ಕುವೆಂಪು ನಾಡಿನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡವೇ ಮಾಯ, ಎಲ್ಲಾ ಹಿಂದಿಮಯ!

 ಕನ್ನಡಿಗರ ಹೆಗ್ಗುರುತು ರಾಷ್ಟ್ರಕವಿ ಕುವೆಂಪು ಅವರ ಹೆಸರಿಡುವ, ಇನ್ನೂ ಉದ್ಘಾಟನೆಗೊಳ್ಳದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡವೇ ಮಾಯವಾಗಿದ್ದು, ಎಲ್ಲಾ ಫಲಕಗಳು ಹಿಂದಿ ಹಾಗೂ ಇಂಗ್ಲಿಷ್ ಮಯವಾಗಿವೆ.

                                                   ಶಿವಮೊಗ್ಗ ವಿಮಾನ ನಿಲ್ದಾಣ

By : Rekha.M
Online Desk


ಶಿವಮೊಗ್ಗ: ಕನ್ನಡಿಗರ ಹೆಗ್ಗುರುತು ರಾಷ್ಟ್ರಕವಿ ಕುವೆಂಪು ಅವರ ಹೆಸರಿಡುವ, ಇನ್ನೂ ಉದ್ಘಾಟನೆಗೊಳ್ಳದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡವೇ ಮಾಯವಾಗಿದ್ದು, ಎಲ್ಲಾ ಫಲಕಗಳು ಹಿಂದಿ ಹಾಗೂ ಇಂಗ್ಲಿಷ್ ಮಯವಾಗಿವೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರ ನಿರ್ವಿುಸುತ್ತಿದ್ದು, ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲಾಗುತ್ತಿದ್ದರೂ ಅಧಿಕಾರಿಗಳು ಕನ್ನಡದಲ್ಲಿ ಫಲಕಗಳನ್ನು ಹಾಕಿಲ್ಲ.

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 27 ರಂದು ಉದ್ಘಾಟಿಸಲಿದ್ದಾರೆ. ಉದ್ಘಾಟನೆಗೆ ಸಿದ್ಧಗೊಂಡಿರುವ ವಿಮಾನ ನಿಲ್ದಾಣದ ಆವರಣದಲ್ಲಿರುವ ಫಲಕಗಳು ಕನ್ನಡದಲ್ಲಿ ಇಲ್ಲದಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರದರ್ಶನ ಫಲಕಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಹಾಕಲಾಗಿದೆ. ಸರ್ಕಾರದ  ಹಿಂದಿ ಹೇರಿಕೆಯನ್ನು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಖಂಡಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಎಲ್ಲೆಲ್ಲೂ ಹಿಂದಿಯೇ. ಶುದ್ಧ ಕನ್ನಡಿಗರು ನೆಲೆಸಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬೋರ್ಡ್‌ಗಳು ಮಾತ್ರ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿವೆ. ಕನ್ನಡಿಗರ ಮೇಲೆ ಹಿಂದಿ ಹೇರುವುದನ್ನು ನಿಲ್ಲಿಸಿ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

‘ಸರ್ಕಾರ ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು’. ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರಿಡುವಾಗ ಕನ್ನಡದಲ್ಲಿ ಫಲಕಗಳು ಏಕೆ ಇಲ್ಲ ಎಂದು ಮತ್ತೊಬ್ಬ ಕನ್ನಡಪರ ಹೋರಾಟಗಾರರು ಪ್ರಶ್ನಿಸಿದ್ದಾರೆ.

ಸಂಸದ ಬಿ ವೈ ರಾಘವೇಂದ್ರ ಅವರು ಪೋಸ್ಟ್ ಮಾಡಿದ ವಿಮಾನ ನಿಲ್ದಾಣದ ವೀಡಿಯೋದಲ್ಲಿ ಕನ್ನಡ ಪ್ರದರ್ಶನ ಫಲಕಗಳು ಇಲ್ಲದಿರುವುದನ್ನು ಗಮನಿಸಿದ ಹಲವು ಟ್ವೀಟ್ ಬಳಕೆದಾರರು, ಕನ್ನಡದಲ್ಲಿಯೇ ಫಲಕಗಳನ್ನು ಹಾಕುವಂತೆ ಸಂಸದರನ್ನು ಒತ್ತಾಯಿಸಿದ್ದಾರೆ.

ಈ ಸಮಸ್ಯೆ ತಮ್ಮ ಗಮನಕ್ಕೆ ಬಂದಿದ್ದು, ಶೀಘ್ರದಲ್ಲಿ ಪರಿಹರಿಸುವುದಾಗಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಭರವಸೆ ನೀಡಿದ್ದಾರೆ. ಅಲ್ಲದೆ ಡಿಸ್‌ಪ್ಲೇ ಬೋರ್ಡ್‌ಗಳು ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಡಿಸಿ ತಿಳಿಸಿದ್ದಾರೆ.


Post a Comment

Previous Post Next Post