ದೇಶಾದ್ಯಂತ ಸಮಾನತೆ ಮತ್ತು ರಕ್ತದಾನದ ಜಾಗೃತಿ ಮೂಡಿಸಲು ಶಿವಮೊಗ್ಗದ ರಿಪ್ಪನಪೇಟೆಯ ಯುವಕನೊಬ್ಬನ ವಿಭಿನ್ನ ರೀತಿಯ ಏಕಾಂಗಿ ಯಾತ್ರೆ.

     ದೇಶಾದ್ಯಂತ ಸಮಾನತೆ ಮತ್ತು ರಕ್ತದಾನದ ಜಾಗೃತಿ ಮೂಡಿಸಲು ರಿಪ್ಪನ್ ಪೇಟೆಯ ಯುವಕನೊಬ್ಬ ಏಕಾಂಗಿ ಯಾತ್ರೆ ಕೈಗೊಂಡಿದ್ದಾರೆ. 13 ಸಾವಿರ ಕಿ.ಮೀ ಬೈಕ್ ರೈಡ್ (Bike Ride) ಮಾಡರಲಿರುವ ಇವರು, ಎಲ್ಲಾ ರಾಜ್ಯಗಳಿಗು ತೆರಳಿ ಅಲ್ಲಿಯ ಮಣ್ಣು ಸಂಗ್ರಹ ಮಾಡಲಿದ್ದಾರೆ.

ರಿಪ್ಪನ್ ಪೇಟೆಯ ವಿಜೋ ವರ್ಗೀಸ್ ಶಿವಮೊಗ್ಗದಿಂದ ತಮ್ಮ ಯಾತ್ರೆ ಆರಂಭಿಸಿದ್ದಾರೆ. ಬುಲೆಟ್ ನಲ್ಲಿ ಭಾರತದಾದ್ಯಂತ 13 ಸಾವಿರ ಕಿ.ಮೀ ಸಂಚರಿಸಲಿದ್ದಾರೆ.

ಎಲ್ಲೆಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ?

   ವಿಜೋ ವರ್ಗಿಸ್ ಅವರು ಭಾರತದ ಎಲ್ಲಾ ರಾಜ್ಯಗಳಿಗೆ ತೆರಳಲಿದ್ದಾರೆ. ನೇಪಾಳ, ಭೂತಾನ್ ದೇಶಗಳಿಗೂ ವಿಜೋ ವರ್ಗಿಸ್ ಬೈಕ್ ಚಲಾಯಿಸಲಿದ್ದಾರೆ. ಒಬ್ಬಂಟಿಯಾಗಿ ಈ ಯಾತ್ರೆ ಕೈಗೊಂಡಿದ್ದಾರೆ.ತಮ್ಮ ಬೈಕಿನಲ್ಲಿ ನಿತ್ಯ 350 ರಿಂದ 400 ಕಿ.ಮೀ ವರೆಗೆ ಸಂಚರಿಸುವ ಗುರಿ ಹೊಂದಿದ್ದಾರೆ. ‘ಪ್ರತಿ ದಿನ ನಿರ್ದಿಷ್ಟ ದೂರ ಕ್ರಮಿಸಬೇಕು ಎಂಬ ಪಟ್ಟಿ ಸಿದ್ಧಪಡಿಸಿಕೊಂಡಿದ್ದೇನೆ. ಮೊದಲ ದಿನ 400 ಕಿ.ಮೀ. ಎರಡನೇ ದಿನ 300 ಕಿ.ಮೀ ಸಂಚರಿಸಲಿದ್ದೇನೆ’ ಎಂದು ವಿಜೋ ವರ್ಗಿಸ್ ಮಾಧ್ಯಮಗಳಿಗೆ ತಿಳಿಸಿದರು.

ಬೈಕಿಗೆ ಹೈಟೆಕ್ ಟಚ್

    ದೇಶ ಪರ್ಯಟನೆಗೆ ಅನುಕೂಲವಾಗಲಿ ಎಂದು ವಿಜೋ ವರ್ಗಿಸ್ ತಮ್ಮ ಬೈಕಿಗೆ ಹೈಟೆಕ್ ಟಚ್ ನೀಡಿದ್ದಾರೆ. ಲಗೇಜ್ ಹೊತ್ತೊಯ್ಯಲು ಸುಲಭವಾಗಲು ಮೂರು ಪ್ಯಾನಿಯರ್ ಬಾಕ್ಸ್ ಗಳನ್ನು ಅಳವಡಿಸಲಾಗಿದೆ. ಬೈಕಿನ ಹಿಂಬದಿಯ ಎಡ, ಬಲ ಮತ್ತು ಮೇಲ್ಭಾಗದಲ್ಲಿ ಮೂರು ಬಾಕ್ಸ್ ಗಳಿವೆ.ಕುಡಿಯುವ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಎರಡು ಪ್ರತ್ಯೇಕ ಕ್ಯಾನ್. ಪೆಟ್ರೊಲ್ ಸಂಗ್ರಹಿಸಿಟ್ಟುಕೊಳ್ಳಲು ಮುಂಬದಿಯಲ್ಲಿ ಎರಡು ಪ್ರತ್ಯೇಕ ಕ್ಯಾನ್ ಗಳನ್ನು ಅಳವಡಿಸಲಾಗಿದೆ.ಶಿವಮೊಗ್ಗದ ಬೈಕ್ ಮೆಕಾನಿಕ್ ಮುರುಗನ್ ಅವರು ರಾಯಲ್ ಎನ್ ಫೀಲ್ಡ್ ಬೈಕನ್ನು 13 ಸಾವಿರ ಕಿ.ಮೀ ಯಾತ್ರೆಗೆ ಸಜ್ಜುಗೊಳಿಸಿದ್ದಾರೆ. ಅತ್ಯಂತ ಮುತುವರ್ಜಿ ವಹಿಸಿ ಸರ್ವಿಸ್ ಮಾಡಿದ್ದಾರೆ. ಇಂಜಿನ್ ಕೂಲರ್, ಹೊಸ ಟೈರ್ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ.

