ಬೆಂಗಳೂರು ರೈಲ್ವೆ ವಿಭಾಗದ ನೇಮಕಾತಿ ಹಗರಣ ಬಯಲು: ಆಕಾಂಕ್ಷಿ ಟಿಟಿಇಗಳಿಂದ ಏಜೆನ್ಸಿಗೆ ತಲಾ 6 ಲಕ್ಷ ರೂ. ಲಂಚ!

 ಬೆಂಗಳೂರು ರೈಲ್ವೆ ವಿಭಾಗದ ಟಿಕೆಟ್ ತಪಾಸಣಾ ದಳವು ಇಂದು ಚಾಮರಾಜನಗರ-ಬೆಂಗಳೂರು ಪ್ಯಾಸೆಂಜರ್‌ ರೈಲಿನಲ್ಲಿ ಟಿಕೆಟ್​ ಪರಿವೀಕ್ಷಕರೆಂದು ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ನಕಲಿ ಟಿಟಿಇಗಳನ್ನು ಪತ್ತೆಹಚ್ಚಿದ್ದಾರೆ. 

                                                        ಕೆಂಗೇರಿ ರೈಲು ನಿಲ್ದಾಣ

By : Rekha.M
Online Desk

ಬೆಂಗಳೂರು: ಬೆಂಗಳೂರು ರೈಲ್ವೆ ವಿಭಾಗದ ಟಿಕೆಟ್ ತಪಾಸಣಾ ದಳವು ಇಂದು ಚಾಮರಾಜನಗರ-ಬೆಂಗಳೂರು ಪ್ಯಾಸೆಂಜರ್‌ ರೈಲಿನಲ್ಲಿ ಟಿಕೆಟ್​ ಪರಿವೀಕ್ಷಕರೆಂದು ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ನಕಲಿ ಟಿಟಿಇಗಳನ್ನು ಪತ್ತೆಹಚ್ಚಿದ್ದಾರೆ. 

ರೈಲಿನ ಟಿಕೆಟ್​ ಪರಿವೀಕ್ಷಕ ಎಂಬಂತೆ ಸೋಗು ಹಾಕಿದ್ದಕ್ಕಾಗಿ ನಾಲ್ವರನ್ನೂ ಬಂಧಿಸಲಾಗಿದ್ದರೂ, ಅವರು ನೈಋತ್ಯ ರೈಲ್ವೆ ವಲಯದಾದ್ಯಂತ ನಡೆದ ನೇಮಕಾತಿ ಹಗರಣಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನ 12.30ರ ಸುಮಾರಿಗೆ ರೈಲು ಕೆಂಗೇರಿ ಬಳಿ ಬಂದಾಗ ಈ ಘಟನೆ ನಡೆದಿದೆ. ಉನ್ನತ ಸರ್ಕಾರಿ ರೈಲ್ವೇ ಪೊಲೀಸ್ ಅಧಿಕಾರಿ ಪ್ರಕಾರ, ರೈಲಿನ ಟಿಕೆಟ್​ ಪರಿವೀಕ್ಷಕ(TTE ಗಳು) ಎಂದು ಸೋಗು ಹಾಕಿದ್ದಕ್ಕಾಗಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ನಮ್ಮ ಪ್ರಾಥಮಿಕ ವಿಚಾರಣೆಯಲ್ಲಿ ಪ್ರತಿಯೊಬ್ಬರು ತಮ್ಮ ಹುದ್ದೆಗೆ 6 ಲಕ್ಷ ರೂಪಾಯಿಗಳನ್ನು ರೈಲ್ವೆ ನಕಲಿ ನೇಮಕಾತಿ ಏಜೆನ್ಸಿಗೆ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ ಎಂದರು.

