ಬೌದ್ಧ ಮಂದಿರ ಕೆಡವಿ ತಿರುಪತಿ ದೇಗುಲ ನಿರ್ಮಾಣ: ಚೇತನ್ ಅಂಹಿಸಾ ಹೊಸ ವಿವಾದ

 ಬೌದ್ಧ ಮಂದಿರವನ್ನು ಕೆಡವಿ ತಿರುಪತಿ ದೇಗುಲ ನಿರ್ಮಾಣ ಮಾಡಲಾಗಿದೆ ಎಂದು ನಟ ಚೇತನ್ ಅಹಿಂಸಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

                                                            ನಟ ಚೇತನ್ ಅಹಿಂಸಾ

By :Rekha.M
Online Desk

ಬೆಂಗಳೂರು: ಬೌದ್ಧ ಮಂದಿರವನ್ನು ಕೆಡವಿ ತಿರುಪತಿ ದೇಗುಲ ನಿರ್ಮಾಣ ಮಾಡಲಾಗಿದೆ ಎಂದು ನಟ ಚೇತನ್ ಅಹಿಂಸಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯೂಟ್ಯೂಬ್ ಸಂದರ್ಶನವೊಂದಲ್ಲಿ ತಿರುಪತಿ ತಿರುಮಲ ದೇವಸ್ಥಾನದ ಬಗ್ಗೆ ಮಾತನಾಡಿರುವ ನಟ ಚೇತನ್, 'ಬುದ್ಧನ ಮಂದಿರ ಒಡೆದು ತಿರುಪತಿ ದೇವಸ್ಥಾನ ಕಟ್ಟಿದ್ದಾರೆ ಎಂದು ಹೇಳಿದ್ದಾರೆ.

ಯೂಟ್ಯೂಬ್ ಸಂದರ್ಶನವೊಂದಲ್ಲಿ ತಿರುಪತಿ ತಿರುಮಲ ದೇವಸ್ಥಾನದ ಬಗ್ಗೆಯೂ ಇಂತದ್ದೇ ವಿವಾದಾತ್ಮಕ ಹೇಳಿಕೆ ನೀಡಿರುವ ಚೇತನ್, "ನಿಜ ಹೇಳಬೇಕು ಅಂದರೆ ಈ ದೇವಸ್ಥಾನಗಳೆಲ್ಲಾ ಹಿಂದೆ ಬುದ್ಧ ವಿಹಾರಗಳು ಆಗಿತ್ತು. ವೈದಿಕ ಕಾಲ ಎನ್ನುವುದು ಕ್ರಿಸ್ತ ಪೂರ್ವ 1500 ಕ್ರಿಸ್ತಪೂರ್ವದಿಂದ 500 ಕ್ರಿಸ್ತಪೂರ್ವ ನಡುವಿನದ್ದು. ಆ ನಂತರ ಬುದ್ಧ ಬರ್ತಾರೆ. ವೈದಿಕ ಕಾಲದಲ್ಲಿ ಹೋಮ, ಹವಯ, ಯಜ್ಞ ಎಲ್ಲವೂ ಇತ್ತು. ಆದರೆ ದೇವಸ್ಥಾನ, ಮಂದಿರಗಳು ಇರಲಿಲ್ಲ. ಬುದ್ಧ ಬಂದಮೇಲೆ ಅಶೋಕನ ನಂತರ ಬೌದ್ದ ಧರ್ಮ ಹರಡಿದ ನಂತರ ಬುದ್ಧ ಸ್ತೂಪಗಳು, ವಿಹಾರಗಳು ಬಂತು. ಆ ನಂತರ ಮತ್ತೆ ಬ್ರಾಹ್ಮಣ್ಯ, ವೈದಿಕ ಪರಂಪರೆ ಬಂದಾಗ 84 ಸಾವಿರ ಬುದ್ಧ ವಿಹಾರಗಳನ್ನು ಒಡೆದು ಹಾಕಿ ಹಿಂದೂ ಮಂದಿಗಳನ್ನಾಗಿ ಮಾಡಿದರು"

"ಅಲ್ಲಿಯವರೆಗೂ ದೇವಸ್ಥಾನಗಳು ಇರಲಿಲ್ಲ. ಯಾಕಂದರೆ ವೈದಿಕ ಪರಂಪರೆಯಲ್ಲಿ ಹೋಮ, ಹವ ಇರುತ್ತೆ. ಇದಕ್ಕೆಲ್ಲಾ ದಾಖಲೆಗಳು ಇವೆ. ಇದಕ್ಕೆ ಎಲ್ಲಿ ಬೇಕಾದರೂ ಸಾಕ್ಷಿ ತೋರಿಸುತ್ತೇನೆ. ತಿರುಪತಿ, ಕೇದಾರನಾಥ ದೇವಸ್ಥಾನಗಳನ್ನು ಇದೇ ರೀತಿ ಕಟ್ಟಿದ್ದಾರೆ. ತಿರುಪತಿ ದೇವಸ್ಥಾನ ಕೂಡ ಮೊದಲು ಬುದ್ಧ ಮಂದಿರ ಆಗಿತ್ತು. ನಮ್ಮ ಇತಿಹಾಸ ದಾಖಲೆಗಳಲ್ಲಿ 84 ಸಾವಿರ ಬುದ್ಧ ವಿಹಾರಗಳು ಇವೆ ಎಂದು ಇದೆ. ಅದನ್ನೆಲ್ಲಾ ರಾಜ ಅಶೋಕ ಹಾಗೂ ಆತನ ನಂತರದವರು ಕಟ್ಟಿರುವುದು. 185 ಕ್ರಿಸ್ತಪೂರ್ವ ಬಂದಮೇಲೆ ವೈದಿಕ ಪರಂಪರೆ ವಾಪಸ್ ಬಂದಮೇಲೆ ಈ ಬುದ್ಧ ವಿಹಾರಗಳನ್ನು ಒಡೆದು, ಬುದ್ಧ ಬಿಕ್ಕುಗಳನ್ನು ಸಾಯಿಸೋದು, ಬುದ್ಧ ವಿಹಾರಗಳನ್ನು ವೈದಿಕ ಮಂದಿರಗಳಾಗಿ ಮಾಡಿದ್ದರು" ಎಂದಿದ್ದಾರೆ.