3 ಲಕ್ಷ ರೂ. ಖರ್ಚು

  13 ಸಾವಿರ ಕಿ.ಮೀ ಪರ್ಯಟನೆಗೆ ವಿಜೋ ವರ್ಗಿಸ್ ಯಾರ ನೆರವು ಪಡೆಯುತ್ತಿಲ್ಲ. ತಮ್ಮದೆ ಸ್ವಂತ ಖರ್ಚಿನಲ್ಲಿ ಬೈಕ್ ರೈಡ್ (Bike Ride) ಆರಂಭಿಸಿದ್ದಾರೆ. ಇದಕ್ಕಾಗಿ 3 ಲಕ್ಷ ರೂ. ವ್ಯಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಣ್ಣು ಸಂಗ್ರಹದ ಗುರಿ

   ವಿಜೋ ವರ್ಗಿಸ್ ಎರಡು ಪ್ರಮುಖ ಘೋಷಣೆ ಮತ್ತು ಒಂದು ಗುರಿ ಇಟ್ಟುಕೊಂಡು ಬೈಕ್ ರೈಡ್ (Bike Ride) ಆರಂಭಿಸಿದ್ದಾರೆ. ಸಮಾನತೆ ಮತ್ತು ರಕ್ತದಾನದ ಮಹತ್ವ ಸಾರುವ ಘೋಷಣೆಗಳನ್ನು ಬೈಕ್ ಮೇಲೆ ಸ್ಟಿಕರ್ ಮಾಡಿಸಿದ್ದಾರೆ. ಹೋದಲ್ಲೆಲ್ಲ ಸಮಾನತೆ ಮತ್ತು ರಕ್ತದಾನದ ಮಹತ್ವದ ಸಾರುವ ಇರಾದೆ ಹೊಂದಿದ್ದಾರೆ.

   ಇನ್ನು, ಪ್ರತಿ ರಾಜ್ಯದಲ್ಲಿಯು ಮಣ್ಣು ಸಂಗ್ರಹ ಮಾಡಲು ವಿಜೋ ವರ್ಗಿಸ್ ನಿರ್ಧರಿಸಿದ್ದಾರೆ. ಪ್ರತಿ ರಾಜ್ಯದಲ್ಲಿ ಇವರು ಸಾಗುವ ಹಾದಿಯಲ್ಲಿ ಸಿಗುವ ಪ್ರಮುಖ ಸ್ಥಳಗಳಲ್ಲಿ ಚಿಟಿಕೆ ಮಣ್ಣು ಸಂಗ್ರಹಿಸಿಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಸಂಗ್ರಹ ವ್ಯವಸ್ಥೆ ಮಾಡಿದ್ದಾರೆ. ಪ್ರತಿಯೊಂದು ರಾಜ್ಯದ ಮಣ್ಣು ಸಂಗ್ರಹಕ್ಕೆ ಪ್ರತ್ಯೇಕ ಬಾಟಲಿ ನಿಗದಿ ಮಾಡಿಕೊಂಡಿದ್ದಾರೆ. ಅದರ ಮೇಲೆ ಆಯಾ ರಾಜ್ಯದ ಹೆಸರನ್ನು ಮುದ್ರಿಸಿದ್ದಾರೆ. ಯಾತ್ರೆಯ ಬಳಿಕ ಈ ಮಣ್ಣನ್ನು ಗಣ್ಯ ವ್ಯಕ್ತಿಯೊಬ್ಬರಿಗೆ ಹಸ್ತಾಂತರಿಸುವ ಗುರಿ ಹೊಂದಿದ್ದಾರೆ.

ಯಾರು ಈ ವಿಜೋ ವರ್ಗಿಸ್

   ವಿಜೋ ವರ್ಗಿಸ್ ಅವರ ಮೂಲತಃ ಕೇರಳ ರಾಜ್ಯದವರು. ಅವರ ಕುಟುಂಬದವರು ಸುಮಾರು 30 ವರ್ಷದಿಂದ ರಿಪ್ಪನ್ ಪೇಟೆಯಲ್ಲಿ ನೆಲೆಸಿದೆ. ತಂದೆ ಪಿ.ಜೆ.ವರ್ಗಿಸ್, ತಾಯಿ ಜೋಳಿ ವರ್ಗಿಸ್ ಅವರ ಮೊದಲ ಮಗ ವಿಜೋ ವರ್ಗಿಸ್. ಬೈಕ್ ರೈಡಿಂಗ್ ಬಗ್ಗೆ ಇವರಿಗೆ ಹಚ್ಚು ಆಸಕ್ತಿ. 2013ರಲ್ಲಿ ದಕ್ಷಿಣ ಭಾರತ ರೈಡ್ ಮಾಡಿದ್ದರು. ಆಗ 7100 ಕಿ.ಮೀ ಸಂಚಿರಿಸಿದ್ದ ವಿಜೋ ವರ್ಗಿಸ್, ಅದರ ಪ್ರೇರಣೆಯಿಂದ ಈಗ 13 ಸಾವಿರ ಕಿ.ಮೀ ಪಯಣ ಆರಂಭಿಸಿದ್ದಾರೆ.

Post a Comment

Previous Post Next Post