ನಾಲ್ವರ ವಿರುದ್ಧ ಐಪಿಸಿಯ ಸೆಕ್ಷನ್ 419, 468 ಮತ್ತು 471ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾಲ್ವರನ್ನು ನೇಮಕ ಮಾಡಿದ ಸಂಸ್ಥೆ ಅವರಿಗೆ ಪ್ರೊಬೇಷನರಿ ಟಿಕೆಟ್ ಕಲೆಕ್ಟರ್‌ಗಳ ಹುದ್ದೆಯನ್ನು ನೀಡಿದೆ. ಅಲ್ಲದೆ ರೈಲಿನಲ್ಲಿ ಕೇವಲ ವೀಕ್ಷಕರ ಕೆಲಸವನ್ನು ನಿಭಾಹಿಸುವಂತೆ ಹೇಳಿತ್ತು. ಅವರೆಲ್ಲಾ ಒಂದು ವಾರದ ಹಿಂದಷ್ಟೆ ಕರ್ತವ್ಯವನ್ನು ಪ್ರಾರಂಭಿಸಿದರು. ಅವರಿಗೆ ಕೊಟ್ಟಿರುವ ನೇಮಕಾತಿ ಆದೇಶಗಳು ನಕಲಿಯಾಗಿದೆ. ವಿವರವಾದ ತನಿಖೆಯಿಂದ ನೇಮಕಾತಿ ಹಗರಣದ ವ್ಯಾಪ್ತಿಯನ್ನು ಬಹಿರಂಗವಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅರುಣ್ ಡಿ'ಸೋಜಾ ನೇತೃತ್ವದ ರೈಲ್ವೆ ವಿಭಾಗದ ಟಿಕೆಟ್ ತಪಾಸಣಾ ದಳಕ್ಕೆ ಅವರ ನಡವಳಿಕೆಯು ಅನುಮಾನಾಸ್ಪದವಾಗಿ ಎಂಬುದು ಕಂಡುಬಂದಿತ್ತು. ಹೀಗಾಗಿ ಅವರ ಗುರುತಿನ ಚೀಟಿಗಳನ್ನು ನೀಡುವಂತೆ ಕೇಳಿದರು. ಮಹಾಂತೇಶ್ ಶಿಂಧೆ (27) ಶ್ರೀವಾರಿ ಡಿ ತೆಲ್ಕಾ (20) ಹುಮೆದ್ ಅಥರ್ ನದಾಫ್ (27) ಮತ್ತು ಮೊಹಮ್ಮದ್ ಸಲೀಮ್ ಮುಲ್ಲಾ ಎಂ (31) ಎಂಬುವರು ಪ್ರೊಬೇಷನರಿ ಟಿಕೆಟ್ ಕಲೆಕ್ಟರ್‌ಗಳೆಂದು ಮುದ್ರಿಸಲಾಗಿದ್ದ ಐಡಿ ಕಾರ್ಡ್‌ಗಳನ್ನು ಹೊಂದಿದ್ದರು ಎಂದರು.

ರೈಲಿನಲ್ಲಿ ಟಿಕೆಟ್ ಗಳನ್ನು ವೀಕ್ಷಿಸುವುದಕ್ಕೆ ಪ್ರೊಬೇಷನರಿ ಟಿಕೆಟ್ ಪರಿವೀಕ್ಷಕರನ್ನು ರೈಲ್ವೇ ಎಂದಿಗೂ ಕಳುಹಿಸುವುದಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಗುರುತಿನ ಚೀಟಿಯಲ್ಲಿ ತಂದೆಯನ್ನು ಅವಲಂಬಿತ ವರ್ಗದಡಿ ಪಟ್ಟಿ ಮಾಡಲಾಗಿದ್ದು, ಅದು ನಕಲಿ ಕಾರ್ಡ್ ಎಂದು ದೃಢಪಟ್ಟಿದೆ. ರೈಲ್ವೇ ನೌಕರರಿಗೆ ತಮ್ಮ ಪತ್ನಿ ಮತ್ತು ಮಕ್ಕಳನ್ನು ಅವಲಂಬಿತರು ಎಂದು ಪಟ್ಟಿ ಮಾಡಲು ಮಾತ್ರ ಅನುಮತಿಸುತ್ತಾರೆ ಹೊರತು ಅವರ ಪೋಷಕರನ್ನಲ್ಲ ಎಂದು ಮೂಲಗಳು ತಿಳಿಸಿವೆ. ತಂದೆ ತೀರಿಹೋಗಿದ್ದರೆ ಮತ್ತು ಅವರಿಗೆ ಬೇರೆ ಆದಾಯವಿಲ್ಲದಿದ್ದರೆ ತಾಯಿಯ ಹೆಸರನ್ನು ನೀಡಲು ಅವಕಾಶವಿದೆ.

ತನಿಖೆಗಾಗಿ ಅವರನ್ನು ತಕ್ಷಣವೇ ರೈಲ್ವೆ ರಕ್ಷಣಾ ಪಡೆಗೆ ಹಸ್ತಾಂತರಿಸಲಾಗಿದೆ. ಟಿಟಿಇಗಳು ತಾವು ಬೆಳಗಾವಿ ಮೂಲದವರು ಎಂದು ಹೇಳಿಕೊಂಡಿದ್ದಾರೆ. ವಿಭಾಗೀಯ ರೈಲ್ವೇ ಮ್ಯಾನೇಜರ್ ಶ್ಯಾಮ್ ಸಿಂಗ್, ಟಿಕೆಟ್ ಚೆಕ್ ಸ್ಕ್ವಾಡ್ ನ ಜಾಗರೂಕತೆಯನ್ನು ಶ್ಲಾಘಿಸಿದ್ದಾರೆ.


Post a Comment

Previous Post Next Post