ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ರಾಜ್ಯ ಬಜೆಟ್ ನಲ್ಲಿ ಸಾರಿಗೆ ನೌಕರರ ಬೇಡಿಕೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಸ್ತೆ ಸಾರಿಗೆ ನೌಕರರ ಲೀಗ್ ಮಾರ್ಚ್ 1 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದೆ.
ಸಾರಿಗೆ ನೌಕರರ ಪ್ರತಿಭಟನೆ
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ರಾಜ್ಯ ಬಜೆಟ್ ನಲ್ಲಿ ಸಾರಿಗೆ ನೌಕರರ ಬೇಡಿಕೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಸ್ತೆ ಸಾರಿಗೆ ನೌಕರರ ಲೀಗ್ ಮಾರ್ಚ್ 1 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದೆ.
ರಾಜ್ಯ ಬಜೆಟ್‌ನಿಂದ ನಿರಾಶೆಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ನೌಕರರ ಲೀಗ್ ಮಾರ್ಚ್ 1 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಫೆಬ್ರವರಿ 17 ರಂದು ಮಂಡಿಸಿದ ಬಜೆಟ್‌ನಲ್ಲಿ ವೇತನ ಹೆಚ್ಚಳದ ಪ್ರಸ್ತಾವನೆಗಾಗಿ ನೌಕರರು ಕಾತರದಿಂದ ಕಾಯುತ್ತಿದ್ದರು. ಆದರೆ ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ 3,000ಕ್ಕೂ ಹೆಚ್ಚು ನೌಕರರು ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸುವ ನಿರೀಕ್ಷೆಯಿದೆ. ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಂಘದ ನೇತೃತ್ವದ ನೌಕರರು, ವಿಧಾನಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಸರಕಾರ ಶೀಘ್ರವೇ ವೇತನ ಹೆಚ್ಚಳವನ್ನು ಘೋಷಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ನೌಕರರು ಹೇಳಿದ್ದಾರೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಯ ನಾಲ್ಕು ಸಾರಿಗೆ ನಿಗಮಗಳ ಸಂಕಷ್ಟಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು ನಾವು ಎಲ್ಲವನ್ನು ಮಾಡಿದ್ದೇವೆ. ನಾವು ಸೈಕಲ್ ರ್ಯಾಲಿ ಮಾಡಿದ್ದೇವೆ ಮತ್ತು ನಮ್ಮ ಕಾರ್ಯಕರ್ತರು ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವಾಗ ಸಾರಿಗೆ ನೌಕರರನ್ನು 7ನೇ ವೇತನ ಆಯೋಗದ ಅಡಿಯಲ್ಲಿ ಪರಿಗಣಿಸಲಾಗುವುದು ಎಂಬ ಪೊಳ್ಳು ಭರವಸೆಗಳು ನಮಗೆ ಸಿಕ್ಕಿವೆ ಎಂದು ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೇಳಿದರು.
''ಬಜೆಟ್ ನಮ್ಮ ಭರವಸೆಯನ್ನು ಈಡೇರಿಸಿಲ್ಲ, ಇದು ನೌಕರರನ್ನು ಕೆರಳಿಸಿದೆ. ವೇತನ ಪರಿಷ್ಕರಣೆ, ವಜಾಗೊಂಡವರ ಮರುಸೇರ್ಪಡೆ ಸೇರಿದಂತೆ ರಾಜ್ಯವು ನೀಡಿದ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸುಮಾರು 3,000 ಸಾರಿಗೆ ನೌಕರರು ತಮ್ಮ ಕುಟುಂಬದೊಂದಿಗೆ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದೇವೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಅಂತೆಯೇ ತಮ್ಮ ಪ್ರತಿಭಟನೆಯಿಂದ ನಿಯಮಿತ ಬಸ್ ಸೇವೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು. "ಹೆಚ್ಚು ಹೆಚ್ಚು ಉದ್ಯೋಗಿಗಳು ನಮ್ಮೊಂದಿಗೆ ಸೇರಿಕೊಂಡರೆ, ಪ್ರತಿಭಟನೆಯು ಬೇರೆ ಹಂತವನ್ನು ತಲುಪುತ್ತದೆ ನಂತರ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ" ಎಂದು ಅವರು ಹೇಳಿದರು.
Post a Comment