ಬೆಂಗಳೂರು: ಇಎಂಐ ತಡವಾಗಿ ಪಾವತಿ ಮಾಡಿದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ 'ರಿಕವರಿ ಏಜೆಂಟ್‌'ಗಳು

 ಆರ್ಥಿಕ ಸಮಸ್ಯೆಯಿಂದಾಗಿ ಮಾರ್ಚ್ ತಿಂಗಳ ಇಎಂಐ ಪಾವತಿ ವಿಳಂಬ ಮಾಡಿದ ವ್ಯಕ್ತಿಯೊಬ್ಬರ ಮೇಲೆ ರಿಕವರಿ ಏಜೆಂಟ್'ಗಳು ಹಲ್ಲೆ ನಡೆಸಿರುವ ಘಟನೆಯೊಂದು ಚೆಂಬನಹಳ್ಳಿ ಗೇಟ್ ಬಳಿ ನಡೆದಿದೆ.

                                                            ಸಂಗ್ರಹ ಚಿತ್ರ

By : Rekha.M
Online Desk

ಬೆಂಗಳೂರು: ಆರ್ಥಿಕ ಸಮಸ್ಯೆಯಿಂದಾಗಿ ಮಾರ್ಚ್ ತಿಂಗಳ ಇಎಂಐ ಪಾವತಿ ವಿಳಂಬ ಮಾಡಿದ ವ್ಯಕ್ತಿಯೊಬ್ಬರ ಮೇಲೆ ರಿಕವರಿ ಏಜೆಂಟ್'ಗಳು ಹಲ್ಲೆ ನಡೆಸಿರುವ ಘಟನೆಯೊಂದು ಚೆಂಬನಹಳ್ಳಿ ಗೇಟ್ ಬಳಿ ನಡೆದಿದೆ.

ಸರ್ಜಾಪುರದ ಮುಗಳೂರು ನಿವಾಸಿ ಆರ್ ಮನೋಜ್ ಕುಮಾರ್ (19) ಎಂಬುವವರ ಮೇಲೆ ನಾಲ್ವರು ಸಾಲ ವಸೂಲಾತಿ ಏಜೆಂಟರು ಹಲ್ಲೆ ನಡೆಸಿದ್ದಾರೆ.

ಆರೋಪಿಗಳು ಮನೋಜ್ ಅವರನ್ನು ಹಿಂಬಾಲಿಸಿದ್ದು, ಖಾಸಗಿ ಹಣಕಾಸು ಸಂಸ್ಥೆಯಿಂದ ಇಎಂಐ ಆಧಾರದ ಮೇಲೆ ಪಡೆದುಕೊಂಡಿದ್ದ ಬೈಕ್'ನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಆರೋಪಿಗಳು ಮನೋಜ್ ಅವರ ಮೇಲೆ ಹಲ್ಲೆ ನಡೆಸಿದ್ದು. ತಮ್ಮ ಮ್ಯಾನೇಜರ್ ಧನಂಜಯ್ ಅವರ ಬಳಿ ಮಾತನಾಡುವಂತೆ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕುಮಾರ್ ಅವರು ಮಾರ್ಚ್ ತಿಂಗಳಿನಲ್ಲಿ ಇಎಂಐ ಪಾವತಿ ಮಾಡಬೇಕಿತ್ತು.  4,185 ರೂಪಾಯಿಗಳ EMI ಅನ್ನು ಪಾವತಿಸಬೇಕಾಗಿತ್ತು. ಆದರೆ, ಆರ್ಥಿಕ ಸಂಕಷ್ಟದಿಂದಾಗಿ ಆ ತಿಂಗಳು ಪಾವತಿ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಯುಪಿಐ ವಹಿವಾಟಿನ ಮೂಲಕ ಇಎಂಐ ಕ್ಲಿಯರ್ ಮಾಡಿ, ಮ್ಯಾನೇಜರ್'ನ್ನು ಸಂಪರ್ಕಿಸಲಾಗಿತ್ತು. ಆದರೆ, ಈ ವೇಳೆ ಮ್ಯಾನೇಜರ್ ಬೆದರಿಕೆ ಹಾಕಿದರು ಎಂದು ಮನೋಜ್ ಕುಮಾರ್ ಅವರು ದೂರಿನಲ್ಲಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಸರ್ಜಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Post a Comment

Previous Post Next Post