ಪಂದನಾ ಅವರನ್ನು ವಿವಾಹವಾದರು. 2022 ರ ವೇಳೆಗೆ, ದಂಪತಿ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು ಮತ್ತು ಇದನ್ನು ಬಗೆಹರಿಸುವಲ್ಲಿ ಎರಡೂ ಕುಟುಂಬಗಳು ಸೋತಿದ್ದವು.
ಈ ಮಧ್ಯೆ ಸ್ಪಂದನಾ ಅವರಿಗೆ ಬೇರೆಯವರ ಜತೆ ಅಕ್ರಮ ಸಂಬಂಧವಿದ್ದು, ಅವರ ಮೊಬೈಲ್‌ನಲ್ಲಿ ನಡೆಸಿದ್ದ ಅಸಭ್ಯ ಚಾಟ್‌ಗಳನ್ನು ಕಂಡ ಬಳಿಕ ಆಕೆಯಿಂದ ದೂರವಾಗಿದ್ದೆ ಎಂದು ನವೀನ್ ಆರೋಪಿಸಿದ್ದಾರೆ.
ಆರೋಪಿಗಳು 2022ರ ಡಿಸೆಂಬರ್ 19 ರಂದು ನವೀನ್ ಅವರ ಮನೆಗೆ ನುಗ್ಗಿ, ಅವರ ಕೈ ಮತ್ತು ಕಾಲುಗಳನ್ನು ಕಟ್ಟಿ ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿದ್ದರು. ಬಳಿಕ ಜೆಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ವೈದ್ಯರೊಂದಿಗೆ ಶಾಮೀಲಾಗಿ ಬುದ್ಧಿಮಾಂಧ್ಯ ಎಂದು ಬಿಂಬಿಸಿದ್ದರು ಎಂದು ನವೀನ್ ಆರೋಪಿಸಿದ್ದಾರೆ.
ಅಲ್ಲದೆ, ಅವರನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡು ಮಾನಸಿಕ ಅಸ್ವಸ್ಥತೆಗೆ ಬಲವಂತವಾಗಿ ಚಿಕಿತ್ಸೆ ನೀಡಿದರು. ನವೀನ್ ಈ ಪ್ರಯತ್ನಗಳನ್ನು ವಿರೋಧಿಸಿದಾಗ, ಆರೋಪಿಯು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಮತ್ತು ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ತೋರಿಸಿದ್ದಾರೆ. ಈ ವೇಳೆ ಆರೋಪಿಗಳು ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ನಿರಾಕರಿಸಿದ ನಂತರ, ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಮತ್ತು ನಕಲಿ ಸಹಿಯನ್ನು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದ್ದು, ನವೀನ್ 2022ರ ಡಿಸೆಂಬರ್ 22ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನವೀನ್ ಒತ್ತಾಯಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
Post a Comment