"ಕರ್ನಾಟಕಕ್ಕೆ ಪರಿಯಾರ್, ಅಂಬೇಡ್ಕರ್ ಸಿದ್ದಾಂತ ಅಗತ್ಯ ಇದೆ. ಬಿಜೆಪಿಯ ಹಿಂದುತ್ವ ಕೂಡ ಅಲ್ಲ. ಕಾಂಗ್ರೆಸ್, ಜೆಡಿಎಸ್, ಆಪ್‌ನ ಪೊಲಿಟಿಕಲ್ ಹಿಂದೂಯಿಸಂ ಅಲ್ಲ, ಕಮ್ಯೂನಿಸಂ ಕೂಡ ಅಲ್ಲ. ಹೆಚ್‌ಟಿಪಿಐ ಮೊದಲೇ ಅಲ್ಲ. ನನ್ನ ಕಣ್ಣಲ್ಲಿ ನಮ್ಮ ದೇಶದ ಯಾವುದೇ ಪಕ್ಷ ಪರಿವರ್ತನೆಯ ಸಿದ್ಧಾಂತ ಹೇಳುತ್ತಿಲ್ಲ. ಸೈದ್ದಾಂತಿಕವಾಗಿ ನನಗೆ ಈ ವಿಚಾರಗಳ ಬಗ್ಗೆ ವಿರೋಧ ಇದೆ ಎಂದಿದ್ದಾರೆ.

"ಯಾವುದೇ ವ್ಯಕ್ತಿ ಮೇಲೆ ನನಗೆ ಕೋಪ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಸತ್ಯ ಹೇಳುವ ಹಕ್ಕು ನಿಮಗಿದೆ. ನಾನು ಕಂಡ ಸತ್ಯ ನಾನು ಹೇಳ್ತೀನಿ. ನಾನು ಅಂಕಿ ಅಂಶ, ದಾಖಲೆ ಇಟ್ಟುಕೊಂಡು ಮಾತನಾಡುತ್ತಿದ್ದೇನೆ. ಅದನ್ನು ಸೋಲಿಸಲು ಸಾಧ್ಯವಾದರೆ ನಿಮ್ಮ ದಾಖಲೆ ಇಡಿ. ರಾಮ ಎನ್ನುವ ವ್ಯಕ್ತಿ ಈ ಕಾಲದಲ್ಲಿ ಇದ್ದರು, ಇಲ್ಲಿ ಹುಟ್ಟಿದರು ಎಂದು ತೋರಿಸಿ, ನಿಮ್ಮ ಧಾರ್ಮಿಕ ನಂಬಿಕೆ ಸತ್ಯ ಇರಬಹುದು. ಆದರೆ ನಮ್ಮ ವೈಚಾರಿಕತೆ, ಬೌದ್ದಿಕ ಪ್ರಪಂಚದ ಸತ್ಯ ಎಂದೆಂದಿಗೂ ಅಲ್ಲ. ಅದಕ್ಕೆ ಸಾಕ್ಷಿಯೂ ಇಲ್ಲ."

ಸಂದರ್ಶನದ ವಿಡಿಯೋ ಲಿಂಕ್ ಟ್ವೀಟ್ ಮಾಡಿದ ನಟ
ಈ ಸಂದರ್ಶನದ ವಿಡಿಯೋ ಲಿಂಕ್ ಅನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿರುವ ನಟ ಚೇತನ್, "ಇತ್ತೀಚಿನ ಸಂದರ್ಶನವೊಂದರಲ್ಲಿ, ತಿರುಪತಿ ಮೂಲತಃ ಬೌದ್ಧ ಮಂದಿರ ಎಂದು ನಾನು ಹೇಳಿದ್ದೇನೆ. ಕೆ ಜಮನದಾಸ್ ಅವರು 'ತಿರುಪತಿ ಬಾಲಾಜಿ ಮೂಲತಃ ಬೌದ್ಧ ಮಂದಿರ' (ಏಪ್ರಿಲ್ 14, 2001) ಎಂಬ ತಮ್ಮ ಪುಸ್ತಕದಲ್ಲಿ ಈ ಹೇಳಿಕೆಯನ್ನು ಮಾನ್ಯ ಮಾಡಿದ್ದಾರೆ. ಇತಿಹಾಸಕಾರರ ಪ್ರಕಾರ, ದೇವಾಲಯಗಳು ಎಂದಿಗೂ ವೈದಿಕ ಸಂಸ್ಥೆಗಳಾಗಿರಲಿಲ್ಲ - ಅವುಗಳನ್ನು ಬೌದ್ಧ ಧರ್ಮದಿಂದ ವಶಪಡಿಸಿಕೊಳ್ಳಲಾಗಿದೆ/ ಆಕ್ರಮಣ ಮಾಡಲಾಗಿದೆ" ಎಂದು ಬರೆದುಕೊಂಡಿದ್ದಾರೆ.
Post a Comment

Previous Post Next Post